
ವಡೋದರಾ: ದ್ವಾಪರ ಯುಗದಲ್ಲಿ ದುಷ್ಟ ಕಂಸನಿಂದ ಶ್ರೀಕೃಷ್ಣನನ್ನು ರಕ್ಷಿಸಲು , ಮಹಾರಾಜ ತನ್ನ ಮಗನನ್ನು ಬುಟ್ಟಿಯಲ್ಲಿಟ್ಟುಕೊಂಡು ಯಮುನಾ ನದಿ ದಾಟಿದ ಕಥೆ ಜನಜನಿತ. ಅದೇ ಕಥೆಯನ್ನು ನೆನಪಿಸುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಜರಾತಿನ ವಡೋದರಾದಲ್ಲಿ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಪರಿಣಾಮ ಹಲವೆಡೆ ಪ್ರವಾಹದ ಸ್ಥಿತಿ ತಲೆದೋರಿದೆ. ಕೇಂದ್ರ ಗುಜರಾತಿನ ವಡೋದರಾದ ನಿವಾಸಿಗಳು ಪ್ರವಾಹದಿಂದ ತತ್ತರಿಸಿದ್ದು, ಇದಕ್ಕೆ ಸಂಬಂಧಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಧಿಕಾರಿಯೊಬ್ಬರು ಪುಟ್ಟ ಕೂಸನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿಟ್ಟುಕೊಂಡು ಪ್ರವಾಹದಿಂದ ಮಗುವಿನ ಪ್ರಾಣವನ್ನು ರಕ್ಷಿಸಿದ್ದಾರೆ. ಅವರು ಕುತ್ತಿಗೆಯವರೆಗೆ ನೀರಲ್ಲಿ ಮುಳುಗಿದ್ದು ತಲೆಯಲ್ಲಿ ಮಗುವನ್ನು ಇಟ್ಟುಕೊಂಡಿದ್ದಾರೆ. ಗುರುವಾರ ಈ ವಿಶ್ವಾಮಿತ್ರಿ ರೈಲು ನಿಲ್ದಾಣದ ಬಳಿಯ ದೇವಿಪುರಾದಲ್ಲಿ ಘಟನೆ ನಡೆದಿದೆ. ಸ್ಥಳದಲ್ಲಿ ಭಾರಿ ಪ್ರವಾಹ ಕಂಡುಬಂದ ಮಾಹಿತ ಪಡೆದ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿತ್ತು. ಈ ಸಂದರ್ಭದಲ್ಲಿ ಪ್ರಾಣಾಪಾಯಕ್ಕೆ ಸಿಲುಕಿದ್ದ ಮಗುವನ್ನು ಪೊಲೀಸ್ ಸಬ್ ಇನ್ಸಪೆಕ್ಟರ್ ಗೋವಿಂದ್ ತಮ್ಮ ಜೀವ ಲೆಕ್ಕಿಸದೇ, ಸಾಹಸ ಮಾಡಿ ರಕ್ಷಿಸಿದ್ದಾರೆ.
from India & World News in Kannada | VK Polls https://ift.tt/2T0zhnY