ವೀರಪ್ಪ ಸಿದ್ದನಗೌಡರ (): ಕಳೆದೆರಡು ವರ್ಷದಿಂದ ಅತಿ ವೃಷ್ಟಿ ಹಾಗೂ ಅನಾ ವೃಷ್ಟಿಯಿಂದ ಸಮುದಾಯ ನಲುಗಿದೆ. ಆದರೆ ಈಗ ಪಟ್ಟಣದಾದ್ಯಂತ ಒಂದೆಡೆ ಅತಿಯಾದರೆ, ಮತ್ತೊಂದೆಡೆ ಆರು ವಾರಗಳಿಂದ ಮಳೆ ಬಾರದಿರುವುದು ರೈತರನ್ನು ಚಿಂತಿತರನ್ನಾಗಿ ಮಾಡಿದ್ದು, ಚನ್ನಾಗಿ ಬೆಳೆದಿದ್ದ ಬೆಳೆಗಳೆಲ್ಲಾ ಕಳೆ ಕಳೆದುಕೊಂಡು ಒಣಗುತ್ತಿವೆ. ಹೀಗಾಗಿ ರೈತರು ಮತ್ತೆ ಆಗಸದತ್ತ ಮುಖ ಮಾಡಿ ಮೇಘ ರಾಜನಿಗಾಗಿ ಕಾಯುತ್ತಿದ್ದಾರೆ. ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಸುರಿದ ಕಾರಣ ರೈತರ ಮೊಗದಲ್ಲಿ ಸಂತಸ ಮೂಡಿತ್ತು. ಉತ್ತಮ ಮಳೆ ಬಿದ್ದಿರುವುದರಿಂದ ರೈತರು ಬಿತ್ತನೆ ಮಾಡಿ ಬೆಳೆದ ಬೆಳೆಗೆ ಔಷಧ ಸಿಂಪರಣೆ, ಕಳೆ, ಗೊಬ್ಬರ ಎಲ್ಲವನ್ನೂ ಮಾಡಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರ ಆಸೆಗೆ ತಣ್ಣೀರೆರಚಿದಂತಾಗಿದೆ. ಬಿಟಿ ಹತ್ತಿ ಕಾಯಿ ಕಟ್ಟುವ ಹಂತದಲ್ಲಿದ್ದು ಹಾಗೂ ಗೋವಿನ ಜೋಳ ಕಾಳು ಕಟ್ಟುವ ಹಂತದಲ್ಲಿದ್ದು, ಮಳೆಯ ಅವಶ್ಯಕತೆ ಇದೆ. ಒಂದು ವೇಳೆ ಮಳೆ ಬಾರದಿದ್ದಲ್ಲಿ ಬೆಳೆಗಳು ಸಂಪೂರ್ಣ ಬಾಡುವ ಮೂಲಕ ನೆಲ ಕಚ್ಚುವ ಆತಂಕ ರೈತರಲ್ಲಿ ಮನೆ ಮಾಡಿದೆ. ಬಾಡಿದ ಬೆಳೆಗಳು: ಒಂದು ತಿಂಗಳಿಂದ ಬಾರದ ಮಳೆಗೆ ಬಿಟಿ ಹತ್ತಿ, ಹಬ್ಬು ಶೇಂಗಾ, ಗೋವಿನ ಜೋಳಗಳು ಬಾಡುತ್ತಿದ್ದು, ತಕ್ಷಣ ಮಳೆ ಬಾರದಿದ್ದಲ್ಲಿ ಸಂಪೂರ್ಣ ಒಣಗಿ ಹೋಗುವ ಭಯ ರೈತರಲ್ಲಿಅಕ್ಷರಶಃ ಚಿಂತೆಯ ಕಡಲಲ್ಲಿ ಮುಳುಗಿಸಿದೆ. ಹೀಗಾಗಿ, ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿ ಕೃಷಿಕರು