ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದ್ದು ರಸ್ತೆಗಿಳಿಯುವ ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದಾರೆ. ಪೊಲೀಸರ ಈ ಕ್ರಮಕ್ಕೆ ವಿರೋಧ ಪಕ್ಷದ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಮಾಡುವುದು ಸರಿ, ಆದರೆ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಬೇಕು. ಯುಗಾದಿ ಹಬ್ಬ ಇರುವ ಕಾರಣಕ್ಕಾಗಿ ಮಾರ್ಕೆಟ್‌ಗಳಲ್ಲಿ ತರಕಾರಿ, ಹಣ್ಣು ಖರೀದಿ ಮಾಡಲು ಹೊರಬಂದ ಜನರ ಮೇಲೆ ಲಾಠಿ ಚಾರ್ಜ್ ಮಾಡುವುದು ಸರಿಯಲ್ಲ ಎಂದರು. ಜನರಿಗೆ ಲಾಠಿ ಚಾರ್ಜ್ ಮಾಡುವ ಬದಲಾಗಿ ಕೊರೊನಾ ಕುರಿತಾಗಿ ಮನವರಿಕೆ ಮಾಡಬೇಕು, ಈ ವಿಚಾರವಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಲ್ಲಿ ಮಾತನಾಡಿದ್ದೇನೆ, ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದರು. ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಮಾಡಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಮುಂದಿನ ಸಮಸ್ಯೆಗೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದ್ದಾರೆ. ವಿವಾದಾತ್ಮಕ ವಿಧೇಯಕಗಳ ಮಂಡನೆಗೆ ವಿರೋಧವಿದೆ ಬಜೆಟ್ ಮೇಲೆ ಚರ್ಚೆ ಅಪೂರ್ಣ ಆಗಿದೆ. ಕಾಂಗ್ರೆಸ್, ಜೆಡಿಎಸ್ ಅಲ್ಲಿ ಇನ್ನೂ ಬಹಳಷ್ಟು ಜನ ಮಾತಾಡುವವರಿದ್ದಾರೆ. ಇಲಾಖಾ ಬೇಡಿಕೆಗಳ ಮೇಲೆ ಚರ್ಚೆ ಆಗಬೇಕಿದೆ. ಸಂವಿಧಾನದ ಚರ್ಚೆಗೆ ಹೆಚ್ಚು ಸಮಯ ಮೀಸಲಿಟ್ಟೆವು. ಅಲ್ಲದೆ, ಬೇರೆ ಕಲಾಪಗಳು ನಡೆದಿವೆ. 13 ಬಜೆಟ್ ಮಾಡಿದಾಗಲೂ ಪೂರ್ಣ ಲೇಖಾನುದಾನ ಪಡೆದಿಲ್ಲ. ಜೂನ್ ಅಥವಾ ಜುಲೈನಲ್ಲಿ ಚರ್ಚಿಸೋಣ. ಜನರ ತೆರಿಗೆ ಹಣ ಸದ್ಬಳಕೆ ಆಗುತ್ತಿದೆಯೋ ಇಲ್ಲವೋ ಚರ್ಚೆ ಆಗಬೇಕು ಎಂದೆವು. ಆದರೆ ಸರ್ಕಾರಕ್ಕೆ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಗೆ ಅನುಮೋದನೆ ಪಡೆಯಬೇಕು ಎಂದು ಮೊಂಡುತನ ಮಾಡುತ್ತಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಸದನ ಮುಂದೂಡಲೇಬೇಕಾದ ಅನಿವಾರ್ಯ ಸ್ಥಿತಿ ಇದೆ. ಸರ್ಕಾರ ಬಜೆಟ್ ಅನುಮೋದನೆಯ ಜೊತೆಗೆ ವಿವಾದಾತ್ಮಕ ವಿಧೇಯಕಗಳ ಮಂಡನೆಗೆ ಮುಂದಾಗಿದೆ. ಆದರೆ ಚರ್ಚೆಯಿಲ್ಲದೆ ಈ ವಿಧೇಯಕಗಳ ಮಂಡನೆಗೆ ನಮ್ಮ ಒಪ್ಪಿಗೆ ಇಲ್ಲ ಎಂದರು. ಕರ್ನಾಟದಲ್ಲಿ ವಿಧಾನಸಭೆ ಮುಂದೂಡುವ ನಿಟ್ಟಿನಲ್ಲಿ ಸದನ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ. ಮಾರ್ಚ್ 27, 28 ರ ತನಕ ನಡೆಸಬೇಕು ಎಂದು ಸರ್ಕಾರ ಪ್ರಸ್ತಾಪ ಮುಂದಿಟ್ಟಿತ್ತು. ಬಜೆಟ್ ಅನುಮೋದನೆ ಜೊತೆಗೆ ಎಲ್ಲಾ ಬಿಲ್ ಗಳನ್ನು ಪಾಸ್ ಮಾಡಬೇಕು ಎಂಬುವುದು ಸರ್ಕಾರದ ಇರಾದೆಯಾಗಿತ್ತು. ಬಜೆಟ್ ಮೇಲೆ ಚರ್ಚೆ ಅಪೂರ್ಣವಾಗಿದೆ ಈ ನಿಟ್ಟಿನಲ್ಲಿ ಸದ್ಯ ಸದನ ಮುಂದೂಡಿ ಜೂನ್ ಅಥವಾ ಜುಲೈನಲ್ಲಿ ಅಧಿವೇಶನ ಕರೆಯಿರಿ ಎಂಬ ಸಲಹೆ ನೀಡಿದ್ದೆವು. ಆದರೆ ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಇಷ್ಟೆಲ್ಲ ಚರ್ಚಿಸಿದ್ದರೂ ಸದನದಲ್ಲಿ ವಿಧೇಯಕ ಮಂಡಿಸಲು ಮುಂದಾಗುತ್ತಾರೆ. ಇದ್ಯಾವ ಲೆಕ್ಕ ? ಭಂಡತನ, ಪ್ರಜಾಪ್ರಭುತ್ವ ವಿರೋಧಿ ಸರ್ಕಾರ. ತೀರ್ಮಾನ ಆದಂತೆ ನಡೆದುಕೊಳ್ಳುವುದು ಸರ್ಕಾರದ ಕರ್ತವ್ಯ. ಸ್ಪೀಕರ್ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರಾ ಅಥವಾ ಪಕ್ಷಪಾತಿಯಾಗಿದ್ದಾರಾ ಎನ್ನುವ ಅನುಮಾನ ಬಂದೇ ಬರುತ್ತದೆ. ಹೀಗಾಗಿ ಬಹಿಷ್ಕರಿಸಿ, ಸಭಾತ್ಯಾಗ ಮಾಡಿದ್ದೇವೆ. ವಿರೋಧ ಪಕ್ಷಗಳ ಬಗ್ಗೆ ಗೌರವ ಇಲ್ಲ ಇವರಿಗೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದವರಿಗೆ ಪ್ರತಿಪಕ್ಷದವರ ಮಾತಿಗೆ ಬೆಲೆ ಕೊಡುತ್ತಾರೆ. ಈ ಎಲ್ಲ ವಿಚಾರಗಳನ್ನಿಟ್ಟುಕೊಂಡ ಜನಗಳ ಮುಂದೆ ಹೋಗುತ್ತೇವೆ ಎಂದು ಕಿಡಿಕಾರಿದರು.
from India & World News in Kannada | VK Polls https://ift.tt/2WCg6ET