ಜಯಂತ್ ಗಂಗವಾಡಿ ಬೆಂಗಳೂರು , ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಗಳಲ್ಲಿ 2006ರ ನಂತರ ನೇಮಕಾತಿಗೊಂಡ ಒಟ್ಟು 577 ನೌಕರರಿಗೆ ಸಮರ್ಪಕವಾಗಿ ನೂತನ ಪಿಂಚಣಿ ಯೋಜನೆ(ಎನ್ಪಿಎಸ್) ಅಳವಡಿಕೆ ಮಾಡದ ಕಾರಣ, ಈ ಉದ್ಯೋಗಿಗಳಿಗೆ ಸುಮಾರು 2.83 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ (ಸಿಎಜಿ) ವರದಿಯಲ್ಲಿ ತಿಳಿಸಲಾಗಿದೆ. ಈ ಮೂರು ವಿವಿಗಳಲ್ಲಿ ಪಿಂಚಣಿ ನಿಧಿ ನಿಯಮ ಹಾಗೂ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ರಾಷ್ಟ್ರೀಯ ಪಿಂಚಣಿ ಪದ್ಧತಿಗೆ ಅನುಗುಣವಾಗಿ ಜಾರಿಗೊಳಿಸಿಲ್ಲ. ಹಾಗಾಗಿ, ಈ ನೌಕರರಿಗೆ ನಿವೃತ್ತಿ ನಂತರ ಆರ್ಥಿಕ ಭದ್ರತೆ ಹಾಗೂ ಸ್ಥಿರತೆ ಸಮರ್ಪಕವಾಗಿ ಲಭ್ಯವಾಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. 2006 ಏ.1ರ ನಂತರ ಸರಕಾರಿ ಸೇವೆಗೆ ನೇಮಕಗೊಂಡ ನೌಕರರಿಗೆ ರಾಜ್ಯ ಸರಕಾರ ಎನ್ಪಿಎಸ್ ಅಳವಡಿಸಿದೆ. ಇದಕ್ಕಾಗಿ 'ಪಿಂಚಣಿ ನಿಧಿ ನಿಯಮ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ)' ಸ್ಥಾಪಿಸಿರುವ ಸರಕಾರ, ದಾಖಲೆಗಳ ಪಾಲನೆ, ಲೆಕ್ಕಪತ್ರ, ಆಡಳಿತ ಮತ್ತು ಗ್ರಾಹಕರ ಸೇವೆಗಾಗಿ ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ (ಎನ್ಎಸ್ಡಿಎಲ್) ಜತೆ ಒಡಂಬಡಿಕೆ ಮಾಡಿಕೊಂಡಿದೆ. ರಾಜ್ಯ ಸರಕಾರ ತನ್ನ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಗಳು, ಮಂಡಳಿ, ನಿಗಮ, ಸೊಸೈಟಿ, ವಿಶ್ವವಿದ್ಯಾಲಯಗಳು, ಅನುದಾನಿತ ಸಂಸ್ಥೆಗಳಿಗೆ 2006ರ ಏ.1ರ ನಂತರ ನೇಮಕಗೊಂಡ ನೌಕರರಿಗೆ ಎನ್ಪಿಎಸ್ ಅನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಸೂಚಿಸಿದೆ. ಮತ್ತು, ಈ ಯೋಜನೆಗೆ ಉದ್ಯೋಗದಾತರ ವಂತಿಗೆಯನ್ನು ತಮ್ಮ ಸಂಪನ್ಮೂಲಗಳಿಂದಲೇ ಭರಿಸಬೇಕು ಎಂದು 2015ರ ಫೆಬ್ರವರಿಯಲ್ಲಿ ಆದೇಶಿಸಿದೆ. ಆದರೆ, ಎನ್ಪಿಎಸ್ ಅಳವಡಿಸಿಕೊಳ್ಳಲು ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ. ನೋಂದಣಿಯಾಗದ ವಿವಿಗಳು ಕರ್ನಾಟಕ ಜಾನಪದ ವಿವಿ, ಬೆಂಗಳೂರು ವಿವಿ, ಮಂಗಳೂರು ವಿವಿಗಳು ಎನ್ಎಸ್ಡಿಎಲ್ನಲ್ಲಿ ನೋಂದಣಿ ಮಾಡಿಕೊಂಡಿರಲಿಲ್ಲ. ಬೆಂಗಳೂರು ವಿವಿ 2020ರಲ್ಲಿ ನೋಂದಣಿ ಮಾಡಿಕೊಂಡಿದೆ. ಮಂಗಳೂರು ಮತ್ತು ಬೆಂಗಳೂರು ವಿವಿ ನೌಕರರು ಮತ್ತು ತಮ್ಮ ಪಾಲಿನ ವಂತಿಗೆಗಳನ್ನು ಎಲ್ಐಸಿಯ 'ನ್ಯೂ ಗ್ರೂಫ್ ಸೂಪರ್ ಆನ್ಯುಯಲ್ ಕ್ಯಾಷ್ ಅಕ್ಯುಮುಲೇಷನ್' ಯೋಜನೆಯಲ್ಲಿ ಹೂಡಿಕೆ ಮಾಡಿದ್ದವು. ಸರಕಾರದ ಸೂಚನೆಗಳು ಬರುವುದಕ್ಕೂ ಮುನ್ನ ಮಂಗಳೂರು ವಿವಿ ನೌಕರರಿಂದ ವೇತನ ಕಟಾವಣೆ ಪ್ರಾರಂಭಿಸಿತ್ತು. ಎನ್ಎಸ್ಡಿಎಲ್ನಲ್ಲಿ ನೋಂದಣಿ ಮಾಡಿಕೊಳ್ಳದೇ ನೌಕರರ ವೇತನ ಕಟಾವಣೆ ಮಾಡಿ, ಎರಡೂ ವಿವಿಗಳು ಎಲ್ಐಸಿಯಲ್ಲಿ ಹೂಡಿಕೆ ಮುಂದುವರೆಸಿದ್ದವು. 2020ರ ಎನ್ಎಸ್ಡಿಎಲ್ನ ಅಂಕಿಅಂಶಗಳ ಅನ್ವಯ, ಎರಡೂ ವಿವಿಗಳು ಹೂಡಿಕೆಗಿಂತ ಕಡಿಮೆ ಲಾಭಗಳಿಸಿರುವುದು ಕಂಡುಬಂದಿದೆ. ಇದರಿಂದಾಗಿ ಮಂಗಳೂರು ವಿವಿ ನೌಕರರಿಗೆ 16.13 ಲಕ್ಷ ಹಾಗೂ ಬೆಂಗಳೂರು ವಿವಿ ನೌಕರರಿಗೆ 189.57 ಲಕ್ಷ ರೂ. ನಷ್ಟವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ರಾಣಿ ಚನ್ನಮ್ಮ ವಿವಿ 2015ರ ಫೆಬ್ರವರಿಯಿಂದ 2016ರ ಸೆಪ್ಟೆಂಬರ್ವರೆಗೆ ನೌಕರರು ಮತ್ತು ತನ್ನ ಪಾಲಿನ ವಂತಿಗೆ ಹಣ ಸುಮಾರು 2.40 ಕೋಟಿ ರೂ.ಗಳನ್ನು ಹೂಡಿಕೆ ಮಾಡಿರಲಿಲ್ಲ. ಇದರಿಂದ ನೌಕರರಿಗೆ ಸುಮಾರು 29.62 ಲಕ್ಷ ರೂ. ನಷ್ಟ ಉಂಟಾಗಿದೆ.
from India & World News in Kannada | VK Polls https://ift.tt/3kOmZP6