ಕಲ್ಲು ತೂರಾಟಗಾರರೇ ನಾಳಿನ ಉಗ್ರರು; ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ: ಕಾಶ್ಮೀರಿಗಳಿಗೆ ಸೇನೆ ಸೂಚನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿರುವ ಶೇ 83ರಷ್ಟು ಭಯೋತ್ಪಾದಕರು ಭದ್ರತಾ ಪಡೆಗಳತ್ತ ಕಲ್ಲು ತೂರಾಟದ ಚರಿತ್ರೆ ಹೊಂದಿರುವವರು ಎಂದು ಭಾರತೀಯ ಸೇನೆ ಹೇಳಿದೆ. 15 ಕಾರ್ಪ್ಸ್‌ನ ಜನರಲ್ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್ ಧಿಲ್ಲೋನ್ ಶನಿವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಅಮರನಾಥ ಯಾತ್ರೆ ಮಾರ್ಗದಲ್ಲಿ ಅಮೆರಿಕ ನಿರ್ಮಿತ ಸ್ನಿಪರ್ ರೈಫಲ್ ಮತ್ತು ಪಾಕ್‌ ನಿರ್ಮಿತ ನೆಲಬಾಂಬ್‌ಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾದ ಬಳಿಕ ಅವರು ಈ ಮಾಹಿತಿ ನೀಡಿದರು. ಅಮರನಾಥ ಯಾತ್ರೆಗೆ ವಿಘ್ನವೊಡ್ಡಲು ಪಾಕ್‌ ಹತಾಶ ಪ್ರಯತ್ನ ನಡೆಸುತ್ತಿರುವುದಕ್ಕೆ ಇದು ಮತ್ತೊಂದು ಸಾಕ್ಷಿಯಾಗಿದೆ. 'ಕಾಶ್ಮೀರದಲ್ಲಿ ಭಯೋತ್ಪಾದನೆ ಕೃತ್ಯಗಳ ಬಗ್ಗೆ ಆಳವಾದ ವಿಶ್ಲೇಷಣೆ ನಡೆಸಿದ್ದೇವೆ. ಕಾಶ್ಮೀರಿ ತಾಯಂದಿರಿಗೆ ನನ್ನ ಮನವಿ ಇಷ್ಟೆ, ಗಮನವಿಟ್ಟು ಕೇಳಿ: ಶೇ 83ರಷ್ಟು ಸ್ಥಳೀಯ ಭಯೋತ್ಪಾದಕರು ಹಿಂದೊಮ್ಮೆ ಕಲ್ಲು ತೂರಾಟಗಾರರಾಗಿದ್ದವರು. ಆದ್ದರಿಂದ ನಿಮ್ಮ ಮಗ ಇಂದು ಕೇವಲ 500 ರೂ.ಗಳಿಗಾಗಿ ಭದ್ರತಾಪಡೆಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದರೆ, ನಾಳೆ ಆತ ಭಯೋತ್ಪಾದಕನಾಗಿ ಬದಲಾಗುತ್ತಾನೆ' ಎಂದು ಜನರಲ್ ಧಿಲ್ಲೋನ್ ಹೇಳಿದರು. ಭಯೋತ್ಪಾದಕರ ಅಲ್ಪಾಯುಷ್ಯದ ಬಗ್ಗೆ ಅಖಿ-ಅಂಶಗಳ ಸಹಿತ ಮಾಹಿತಿ ನೀಡಿದ ಅವರು, ಶೇ 64ರಷ್ಟು ಉಗ್ರರು ಬಂದೂಕು ಕೈಗೆತ್ತಿಕೊಂಡ ಒಂದು ವರ್ಷದೊಳಗೆ ಹತರಾಗಿದ್ದಾರೆ ಎಂದು ತಿಳಿಸಿದರು. ಶೇ 7ರಷ್ಟು ಉಗ್ರರು 10 ದಿನದೊಳಗೆ, ಶೇ 9ರಷ್ಟು ಉಗ್ರರು ಒಂದು ತಿಂಗಳೊಳಗೆ, ಶೇ 17ರಷ್ಟು ಉಗ್ರರು ಮೂ ತಿಂಗಳಲ್ಲಿ, ಶೇ 36ರಷ್ಟು ಉಗ್ರರು 6 ತಿಂಗಳೊಳಗೆ ಹಾಗೂ ಶೇ 64ರಷ್ಟು ಭಯೋತ್ಪಾದಕರು ಒಂದು ವರ್ಷದೊಳಗೆ ಹತರಾಗುತ್ತಿದ್ದಾರೆ. ಪೋಷಕರು ತಮ್ಮ ಮಗ ಕಲ್ಲೂ ತೂರಾಟಗಾರನಾಗದಂತೆ ತಡೆಯದಿದ್ದರೆ, ಆತ ಬಂದೂಕು ಎತ್ತಿಕೊಂಡ ಒಂದು ವರ್ಷದೊಳಗೆ ಸಾಯುವುದು ಖಚಿತ' ಎಂದು ಧಿಲ್ಲೋನ್ ನುಡಿದರು. ಕಾಶ್ಮೀರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಸೃಷ್ಟಿಸಲು ಪಾಕಿಸ್ತಾನ ಹತಾಶ ಪ್ರಯತ್ನ ನಡೆಸುತ್ತಿದೆ. ನಿರ್ದಿಷ್ಟ ಗುಪ್ತಚರ ಮಾಹಿತಿ ಇದನ್ನು ಸ್ಪಷ್ಟಪಡಿಸಿದ್ದು, ಈ ಬಾರಿ ಅಮರನಾಥ ಯಾತ್ರೆಗೆ ಅಡ್ಡಿಪಡಿಸಲು ಭಾರೀ ಪ್ರಮಾಣದ ವಿಧ್ವಂಸಕ ಕೃತ್ಯದ ಸಂಚು ರೂಪಿಸಿದೆ ಎಂದು ಅವರು ತಿಳಿಸಿದರು. ಗುರುವಾರ ರಾತ್ರಿ ಶೋಪಿಯಾನ್‌ನಲ್ಲಿ ಭದ್ರತಾಪಡೆಗಳ ಮೇಲೆ ದಾಳಿ ನಡೆಸಲು ಉಗ್ರರು ಯತ್ನಿಸಿದರಾದರೂ ಅದನ್ನು ಯಶಸ್ವಿಯಾಗಿ ವಿಫಲಗೊಳಿಸಲಾಗಿದೆ ಎಂದು ಜನರಲ್ ಧಿಲ್ಲೋನ್ ತಿಳಿಸಿದರು.


from India & World News in Kannada | VK Polls https://ift.tt/2Yiws7M

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...