ವಿರಾಜಪೇಟೆ: ಸುಮಾರು 25 ವರ್ಷಗಳ ಹಿಂದೆ ನಡೆದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬರನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ವಿರಾಜಪೇಟೆ ತಾಲೂಕು ಹೆಮ್ಮಾಡು ಭೇತ್ರಿ ಗ್ರಾಮದ ಮಾಜಿ ಸೈನಿಕ, ಕುಂಬಾರರ ನಂಜಪ್ಪ (47) ಬಂಧಿತ ಆರೋಪಿ. ವಿರಾಜಪೇಟೆ ತಾಲೂಕಿನ ಭೇತ್ರಿ ಹೆಮ್ಮಾಡು ಗ್ರಾಮದಲ್ಲಿ 1996ರ ಆಗಸ್ಟ್‌ಲ್ಲಿ ಗೌರಿ-ಗಣೇಶ ಜಾತ್ರೆ ಉತ್ಸವದಲ್ಲಿ ಕ್ಷುಲ್ಲಕ ಕಾರಣಕ್ಕೆ ಕುಂಬಾರರ ನಂಜಪ್ಪ ಹಾಗೂ ಪೂಣಚ್ಚ ಸಹೋದರರು ಅಂಗಡಿ ಮಾಲೀಕ ತೊರೇರ ನಂಜಪ್ಪ ಅವರನ್ನು ಕೊಲೆ ಮಾಡಿದ್ದರು. ಪ್ರಕರಣದಲ್ಲಿ ಪೂಣಚ್ಚ ಪ್ರಮುಖ ಅಪರಾಧಿಯಾಗಿದ್ದು, ಇದೀಗ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ನಂಜಪ್ಪ ಸಹೋದರರಾದ ಬಿದ್ದಪ್ಪ ( ಮೃತರಾಗಿದ್ದಾರೆ) ಮತ್ತು ಕಾಳಪ್ಪ ಹಾಗೂ ಕುಶಾಲಪ್ಪ ಪ್ರಕರಣದಲ್ಲಿ ಖುಲಾಸೆಗೊಂಡಿದ್ದಾರೆ. ಪೂಣಚ್ಚ ಸಹೋದರರಿಗೂ ಹೆಮ್ಮಾಡುವಿನಲ್ಲಿ ದಿನಸಿ ಅಂಗಡಿ ನಡೆಸಿಕೊಂಡಿದ್ದ ತೊರೇರ ನಂಜಪ್ಪ ಅವರಿಗೂ ಉತ್ಸವ ನಡೆಯುತ್ತಿದ್ದ ವೇಳೆಯಲ್ಲಿ ಜಗಳವಾಗಿತ್ತು. ಈ ವೇಳೆ ಜಗಳ ತಾರಕ್ಕೇರಿ ಪೂಣಚ್ಚ ಸಹೋದರರು ಮಚ್ಚಿನಿಂದ ತೊರೇರ ನಂಜಪ್ಪ ಅವರನ್ನು ಕುತ್ತಿಗೆ ಭಾಗಕ್ಕೆ ಕಡಿದು ಕೊಲೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಮೃತರ ಸಹೋದರ ತೊರೇರ ಪೂಣಚ್ಚ ಅವರು ವಿರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯಲ್ಲಿ ದೂರು ದಾಖಲಿಸಿ, ಕೊಲೆ ಪ್ರಕರಣ ದಾಖಲು ಮಾಡಲಾಗಿತ್ತು. ಇದೀಗ ಬಂಧಿತ ಆರೋಪಿ ಕುಂಬಾರರ ನಂಜಪ್ಪ 1994ರಲ್ಲಿ ಸೈನ್ಯಕ್ಕೆ ಸೇರ್ಪಡೆಗೊಂಡು ಎರಡು ವರ್ಷ ಕಳೆದು ರಜೆಯಲ್ಲಿ ಮನೆಗೆ ಬಂದ ವೇಳೆಯಲ್ಲಿ ಈ ಕೊಲೆ ಕೃತ್ಯ ನಡೆದಿತ್ತು. ಪ್ರಕರಣದ ನಾಲ್ಕು ಅಪರಾಧಿಗಳು ಪತ್ತೆಯಾಗಿ ಶಿಕ್ಷೆ ವಿಧಿಸಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಕುಂಬಾರರ ನಂಜಪ್ಪ ತಲೆಮರೆಸಿಕೊಂಡಿದ್ದರು. ಎರಡು ವರ್ಷಗಳಿಂದ ಪ್ರಕರಣದ ಆರೋಪಿ ಬೆನ್ನು ಹತ್ತಿದ್ದ ಪೊಲೀಸರಿಗೆ ನಂಜಪ್ಪ ಬೆಂಗಳೂರಿನಲ್ಲಿ ನೆಲೆಸಿರುವ ಮಾಹಿತಿ ಸಿಕ್ಕಿತು. ಬೆಂಗಳೂರು ಪೊಲೀಸರ ನೆರವಿನಿಂದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರ ಆದೇಶದಂತೆ ನ್ಯಾಯಾಂಗ ಬಂಧನದಲ್ಲಿಡ ಲಾಗಿದೆ. ವಿರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್, ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಸಿದ್ದಲಿಂಗ ಭೀ. ಬಾನಸೆ, ಗೊಣಿಕೊಪ್ಪಲು ಠಾಣೆಯ ಎಎಸ್‌ಐ ಸುಬ್ರಮಣಿ, ಸಿಬ್ಬಂದಿಯಾದ ರಾಮಪ್ಪ ಬಿ.ಎಂ., ಚಂದ್ರಶೇಖರ್, ಎಂ. ನೆಹರುಕುಮಾರ್ ಮತ್ತು ಸಿ.ಡಿ.ಆರ್ ವಿಭಾಗದ ರಾಜೇಶ್ ಮತ್ತು ಗಿರೀಶ್ ಕಾರ್ಯಾಚರಣೆಯಲ್ಲಿದ್ದರು.
from India & World News in Kannada | VK Polls https://ift.tt/2Qfw32H