ಬೆಂಗಳೂರು: ಇತಿಹಾಸದಲ್ಲಿ ಆಸ್ಟ್ರೇಲಿಯಾದ ಮಹಿಳಾ ತಂಡ ಸತತ 26 ಗೆಲುವಿನೊಂದಿಗೆ ನಡೆಸಿದ್ದ ವಿಶ್ವ ದಾಖಲೆಯ ಓಟಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದೆ. ಆಸ್ಟ್ರೇಲಿಯಾದ ಮೆಕೇನಲ್ಲಿರುವ ಹರುಪ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೈ ವೋಲ್ಟೇಜ್ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮಿಥಾಲಿ ರಾಜ್ ಸಾರಥ್ಯದ 2 ವಿಕೆಟ್‌ಗಳ ರೋಚಕ ಜಯ ದಾಖಲಿಸುವ ಮೂಲಕ ಕಾಂಗರೂ ಪಡೆಯ ಸೊಕ್ಕಡಗಿಸಿತು. ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಗೆದ್ದು ಟ್ರೋಫಿ ಗೆಲುವನ್ನು ಖಾತ್ರಿ ಪಡಿಸಿಕೊಂಡಿತ್ತು. ಬಳಿಕ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಗೆಲುವಿಗಾಗಿ ಹೋರಾಟ ನಡೆಸಿದ ಭಾರತ ತಂಡ ಕಾಂಗರೂ ಪಡೆಯ ವಿಶ್ವ ದಾಖಲೆ ಓಟಕ್ಕೆ ಅಂತ್ಯ ಹಾಡಿದೆ. ಮೊದಲ ಮತ್ತು 2ನೇ ಒಡಿಐ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಕ್ರಮವಾಗಿ 9 ವಿಕೆಟ್ ಮತ್ತು 5 ವಿಕೆಟ್‌ಗಳ ಜಯ ದಾಖಲಿಸಿತ್ತು. ಆಸ್ಟ್ರೇಲಿಯಾ ಸವಾಲಿನ ಮೊತ್ತಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡ ಭಾರತದ ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ (37ಕ್ಕೆ 3) ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿ, ತನ್ನ ಪಾಲಿನ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 264 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಆಸ್ಟ್ರೇಲಿಯಾ ಪರ ಬೆತ್ ಮೂನಿ (52) ಮತ್ತು ಆಷ್ಲೇ ಗಾರ್ಡ್ನರ್ (67) ಅರ್ಧಶತಕಗಳನ್ನು ಭಾರಿಸಿ ಆರಂಭಿಕ ಆಘಾತ ಕಂಡಿದ್ದ ತಂಡಕ್ಕೆ ಆಸರೆಯಾದರು. ಮೂರು ವಿಕೆಟ್ ಪಡೆದ ಜೂಲನ್ ಗೋಸ್ವಾಮಿ, ಇದೇ ವೇಳೆ ವೃತ್ತಿ ಬದುಕಿನಲ್ಲಿ ಒಟ್ಟು 600 ವಿಕೆಟ್‌ಗಳ ಮೈಲುಗಲ್ಲು ದಾಟಿದರು. 