ಪೆರ್ಲ: 2016ರ ವಿಧಾನಸಭೆ ಚುನಾವಣೆಯಲ್ಲಿ ಮಂಜೇಶ್ವರ ಅಭ್ಯರ್ಥಿ, ಈಗಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸೋಲಿಗೆ ಕಾರಣರಾಗಿದ್ದ ಪಕ್ಷೇತರ ಅಭ್ಯರ್ಥಿ ಕೆ. ಸುಂದರ ಭಾನುವಾರ ನಾಮಪತ್ರ ಹಿಂತೆಗೆದು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಎಣ್ಮಕಜೆ ಗ್ರಾಪಂನ ಪಡ್ರೆ ವಾಣಿನಗರ ಕುತ್ತಾಜೆ ಕಾಲೊನಿಯ ಕೆ. ಸುಂದರ ಬಿಎಸ್‌ಪಿ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಮಣಿಕಂಠ ರೈ ಹಾಗೂ ಮಂಡಲ ಕಾರ್ಯದರ್ಶಿ ಸುರೇಶ್ ವಾಣಿನಗರ ಸಮ್ಮುಖ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡ ಕೆ. ಸುಂದರ ಅವರು, ಕೆ. ಸುರೇಂದ್ರನ್ ಅವರು ಸಮರ್ಥ ನಾಯಕನಾಗಿದ್ದು ಶಬರಿಮಲೆ ಆಚಾರ ಅನುಷ್ಠಾನ ಸಂರಕ್ಷಣೆಗೆ ಹಗಲಿರುಳು ಶ್ರಮಿಸಿದ್ದಲ್ಲದೆ ಜೈಲುವಾಸ ಅನುಭವಿಸಿದ್ದಾರೆ. ಭ್ರಷ್ಟಾಚಾರ, ಹಗರಣ, ಸ್ವಜನ ಪಕ್ಷಪಾತದಲ್ಲಿ ಮುಳುಗಿರುವ ಎಡರಂಗ ಸರಕಾರದ ವಿರುದ್ಧ ಧ್ವನಿಯೆತ್ತಲು ಕಾಂಗ್ರೆಸ್ ವಿಫಲವಾಗಿದೆ. ಪಿಣರಾಯಿ ವಿಜಯನ್ ಸರಕಾರದ ಹಗರಣ ಬಯಲಿಗೆಳೆಯಲು ಕೆ. ಸುರೇಂದ್ರನ್ ಸಫಲರಾಗಿದ್ದಾರೆ. ಮಂಜೇಶ್ವರ ಕ್ಷೇತ್ರದಲ್ಲಿಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ. 2016ರ ಚುನಾವಣೆಯಲ್ಲಿ ಮಂಜೇಶ್ವರ ವಿಧಾನಸಭೆ ಕ್ಷೇತ್ರ ಬಿಜೆಪಿಯ ಭರವಸೆಯ ಕ್ಷೇತ್ರಗಳಲ್ಲಿ ಒಂದಾಗಿತ್ತು. ಆದರೆ ಜಿದ್ದಾಜಿದ್ದಿನ ಹೋರಾಟದಲ್ಲಿ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಕೇವಲ 89 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಆ ಚುನಾವಣೆಯಲ್ಲಿ ಕೆ.ಸುಂದರ ಅವರು ನಿರೀಕ್ಷೆಗೂ ಮೀರಿ 467 ಮತ ಗಳಿಸಿದ್ದು, ಕೆ. ಸುರೇಂದ್ರನ್ ಸೋಲಿಗೆ ಕಾರಣರಾಗಿದ್ದರು. 2016ರ ಚುನಾವಣೆಯಲ್ಲಿ ಕೇರಳ ದಕ್ಷಿಣದ ನೇಮಂ ವಿಧಾನಸಭೆ ಕ್ಷೇತ್ರದಲ್ಲಿಒ.ರಾಜಗೋಪಾಲನ್ ಗೆಲ್ಲುವ ಮೂಲಕ ಬಿಜೆಪಿ ಖಾತೆ ತೆರೆದಿತ್ತು. ನಾಮಪತ್ರ ಹಿಂತೆಗೆತಕ್ಕೆ ಮಾ.22 ಕೊನೆಯ ದಿನವಾಗಿದೆ. ಮಂಜೇಶ್ವರ ವಿದಾನಸಭೆ ಕ್ಷೇತ್ರದಲ್ಲಿ ಸಿಪಿಎಂನ ವಿ.ವಿ. ರಮೇಶನ್, ಬಿಜೆಪಿಯ ಕೆ. ಸುರೇಂದ್ರನ್, ಮುಸ್ಲಿಂ ಲೀಗ್‌ನ ಎ.ಕೆ.ಎಂ. ಅಶ್ರಫ್, ಅಣ್ಣಾ ಡೆಮಾಕ್ರೆಟಿಕ್ ಹ್ಯೂಮನ್ ರೈಟ್ಸ್ ಪಾರ್ಟಿ ಆಫ್ ಇಂಡಿಯಾದ ಪ್ರವೀಣ್ ಕುಮಾರ್, ಸ್ವತಂತ್ರ ಅಭ್ಯರ್ಥಿಗಳಾದ ಜಾನ್ ಡಿಸೋಜ, ಸುರೇಂದ್ರನ್ ಎಂ. ಚುನಾವಣಾ ಕಣದಲ್ಲಿದ್ದಾರೆ.
from India & World News in Kannada | VK Polls https://ift.tt/3cWZzBV