ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಂಡ ಹಿನ್ನೆಲೆಯಲ್ಲಿ ಗೋಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳು ಬರುತ್ತಿದ್ದು ಇದರ ಸಂರಕ್ಷಣೆ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಗೋವುಗಳ ಸಂರಕ್ಷಣೆಗಾಗಿ ಅನುದಾನ ಬಿಡುಗಡೆಗೆ ಬೇಡಿಕೆಗಳು ಗೋಶಾಲೆಗಳಿಂದ ಬರುತ್ತಿದ್ದು ಕಳೆದ ಒಂದು ವರ್ಷದಲ್ಲಿ 1.85 ಕೋಟಿ ಅನುದಾನವನ್ನು ನೀಡಲಾಗಿದೆ. ರಾಜ್ಯದಲ್ಲಿ ಅಧಿಕೃತವಾಗಿ 199 ಗೋಶಾಲೆಗಳಿಗೆ. ಈ ಪೈಕಿ 2021-22 ನೇ ಸಾಲಿನಲ್ಲಿ ಒಟ್ಟು 133 ಗೋಶಾಲೆಗಳಿಂದ ಅನುದಾನಕ್ಕಾಗಿ ಪ್ರಸ್ತಾವನೆ ಬಂದಿದೆ. ಪ್ರಸ್ತಾವಣೆ ಸಲ್ಲಿಸಿರುವ ಎಲ್ಲ 133 ಗೋಶಾಲೆಗಳಿಗೆ ರಾಜ್ಯ ಸರ್ಕಾರ 1,85,81,887 ಅನುದಾನವನ್ನು ಬಿಡುಗಡೆಗೊಳಿಸಿದೆ. ಈ ಪೈಕಿ ಪ್ರಮುಖವಾಗಿ ಬೆಳಗಾವಿಯ ಡಾ. ಶಿವಾನಂದ ಭಾರತಿ ಸ್ವಾಮೀಜಿಗಳ ಶಿವಯೋಗೀಶ್ವರ ಗೋಶಾಲೆಗೆ 1,21,072 ಹಾಗೂ ಸೋಮೇಶ್ವರ ಕಾಮದೇನು ಗೋಸೇವಾ ಸಂಸ್ಥೆಗೆ 1,14,586 ಲಕ್ಷ ಅನುದಾನ ನೀಡಲಾಗಿದೆ. ಅಲ್ಲದೆ ಉತ್ತರ ಕನ್ನಡ ಜಿಲ್ಲೆಯ ಅಮೃತದಾರ ಗೋಶಾಲೆಗೆ 2,16,200, ಅಮೃತದಾರ ( ಗೋಸ್ವರ್ಗ) ಸಿದ್ದಾಪುರ - 2,16,200 ಸೇರಿದಂತೆ ಅದೇ ಜಿಲ್ಲೆಯ ಇತರ ಗೋಶಾಲೆಗಳಿಗೂ ನೆರವು ಒದಗಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಗೋಶಾಲೆಗೆ 2,16,200, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾಮದೇನು ಗೋ ಶಾಲೆ -1,79,446 ಸೇರಿದಂತೆ ಒಟ್ಟು 12 ಗೋಶಾಲೆಗಳಿಗೆ ಅನುದಾನ ನೀಡಲಾಗಿದೆ. ಅದೇ ರೀತಿಯಲ್ಲಿ ಉಡುಪಿಯ ಗೋವರ್ಧನ ಗಿರಿ ಪೇಜಾವರ ಅದೋಕ್ಷಜ ಮಠದ ಗೋಶಾಲೆಗೂ 2,16,200 ಅನುದಾನ ನೀಡಲಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ಕಳೆದ ವರ್ಷ ಜಾರಿಗೆ ತಂದಿದೆ. ವಿಧಾನಮಂಡಲದಲ್ಲಿ ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕಾಯ್ದೆ ಪ್ರಕಾರ ಗೋವುಗಳ ಹತ್ಯೆ ಹಾಗೂ ಅಕ್ರಮ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಕ್ರಮ ಗೋವುಗಳ ಸಾಗಾಟ ಮತ್ತು ವಧೆ ಆಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಅಥವಾ ಆ ಜಿಲ್ಲೆ ಅಥವಾ ತಾಲೂಕಿನ ವ್ಯಾಪ್ತಿಯ ಪಶುಪಾಲನಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲು ಸೂಚಿಸಲಾಗಿದೆ. ಅಷ್ಟೇ ಅಲ್ಲದೆ, ಹಸುಗಳನ್ನು ಕೃಷಿ, ಪಶುಸಂಗೋಪನೆ ಉದ್ದೇಶಕ್ಕಾಗಿ ಸಾಗಣೆ ಮಾಡುವವರು ಸಾರಿಗೆ ದೃಢೀಕರಣ ಪತ್ರ, ಮಾಲೀಕತ್ವ ದಾಖಲೆ ಹಾಗೂ ಪಶು ಪ್ರಥಮ ಚಿಕಿತ್ಸಾ ಪರಿಕರಗಳನ್ನು ಹೊಂದಿರಬೇಕು. 15 ಕಿ.ಮೀ. ವ್ಯಾಪ್ತಿಯೊಳಗೆ ಎರಡು ಹಸು ಅಥವಾ ಅವುಗಳ ಕರುಗಳನ್ನು ಸಾಗಣೆ ಮಾಡಲು ಯಾವುದೇ ಸಾರಿಗೆ ದಾಖಲಾತಿಯ ಅಗತ್ಯ ಇಲ್ಲ ಎಂದು ತಿಳಿಸಲಾಗಿದೆ. ಹಸು ಸಾಗಣೆ ಮಾಡುವ ಪ್ರತಿ ಸರಕು ಸಾಗಣೆ ವಾಹನದ ಮೇಲೆ ಕೆಂಪು ಬಣ್ಣದ ದಪ್ಪ ಅಕ್ಷರದಲ್ಲಿ ರವಾನಿಸುವವರು, ಸ್ವೀಕರಿಸುವವರ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಬರೆದಿರಬೇಕು. ಜೊತೆಗೆ ಸಾಗಣೆ ಮಾಡುತ್ತಿರುವ ಹಸುಗಳ ಸಂಖ್ಯೆ, ತಳಿ ಹಾಗೂ ಪೂರೈಸಲಾದ ಆಹಾರ ಪ್ರಮಾಣವನ್ನು ಬರೆದಿರಬೇಕು. ಸಾಗಣೆ ಮಾಡುವ ಹಸುಗಳಿಗೆ ಯಥೇಚ್ಛವಾಗಿ ಹುಲ್ಲು ತಿನ್ನಿಸಿ, ನೀರು ಕುಡಿಸಿರಬೇಕು. ಯಥೇಚ್ಛ ಆಹಾರ, ಹುಲ್ಲು, ನೀರನ್ನು ಸಂಗ್ರಹಿಸಿರಬೇಕು. ಆರು ತಿಂಗಳ ಗರ್ಭಿಣಿ ಹಸುವನ್ನು ಸಾಗಣೆ ಮಾಡುವ ಹಾಗಿಲ್ಲ. ಆದರೆ, ಚಿಕಿತ್ಸೆ ಉದ್ದೇಶಕ್ಕಾಗಿ ಗರ್ಭಿಣಿ ಹಸುವನ್ನು ಸಾಗಣೆ ಮಾಡಬಹುದಾಗಿದೆ ಎಂದಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಂಡ ಬಳಿಕ ಗೋವುಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಅವುಗಳ ಸಂರಕ್ಷಣೆಗೂ ಆದ್ಯತೆ ನೀಡಬೇಕಾಗುತ್ತದೆ. ಆದರೆ ಸೂಕ್ತ ಅನುದಾನ ಸಿಗುತ್ತಿಲ್ಲ ಎಂಬ ಆರೋಪಗಳು ಕೂಡಾ ಕೇಳಿಬಂದಿದ್ದವು.
from India & World News in Kannada | VK Polls https://ift.tt/3CM7qh1