ಉದಿಯಂಡ ಜಯಂತಿ ಮಂದಣ್ಣ ಮಡಿಕೇರಿಜಗದೀಶ್ ಜೋಡುಬೀಟಿ ಗೋಣಿಕೊಪ್ಪಲು ಮಡಿಕೇರಿ: ಕೊರೊನಾ ಕಾರಣಕ್ಕೆ ಇತಿಹಾಸ ಪ್ರಸಿದ್ಧ ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾವನ್ನು ಸಾಂಕೇತಿಕವಾಗಿ, ಸಾಂಪ್ರದಾಯಕ್ಕೆ ಚ್ಯುತಿ ಬಾರದಂತೆ ಆಚರಿಸಲು ಜಿಲ್ಲಾಡಳಿತ ಸೂಚಿಸಿದ್ದರೂ ವ್ಯಾಪಾರೋದ್ಯಮ, ಚೇತರಿಸಿಕೊಳ್ಳುವ ನಿರೀಕ್ಷೆ ಮೂಡಿಸಿದೆ. ಜಿಲ್ಲೆಯ ಆರ್ಥಿಕ ಪುನಶ್ಚೇತನ ದೃಷ್ಟಿಯಿಂದ ವಿಜೃಂಭಣೆಯ ದಸರಾ ಆಚರಣೆಗೂ ಹಲವರು ಆಸಕ್ತಿ ತೋರಿಸುತ್ತಿದ್ದಾರೆ. ಪ್ರಕೃತಿ ವಿಕೋಪ, ಕೊರೊನಾದಿಂದ ಜಿಲ್ಲೆಯ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಪ್ರಸ್ತುತ ಸಾಲಿನಲ್ಲಿ ಕೊರೊನಾ ನಡುವೆಯೂ ನಡೆಯುವ ದೊಡ್ಡ ಹಬ್ಬ ದಸರ. ಈ ಹಿನ್ನೆಲೆ ವ್ಯಾಪಾರೋದ್ಯಮಿಗಳು, ಸಣ್ಣಪುಟ್ಟ ವ್ಯಾಪಾರಿಗಳು ಸೇರಿದಂತೆ ಹಲವು ಮಂದಿ ದಸರೆಯಿಂದ ಆರ್ಥಿಕತೆಗೆ ಅನುಕೂಲವಾಗಲಿದೆ. ನೆಲಕಚ್ಚಿರುವ ವ್ಯಾಪಾರೋದ್ಯಮ ದಸರೆ ಕಾರಣದಿಂದಾದರೂ ತುಸು ಚೇತರಿಸಿಕೊಳ್ಳಲಿ ಎಂಬ ಅಶಾಭಾವನೆ ಹೊಂದಿದ್ದಾರೆ. ಇದೀಗ ಜಿಲ್ಲೆಯಲ್ಲಿ ವೀಕೆಂಡ್ ಲಾಕ್‌ಡೌನ್ ತೆರವುಗೊಳಿಸಿರುವ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ದಸರೆ ಸಂದರ್ಭದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚುವುದರಿಂದ ಪ್ರವಾಸೋದ್ಯಮದ ಚೇತರಿಕೆ ನಿರೀಕ್ಷೆಯೂ ಇದೆ. ಮತ್ತೊಂದು ಕಡೆಯಲ್ಲಿ ಗೋಣಿಕೊಪ್ಪಲಿ ದಸರಾ ಜನೋತ್ಸವ ಈ ಬಾರಿಯೂ ಕೋವಿಡ್ ನೆಪದಲ್ಲಿ ಸರಳ ರೀತಿಯಲ್ಲಿ ಅಚರಣೆಗೆ ಸಮಿತಿ ಚಿಂತನೆ ಹರಿಸಿದ್ದರೂ ಜನ ಸಾಮಾನ್ಯರು ವಿಜೃಂಭಣೆಯ ನಿರೀಕ್ಷೆಯಲ್ಲಿದ್ದಾರೆ. ಧಾರ್ಮಿಕ ಕಾರ್ಯದೊಂದಿಗೆ ಚಾಮುಂಡೇಶ್ವರಿ ದೇವಿಯ ಪೂಜೆ ನಡೆಸಿ ಈ ಬಾರಿಯ ನಲವತ್ತ್ಮೂರನೇ ವರ್ಷದ ದಸರಾ ಆಚರಣೆಗೆ ಭರದ ಸಿದ್ಧತೆ ನಡೆದಿದೆ. ಈ ಸಂಬಂಧ ಕಾವೇರಿ ದಸರಾ ಸಮಿತಿಯ ಸಿ.ಕೆ.ಬೋಪ್ಪಣ್ಣ ನೇತೃತ್ವದಲ್ಲಿ ರಾಮಕೃಷ್ಣ, ಜಿಮ್ಮ ಸುಬ್ಬಯ್ಯ ಮತ್ತಿತರರು ಬೆಂಗಳೂರಿನಲ್ಲಿ ಇರುವ ಶಾಸಕ ಕೆ.ಜಿ.ಬೋಪಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗೋಣಿಕೊಪ್ಪಲು ದಸರಾಕ್ಕೆ 25 ಲಕ್ಷ ರೂ. ಅನುದಾನದ ಬೇಡಿಕೆಯನ್ನೂ ಮುಂದಿಡಲಾಗಿದೆ. ಅನುದಾನ ಹೆಚ್ಚು ದೊರೆತರೆ ಸ್ಥಳೀಯ ಪ್ರತಿಭೆಗಳ ಕಾರ್ಯಕ್ರಮಗಳಿಗೆ ವೇದಿಕೆ ನಿರ್ಮಿಸುವ ಚಿಂತನೆಯಲ್ಲಿ ಸಮಿತಿ ಯೋಜನೆ ರೂಪಿಸುತ್ತಿದೆ. ಕೊರೊನಾ ಕಾಡುವಿಕೆಯ ದಿನಗಳಿಂದ ಮಡುಗಟ್ಟಿದ ಮನಸ್ಸುಗಳು ಚೇತರಿಸಿಕೊಳ್ಳಲು ಈ ಬಾರಿಯ ದಸರಾ ಆಚರಣೆ ಉತ್ತಮ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುವ ವೇದಿಕೆಯಾಗಬಲ್ಲದು ಎನ್ನುವ ಭರವಸೆ ಸ್ಥಳೀಯರಲ್ಲಿದೆ. ಮಾಮೂಲಿಯಂತೆ ವಾಹನಗಳ ರ್ಯಾಲಿ, ಕವಿಗೋಷ್ಠಿ, ಮಹಿಳಾ ದಸರಾ, ಮಕ್ಕಳ ದಸರಾ, ಯುವದಸರಾ, ಕ್ರೀಡಾ ದಸರಾ ಹಾಗೂ ದಶಮಂಟಪಗಳ ಶೋಭಯಾತ್ರೆ ನಡೆದರೆ ದಸರಾ ಕಳೆಗಟ್ಟಲಿದೆ.
from India & World News in Kannada | VK Polls https://ift.tt/3oe76E1