ಬೆಂಗಳೂರು: ಶತಕದಾಟಿ ನಾಗಾಲೋಟದಲ್ಲಿರುವ ಪೆಟ್ರೋಲ್, ಡೀಸೆಲ್ ದರ, ಸರಕು-ಸಾಗಣೆ ಹೆಚ್ಚಳ, ಅತಿವೃಷ್ಟಿಯಿಂದ ಬೆಳೆ ಹಾನಿ ಹೀಗೆ ಹತ್ತಾರು ಕಾರಣಗಳಿಂದ ದೇಶಾದ್ಯಂತ ಜನಜೀವನ ಭಾರಿ ದುಬಾರಿಯಾಗಿದೆ. ತರಕಾರಿಯಿಂದ ಹಿಡಿದು ತೈಲದವರೆಗೆ ಎಲ್ಲ ಬೆಲೆಗಳೂ ಗಗನಕ್ಕೇರಿರುವುದು ಈ ಬಾರಿಯ ಹಬ್ಬದ ಖುಷಿ, ಉತ್ಸಾಹವನ್ನು ಕೊಂಚ ತಣ್ಣಗೆ ಮಾಡಿದೆ. ನವರಾತ್ರಿ ಸಂದರ್ಭದಲ್ಲಿ , ಹೂ,ಹಣ್ಣುಗಳ ಬೆಲೆ ಏರಿಕೆಯಾಗಿತ್ತು. ಆದರೆ ಹಬ್ಬ ಕಳೆದರೂ ಬೆಲೆ ಇಳಿಕೆಯಾಗಿಲ್ಲ, ಬದಲಿಗೆ ಮತ್ತಷ್ಟು ಏರುಮುಖವಾಗಿದೆ. ಕೋಲ್ಕೊತಾ ಸೇರಿದಂತೆ ಹಲವು ನಗರಗಳಲ್ಲಿ ಟೊಮೇಟೊ ಬೆಲೆ 100 ರೂ.ಗೆ ಏರಿದೆ. ಕೋಲ್ಕೊತಾ, ದಿಲ್ಲಿ, ಮುಂಬಯಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈರುಳ್ಳಿ ಬೆಲೆಯೂ ಕೆ.ಜಿ.ಗೆ 50-60 ರೂ.ಗೆ ಜಿಗಿದಿದೆ. ಅತಿವೃಷ್ಟಿ ಹೊಡೆತ ಕಳೆದ ಎರಡು ತಿಂಗಳುಗಳಿಂದ ಭಾರಿ ಮಳೆಯ ಪರಿಣಾಮ ಈರುಳ್ಳಿ, ಆಲೂಗಡ್ಡೆ, ಟೊಮೇಟೊ ಹಾಗೂ ಸೊಪ್ಪಿನ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಮಳೆಯ ಹೊಡೆತಕ್ಕೆ ಸಿಲುಕಿ ತರಕಾರಿ ಬೆಳೆ ಹಾಳಾಗಿದೆ. ಅನ್ಯ ರಾಜ್ಯಗಳಿಂದಲೂ ತರಕಾರಿ ಬರುತ್ತಿದ್ದರೂ ಡೀಸೆಲ್ ಬೆಲೆ ಏರಿಕೆಯಿಂದಾಗಿ ಸರುಕು ಸಾಗಣೆ ವೆಚ್ಚ ಹೆಚ್ಚಾಗಿದ್ದು, ಅದರ ನಷ್ಟವನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತಿದೆ. ಮತ್ತೊಂದೆಡೆ ವ್ಯಾಪಕ ಮಳೆ ಹಾಗೂ ತೇವಾಂಶದಿಂದ ಬೆಳೆ ನಷ್ಟವು ರೈತರಿಗೂ ಕೈಸುಟ್ಟಿದೆ. ಬೆಲೆ ಏರಿಕೆಯ ಲಾಭವು ಕೃಷಿಕರಿಗೆ ಸಿಗದಂತಾಗಿದೆ. ಮಳೆಯಿಂದ ಭತ್ತದ ಇಳುವರಿಯೂ ಶೇ. 10-15ರಷ್ಟು ಕಡಿಮೆಯಾಗಿದೆ. ಇದರಿಂದ ಅಕ್ಕಿ ಬೆಲೆಯೂ ಏರಿಕೆಯಾಗಿದೆ ಎಂದು ವರ್ತಕರು ಹೇಳಿದ್ದಾರೆ. ಸದ್ಯಕ್ಕೆ ಅಗ್ಗವಾಗದು ಈರುಳ್ಳಿ ಈರುಳ್ಳಿ ಬೆಲೆ ಕಡಿಮೆಯಾಗಬೇಕೆಂದರೆ ಹೊಸ ಬೆಳೆ ಬರಬೇಕು. ಆದರೆ ಮತ್ತೊಂದು ಫಸಲಿಗಾಗಿ ನವೆಂಬರ್ ಅಂತ್ಯದವರೆಗೂ ಕಾಯಬೇಕು. ಜೊತೆಗೆ ಮಳೆಯಿಂದ ಬೆಳೆಗೆ ಹಾನಿಯೂ ಬೆಳೆಯನ್ನು ವಿಳಂಬ ಮಾಡಿದೆ. ಹೀಗಾಗಿ ಸದ್ಯಕ್ಕೆ ಈರುಳ್ಳಿ ಬೆಲೆ ಇಳಿಕೆ ಸಾಧ್ಯತೆಯಿಲ್ಲ ಎಂದು ಭಾರತೀಯ ತರಕಾರಿ ಬೆಳೆಗಾರರ ಸಂಘದ ಅಧ್ಯಕ್ಷ ಶ್ರೀರಾಮ್ ಗಧಾವೆ ಹೇಳಿದ್ದಾರೆ. ಬೆಂಗಳೂರಲ್ಲಿ ಚಿಲ್ಲರೆ ದರ (ಕೆ.ಜಿ.ಗಳಲ್ಲಿ)
- ಬೀನ್ಸ್- 60 ರೂ.
- ಟೊಮೇಟೊ -40 ರೂ.
- ಮೂಲಂಗಿ -60 ರೂ.
- ಕೊತ್ತಂಬರಿ ಸೊಪ್ಪು ಕಂತೆ -50 ರೂ
from India & World News in Kannada | VK Polls https://ift.tt/3jHJrbX