38 ವರ್ಷದ ಅನುಭವಿ ಬೌಲರ್‌ಗೆ ಪಂದ್ಯ ಶ್ರೇಷ್ಠ ಗೌರವವೂ ಒಲಿಯಿತು. ರೋಚಕ ರನ್ ಚೇಸ್‌ನಲ್ಲಿ ಭಾರತಕ್ಕೆ ಜಯಬಳಿಕ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಭರ್ಜರಿ ಆರಂಭ ಸಿಕ್ಕಿತು. ಓಪನರ್‌ಗಳಾದ ಶಫಾಲಿ ವರ್ಮಾ (56) ಮತ್ತು ಸ್ಮೃತಿ ಮಂಧಾನಾ (22) ಮೊದಲ ವಿಕೆಟ್‌ಗೆ 59 ರನ್ ಸೇರಿಸಿ ಭದ್ರ ಅಡಿಪಾಯ ಹಾಕಿದರು. ಬಳಿಕ ಬ್ಯಾಟಿಂಗ್‌ಗೆ ಬಂದ ಯುವ ಪ್ರತಿ ಯಾಸ್ತಿಕಾ ಭಾಟಿಯಾ 69 ಎಸೆತಗಳಲ್ಲಿ 64 ರನ್ ಚೆಚ್ಚಿ ಔಟಾದರು. ಇದಾದ ಬಳಿಕ ಭಾರತ ತಂಡ ಹಠಾತ್ ಕುಸಿತ ಕಂಡರೂ, ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ವರ್ಮಾ (31) ಮತ್ತು ಸ್ನೇಹಾ ರಾಣಾ (30) ಭರ್ಜರಿ ಬ್ಯಾಟಿಂಗ್ ನಡೆಸಿ ಭಾರತದ ಜಯದ ಹಾದಿ ಸುಲಭವನ್ನಾಗಿಸಿದರು. ಅಂತಿಮವಾಗಿ ಇನ್ನು 3 ಎಸೆತಗಳು ಬಾಕಿ ಇರುವಾಗ ಭಾರತ ಜಯದ ನಗೆ ಬೀರಿತು. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇದೀಗ ಏಕೈಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಪೈಪೋಟಿ ನಡೆಸಲಿದ್ದು, ಸೆಪ್ಟೆಂಬರ್ 30ರಿಂದ ಅಕ್ಟೋಬರ್ 3ರವರೆಗೆ ಈ ಪಂದ್ಯ ನಡೆಯಲಿದೆ. ಸಂಕ್ಷಿಪ್ತ ಸ್ಕೋರ್‌ಆಸ್ಟ್ರೇಲಿಯಾ ಮಹಿಳಾ ತಂಡ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 264 ರನ್ (ಎಲೀಸ್ ಪೆರಿ 26, ಬೆತ್ ಮೂನಿ 52, ಆಷ್ಲೇ ಗಾರ್ಡ್ನರ್ 67, ತಹಿಲಾ ಮೆಗ್ರಾತ್ 47; ಜೂಲನ್ ಗೋಸ್ವಾಮಿ 37ಕ್ಕೆ 3, ಪೂಜಾ ವಸ್ತ್ರಕಾರ್ 46ಕ್ಕೆ 3, ಸ್ನೇಹಾ ರಾಣಾ 56ಕ್ಕೆ 1). ಭಾರತ ಮಹಿಳಾ ತಂಡ: 49.3 ಓವರ್‌ಗಳಲ್ಲಿ 8 ವಿಕೆಟ್‌ಗೆ 266 ರನ್ (ಶಫಾಲಿ ವರ್ಮಾ 56, ಸ್ಮೃತಿ ಮಂಧಾನಾ 22, ಯಾಸ್ತಿಕಾ ಭಾಟಿಯಾ 64, ದೀಪ್ತಿ ವರ್ಮಾ 31, ಸ್ನೇಹಾ ರಾಣಾ 30; ಅನಾಬೆಲ್ ಸದರ್ಲ್ಯಾಂಡ್ 30ಕ್ಕೆ 3).
- ಆಸ್ಟ್ರೇಲಿಯಾದ ಪ್ರಮುಖ ದಾಖಲೆಗಳಿಗೆ ಭಾರತ ಬ್ರೇಕ್ ಹಾಕಿದ ಇತಿಹಾಸದ ವಿವರ
- ಸತತ 16 ಟೆಸ್ಟ್ ಪಂದ್ಯಗಳ ಗೆಲುವು (2001-2008)
- ಸತತ 9 ಟೆಸ್ಟ್ ಸರಣಿಗಳ ಗೆಲುವು (2008)
- ತಾಯ್ನಾಡಿನಲ್ಲಿ ಸತತ 18 ಒಡಿಐ ಪಂದ್ಯಗಳ ಗೆಲುವು (2016)
- ಗಬ್ಬಾ ಕ್ರೀಡಾಂಗಣದಲ್ಲಿ ಸತತ 31 ಪಂದ್ಯಗಳ ಗೆಲುವು (2021)
- ಒಡಿಐನಲ್ಲಿ ಸತತ 26 ಪಂದ್ಯಗಳ ಗೆಲುವು (2021)
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/39CtqOX