ಹೊಸದಿಲ್ಲಿ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 160ರ ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 35 ರನ್ ಗಳಿಸಿ ತಂಡದ ಎಂಟು ವಿಕೆಟ್ ಗೆಲುವಿಗೆ ನೆರವಾಗಿದ್ದ ಅವರನ್ನು ಭಾರತದ ಮಾಜಿ ಕ್ರಿಕೆಟಿಗ ಶ್ಲಾಘಿಸಿದ್ದಾರೆ. ಬುಧವಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ನಲುಗಿ ನಿಗದಿತ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 134 ರನ್‌ಗಳಿಗೆ ಸೀಮಿತವಾಯಿತು. ಬಳಿಕ ಸುಲಭ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 17.5 ಓವರ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು 139 ರನ್ ಗಳಿಸಿ ಸುಲಭವಾಗಿ ಗೆಲುವು ಪಡೆಯಿತು. ಆ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೆ ಮರಳಿತು. ಪಂದ್ಯ ಮುಗಿದ ಬಳಿಕ ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಚರ್ಚೆ ನಡೆಸಿದ್ದ ಸಂಜಯ್ ಮಾಂಜ್ರೇಕರ್, ದಿಗ್ಗಜ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್‌ಗೆ ಯುವ ಪ್ರತಿಭೆ ರಿಷಭ್ ಪಂತ್ ಅವರನ್ನು ಹೋಲಿಕೆ ಮಾಡಿದ್ದಾರೆ. ಒಂದು ಕಡೆ ಸೆಹ್ವಾಗ್ ಬ್ಯಾಟಿಂಗ್‌ನಲ್ಲಿ ಸಿಡಿಯುತ್ತಿದ್ದರೆ, ಮತ್ತೊಂದು ಕಡೆ ದ್ರಾವಿಡ್ ಹಾಗೂ ಸಚಿನ್ ರನ್ ಹೊಳೆ ಹರಿಸುತ್ತಿದ್ದರು. ಏನೇ ಆಗಲಿ ಸೆಹ್ವಾಗ್ 'ನಜಾಫ್‌ಗಢದ ನವಾಬ್' ಎಂದು ಬಣ್ಣಿಸಿದ್ದಾರೆ. ಅವರ ರೀತಿ ರಿಷಭ್ ಪಂತ್ ಇದೀಗ ಟ್ರೈಲ್‌ಬ್ಲೇಝರ್ ಆಗಿದ್ದಾರೆ ಎಂದು ಸಂಜಯ್ ಮಾಂಜ್ರೇಕರ್ ಇದೇ ವೇಳೆ ಎಡಗೈ ಬ್ಯಾಟ್ಸ್‌ಮನ್ ಅನ್ನು ಗುಣಗಾನ ಮಾಡಿದ್ದಾರೆ. "ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ಅವರ ಜೊತೆ ಓಪನಿಂಗ್‌ಗೆ ಬರುತ್ತಿದ್ದ ವಿರೇಂದ್ರ ಸೆಹ್ವಾಗ್ ಎದುರಾಳಿ ಬೌಲರ್‌ಗಳಿಗೆ ಮುಲಾಜಿಲ್ಲದೆ ದಂಡಿಸುತ್ತಿದ್ದರು. ಅವರ ಬ್ಯಾಟಿಂಗ್ ವಿಭಿನ್ನವಾಗಿರುತ್ತಿತ್ತು. ಸಿಕ್ಸರ್ ಮೂಲಕ ಶತಕ, ಸಿಕ್ಸರ್ ಮೂಲಕ ದ್ವಿಶತಕ ಹಾಗೂ ಸಿಕ್ಸರ್ ಮೂಲಕವೇ ತ್ರಿಶತಕ ಪೂರ್ಣಗೊಳಿಸುತ್ತಿದ್ದ ಸೆಹ್ವಾಗ್ ಬ್ಯಾಟಿಂಗ್ ಶೈಲಿ ನಿಜಕ್ಕೂ ಅದ್ಭುತ," ಎಂದು ಮಾಂಜ್ರೇಕರ್ ಮಾಜಿ ಆರಂಭಿಕನನ್ನು ಶ್ಲಾಘಿಸಿದ್ದಾರೆ. "ವಿರೇಂದ್ರ ಸೆಹ್ವಾಗ್ ಅವರ ಇಂಥಾ ಬ್ಯಾಟಿಂಗ್ ಅನ್ನು ನಾವು ಟೆಸ್ಟ್ ಕ್ರಿಕೆಟ್‌ನಲ್ಲಿ ನೋಡುತ್ತಿದ್ದೆವು. ಸೆಹ್ವಾಗ್ ಅವರ ರೀತಿಯ ಸ್ಪೋಟಕ ಬ್ಯಾಟಿಂಗ್ ಅನ್ನು ನಾವು ಈಗಿನ ತಲೆಮಾರಿನಲ್ಲಿ ರಿಷಭ್ ಪಂತ್‌ರಲ್ಲಿ ನೋಡುತ್ತಿದ್ದೇವೆ. ಪಂತ್ ಕೂಡ ಅದೇ ಹಾದಿಯಲ್ಲಿ ಬೌಂಡರಿ ಹಾಗೂ ಸಿಕ್ಸರ್ ಸಿಡಿಸುತ್ತಿದ್ದಾರೆ. ಹಾಗಾಗಿ, ಈ ತಲೆಮಾರಿನ ಟ್ರೈಲ್‌ಬ್ಲೇಜರ್ ಪಂತ್ ಆಗಿದ್ದಾರೆ," ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಿಷಭ್ ಪಂತ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಪೂರ್ವ ಯೋಜಿತ ಎಂಬ ವಿಷಯವನ್ನು ಮಾಂಜ್ರೇಕರ್ ಇದೇ ವೇಳೆ ತಿಳಿಸಿದ್ದಾರೆ. "ಕಳೆದ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಪಂತ್ ಆಕ್ರಮಣಕಾರಿಯಾಗಿ ಆಡುವಲ್ಲಿ ವಿಫಲರಾಗಿದ್ದರು. ಆದರೆ, ಈಗಿನ ಪಂದ್ಯದಲ್ಲಿಯೂ ಅವರು ಅದೇ ರೀತಿ ಪ್ರಯತ್ನ ನಡೆಸಿದ್ದರು ಹಾಗೂ ಎಲ್ಲಾ ಶಾಟ್‌ಗಳನ್ನು ಭಯಮುಕ್ತವಾಗಿ ಹಾಗೂ ಯಾವುದೇ ಗೊಂದಲವಿಲ್ಲದೆ ಪೂರ್ಣಗೊಳಿಸಿದ್ದಾರೆ. ಇದೆಲ್ಲವನ್ನೂ ನೋಡುತ್ತಿದ್ದರೆ, ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಪೂರ್ವ ಯೋಜಿತ ಎಂದೆನಿಸುತ್ತಿದೆ," ಎಂದು ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3AzMOI5