ಕಂಗಾಲಾಗಿದ್ದಾರೆ. ಬೆಳಗಳಿಗೆ ಅಧಿಕ ಖರ್ಚು: ಉತ್ತಮವಾಗಿ ಸುರಿದ ಭಾರಿ ಮಳೆಯಿಂದ ರೈತರು ಬೆಳೆಗಳಿಗೆ ಔಷಧ, ಗೊಬ್ಬರ, ಕಳೆ, ಕೂಲಿ ಸೇರಿದಂತೆ ಎಕರೆಗೆ ಅಂದಾಜು 15 ರಿಂದ 20 ಸಾವಿರ ರೂ. ಖರ್ಚು ಮಾಡಿದ್ದಾರೆ. ಮಳೆಯ ಕೊರತೆಯಿಂದ ಬೆಳೆಗಳು ಬಾಡುತ್ತಿದ್ದು, ಹೊಲದಲ್ಲಿನ ಬೆಳೆಗಳನ್ನು ನೋಡಲು ಮನಸ್ಸೇ ಆಗುತ್ತಿಲ್ಲ ಎಂದು ನೋವು ತೋಡಿಕೊಳ್ಳುತ್ತಾರೆ, ಕೃಷಿಕ ಚಂಬಣ್ಣಾ ಕತ್ತಿ. ಹಿಂಗಾರು ಮಳೆ ಹಿನ್ನಡೆ ಭೀತಿ: ಆರು ವಾರಗಳಿಂದ ಮಳೆ ಬಾರದಿರುವುದರಿಂದ ಹಿಂಗಾರು ಬೆಳೆಗಳಾದ ಕಡಲೆ, ಜೋಳ, ಗೋಧಿ ಹಾಗೂ ಕುಸುಬಿ ಬೆಳೆಗಳ ಬಿತ್ತನೆ ಕುಂಠಿತವಾಗುವ ಲಕ್ಷಣಗಳು ಈ ಭಾಗದಲ್ಲಿ ಕಂಡು ಬರುತ್ತಿವೆ. 'ಮುಂಗಾರು ಮಳೆ ಸಾಕಷ್ಟು ಸುರಿದ ಪರಿಣಾಮ ಬಿತ್ತನೆ ಮಾಡಿದ ಗೋವಿನ ಜೋಳಕ್ಕೆ ಸರಿಯಾಗಿ ಮಳೆ ಬಾರದೆ ಬೆಳೆಗಳು ಬೆಳೆಯದೆ ಬಾಡಿ ಹೋಗುತ್ತಿದ್ದು, ಹಿಂಗಾರು ಬೆಳೆಗಳ ಬಿತ್ತನೆಗೆ ಎಲ್ಲಿ ಕೈ ಕೊಡುತ್ತದೆಯೋ ಎಂಬ ಚಿಂತೆ ಮೂಡಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಕೃಷಿಕ ಈರಪ್ಪ ಬಾಗಣ್ಣವರ. 'ಗದಗ ಜಿಲ್ಲೆ ಮುಳಗುಂದ ಪಟ್ಟಣದ ಎರಡು ಮೂರು ಭಾಗದಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಹಸ್ತ ಮಳೆ ಆಗುವ ನಿರೀಕ್ಷೆಯಿದೆ. ಹಸ್ತ ಮಳೆ ಆದರೆ ಹಿಂಗಾರು ಬಿತ್ತನೆಗೆ ತುಂಬಾ ಅನುಕೂಲಕರವಾಗುತ್ತದೆ' ಎಂದು ಜಿಲ್ಲಾ ಮುಳಗುಂದದ ಸಹಾಯಕ ಕೃಷಿ ಅಧಿಕಾರಿ ಎಂ. ಬಿ. ಸುಂಕಾಪೂರ ಅಭಿಪ್ರಾಯಪಟ್ಟಿದ್ದಾರೆ.
from India & World News in Kannada | VK Polls https://ift.tt/3EVXK5F