ಮಳೆಗಾಲದ ಸಿಪ್ಪೆಕೊಳೆ ಅಡಕೆಗೂ ಟೆಂಡರ್‌; ಎಲ್ಲ ಹಂತದಲ್ಲೂ ಮಾರುಕಟ್ಟೆ ವ್ಯವಸ್ಥೆ!

ಕೃಷ್ಣಮೂರ್ತಿ ಟಿ.ಕೆರೆಗದ್ದೆ ಶಿರಸಿ ಉತ್ತರ ಕನ್ನಡ: ಅಬ್ಬಬ್ಬಾ.. ತೋಟದಲ್ಲಿ ಎಷ್ಟೆಲ್ಲಾಅಡಕೆ ಹರಡಿ ಬಿದ್ದಿದೆ... ಮಳೆಗಾಲದಲ್ಲಿ ಇವೆಲ್ಲವನ್ನೂ ಹೆಕ್ಕಿ ತಂದು ಒಣಗಿಸೋದು, ಸಂಸ್ಕರಿಸೋದು ಹೇಗೆ? ಬುಡ, ಬಾಯಿ ಒಡೆದು ಬೀಳುವ ಅಡಕೆಯಂತೂ ಸಂಸ್ಕರಿಸಲೂ ಬರೋದಿಲ್ಲ...ಮಳೆಗಾಲದಲ್ಲಿ ಅಡಕೆಯೆಲ್ಲಾ ಸುಮ್ಮನೆ ಹಾಳಾಗಿ ಹೋಗ್ತವೆ... ಇವು ಮಳೆಗಾಲದಲ್ಲಿ ತೋಟದಲ್ಲಿ ಬೀಳುವ ಅಡಕೆಯ ಕುರಿತು ತೋಟಗಾರರ ಅಂಗಳದಲ್ಲಿ ಕೇಳಿ ಬರುವ ಸಂಕಟದ ಮಾತುಗಳು. ಆದರೆ ಈ ತೊಂದರೆಗೆ ಪರಿಹಾರ ದೊರೆಯುವ ಕಾಲ ಬಂದಿದೆ. ಇಲ್ಲಿನ ಕೆಲವು ಸಹಕಾರಿ ಸಂಘಗಳು ಮಳೆಗಾಲದಲ್ಲಿ ಬೀಳುವ ಸಿಪ್ಪೆ ಕೊಳೆ ಅಡಕೆ, ಬುಡ ಮತ್ತು ಬಾಯಿ ಒಡಕು ಅಡಕೆ, ಬತ್ತಡಿಕೆ, ಗೋಟಡಕೆ, ಹಸಿ ಸೇರಿ ಎಲ್ಲ ತರಹದ ಅಡಕೆಗೂ ಈಗ ವ್ಯವಸ್ಥೆ ಕಲ್ಪಿಸಿವೆ. ಈ ಮೂಲಕ ಎಲ್ಲ ಹಂತದಲ್ಲೂ ವ್ಯವಸ್ಥೆ ಕಲ್ಪಿಸುತ್ತಿವೆ. ರೈತರಿಗೆ ಸಂಸ್ಕರಣೆ ತಾಪತ್ರಯ ದೂರ ಮಾಡುತ್ತಿವೆ. ಮಳೆಗಾಲದಲ್ಲಿ ಗಾಳಿಯಿಂದ ಅಡಕೆ ಉದುರುತ್ತದೆ. ಅವೆಲ್ಲ ಕಾಲುವೆ, ಮಣ್ಣಿನಲ್ಲಿ ಹೂತು ಕೊಳೆಯುತ್ತವೆ. ಅದನ್ನು ಆರಿಸಿ ತಂದರೆ ಒಣಗಿಸಲು, ಸಂಸ್ಕರಿಸಲು ಆಗದು, ಸಿಪ್ಪೆಗೂಡಿ ಒಣಗಿಸಿದರೂ ಬೇಸಿಗೆಯಲ್ಲಿ ಸುಲಿಯುವ ಹೊತ್ತಿಗೆ ಪುಡಿಪುಡಿಯಾಗುತ್ತವೆ. ಹೀಗಾಗಿ ತೋಟದಲ್ಲಿ ಹಾಳಾಗಿ ಹೋಗುವುದೇ ಹೆಚ್ಚು. ಇನ್ನು ಅಲ್ಲಲ್ಲಿ ಬಾಯಿ, ಬುಡ ಒಡೆದು ಅಡಕೆ ಬೀಳುತ್ತದೆ. ಅದು ಪ್ರಯೋಜನವಿಲ್ಲ ಎಂದು ಹಾಗೆ ಬಿಡಲಾಗುತ್ತದೆ. ಇನ್ನು ಗೋಟಡಕೆ ಒಣಗಿಸುವ ತಲೆನೋವು ಬೆಳೆಗಾರರಿಗೆ ಎದುರಾಗುತ್ತದೆ. ಆದರೆ ಇದ್ಯಾವ ತಲೆಬಿಸಿಯಿಲ್ಲದೇ ತೋಟದಿಂದ ಆರಿಸಿ ತಂದು ನೇರವಾಗಿ ಟೆಂಡರ್‌ಗೆ ಹಾಕಬಹುದಾಗಿದೆ. ಈಗಾಗಲೇ ಕದಂಬ ಮಾರ್ಕೆಟಿಂಗ್‌ ಸೌಹಾರ್ದ ಸಹಕಾರಿ ಸಂಘ ಟೆಂಡರ್‌ ಆರಂಭಿಸಿದ್ದು ವಾರದಲ್ಲಿ ಎರಡು ದಿನ ನಡೆಸಲಿದೆ. ಟಿಎಸ್‌ಎಸ್‌ ಸಂಸ್ಥೆ ಸಹ ಮುಂದಿನ ವಾರದಿಂದ ಪ್ರತಿದಿನ ಟೆಂಡರ್‌ ವ್ಯವಸ್ಥೆ ಕಲ್ಪಿಸುತ್ತಿದೆ. ಇನ್ನು ಗ್ರಾಮೀಣ ಕೆಲ ಸಹಕಾರಿ ಸಂಘಗಳು ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿವೆ. ಸಹಕಾರಿ ಸಂಘಗಳ ಹೊಸ ಹೆಜ್ಜೆಅಡಕೆಗೆ ಬಂಗಾರದ ಬೆಲೆ ಬಂದಿದೆ. ಒಂದಡಿಕೆ ಹಾಳು ಮಾಡುವಂತಹ ಕಾಲ ಇದಲ್ಲ. ಹಿಂದೆಲ್ಲ ಸಂಸ್ಕರಿಸಿದ ಕೆಂಪಡಿಕೆ, ಚಾಲಿಯನ್ನು ಮಾತ್ರ ಮಾರುಕಟ್ಟೆಗೆ ತರಲಾಗುತ್ತಿತ್ತು. ಕಳೆದ ದಶಕದಿಂದ ಕೊನೆ ಕೊಯ್ಲು ಹಂಗಾಮಿನಲ್ಲಿ ಕೊಯ್ದ ಹಸಿ ಅಡಕೆ, ಗೋಟಡಕೆಗೆ ಟೆಂಡರ್‌ ವ್ಯವಸ್ಥೆ ಮಾಡಲಾಯಿತು. ಇದೀಗ ಸಹಕಾರಿ ಸಂಘಗಳು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮಳೆಗಾಲದಲ್ಲಿ ಬೀಳುವ ಎಲ್ಲ ಅಡಕೆಗೂ ಟೆಂಡರ್‌ ಖರೀದಿ ಸೌಲಭ್ಯ ಕಲ್ಪಿಸಿ ಬೆಳೆಗಾರರಿಗೆ ಅನುಕೂಲ ಕಲ್ಪಿಸುತ್ತಿವೆ. ಕದಂಬದಲ್ಲಿ 14 ಕ್ವಿಂಟಲ್‌ ಟೆಂಡರ್‌ ಕದಂಬ ಮಾರ್ಕೆಟಿಂಗ್‌ ಸಹಕಾರಿ ಸಂಸ್ಥೆ ಈಗಾಗಲೇ ಆರಂಭಿಸಿರುವ ಟೆಂಡರ್‌ನ ಮೊದಲ ದಿನ 14 ಕ್ವಿಂಟಲ್‌ ಸಿಪ್ಪೆಕೊಳೆ, ಗೋಟಡಕೆ ಮಾರಾಟವಾಗಿದೆ. ಸಿಪ್ಪೆಕೊಳೆ ಕ್ವಿಂಟಲ್‌ಗೆ 2509 ರೂ.ನಿಂದ 4699ರೂ., ಗೋಟು 4022ರೂ.ನಿಂದ 8022ರೂ.,ವರೆಗೆ ಬೆಲೆ ದೊರೆತಿದೆ. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಟೆಂಡರ್‌ ಇರಲಿದ್ದು ಎಲ್ಲ ತರಹದ ಅಡಕೆಯನ್ನೂ ತರಬಹುದಾಗಿದೆ ಎಂದು ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ಮಾಹಿತಿ ನೀಡಿದ್ದಾರೆ. ಟಿಎಸ್‌ಎಸ್‌ನಿಂದ ಬರುವ ವಾರದಿಂದ ಟೆಂಡರ್‌ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ಹಾಳಾಗುತ್ತಿದ್ದ ಅಡಕೆಗೂ ಬೆಲೆ ಸಿಗುವಂತಾಗಲಿದೆ. ರವೀಶ ಹೆಗಡೆ, ಪ್ರಧಾನ ವ್ಯವಸ್ಥಾಪಕ, ಟಿಎಸ್‌ಎಸ್‌, ಶಿರಸಿ


from India & World News in Kannada | VK Polls https://ift.tt/3ESl18v

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...