
ಹೊಸದಿಲ್ಲಿ: ಕಣಿವೆ ರಾಜ್ಯದಲ್ಲಿ ಅನೇಕ ಬದಲಾವಣೆಗಳ ನಡುವೆ ಸಂವಿಧಾನದ 35ಎ ಅಧಿನಿಮಯ ಹಾಗೂ 370ರ ಬಗ್ಗೆ ತೀವ್ರ ಚರ್ಚೆ ಆರಂಭವಾಗಿದೆ. ರಾಜ್ಯ ರಾಜಕೀಯ ನಾಯಕರಲ್ಲಿ ಇದೀಗ ಕಣಿವೆ ರಾಜ್ಯದಲ್ಲಿ ಜಾರಿಯಲ್ಲಿರುವ ಆರ್ಟಿಕಲ್ 35ಎಯನ್ನು ರದ್ದುಪಡಿಸುವ ಬಗ್ಗೆ ಅನುಮಾನ, ಆತಂಕವೂ ವ್ಯಕ್ತವಾಗತೊಡಗಿದೆ. ಅಮರನಾಥ ಯಾತ್ರೆ ಸೇರಿದಂತೆ ಪ್ರವಾಸಿಗರ ಮೇಲೆ ಉಗ್ರರ ದಾಳಿಯ ಕುರಿತು ಗುಪ್ತಚರ ಇಲಾಖೆ ಎಚ್ಚರಿಕೆ ರವಾನಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೆಟ್ರೋಲ್ ಪಂಪ್ ಹಾಗೂ ದಿನ ನಿತ್ಯದ ವಸ್ತುಗಳ ಖರೀದಿಗೆ ಪೇಚಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಸ್ಥಳೀಯ ನಾಗರಿಕರು ಆತಂಕಕ್ಕೀಡಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಆರ್ಟಿಕಲ್ 35ಎಗೆ ಸಂಬಂಧಿಸಿದಂತೆ ಆಗಿರುವ ಸಾಧ್ಯತೆಳಿವೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲ ಹಾಗೂ ಮೆಹೆಬೂಬ ಮುಫ್ತಿ ಟ್ವಿಟರ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಏನಿದು ಆರ್ಟಿಕಲ್ 35A? ಸಂವಿಧಾನದ ಈ ಅಧಿನಿಯಮದ ಪ್ರಕಾರ, 1954ರ ಮೇ 14ರ ಬಳಿಕ ಜಮ್ಮು ಹಾಗೂ ಕಾಶ್ಮೀರ ಪ್ರದೇಶದಲ್ಲಿ ವಾಸವಿರುವ ಹಾಗೂ ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಅಲ್ಲೇ ವಾಸವಿರುವ, ಅರ್ಥಾತ್ ಅಲ್ಲೇ ಹುಟ್ಟಿ ಬೆಳೆದವರಿಗಷ್ಟೇ ಅಲ್ಲಿನ ಭೂಮಿ ಸ್ವಂತವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಹೊರ ಭಾಗದವರಿಗೆ ಜಮ್ಮು ಕಾಶ್ಮೀರ ಭಾಗದಲ್ಲಿ ಜಮೀನು ಕೊಳ್ಳುವುದು ಅಥವಾ ಅಲ್ಲಿಯೇ ವಾಸಿದುವುದಕ್ಕೆ ಅವಕಾಶ ಇರುವುದಿಲ್ಲ. ಸಂವಿಧಾನದ ಆರ್ಟಿಕಲ್ 370ರ ಅಡಿಯಲ್ಲಿ 35Aಯನ್ನು ಜಾರಿಗೊಳಿಸಲಾಗಿದೆ. ಜಮ್ಮು ಕಾಶ್ಮೀರಕ್ಕೆ ಅನ್ವಯಿಸುವಂತೆ ಇದೊಂದು ತಾತ್ಕಾಲಿಕ ವ್ಯವಸ್ಥಾಪನಾ ಸೂತ್ರ ಎಂದು ವಿವರಿಸಲಾಗಿದೆ. ನೆಹರು ಸರಕಾರದಿಂದ ಬಂದ ಶಿಫಾರಸನ್ನು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಅವಧಿಯಲ್ಲಿ ಅಂಗೀಕರಿಸಲಾಗಿತ್ತು. ಅಧಿನಿಯಮದ ಪ್ರಕಾರ, ಜಮ್ಮು ಕಾಶ್ಮೀರದ ಜನರಿಗಲ್ಲದೆ, ಬೇರೆಡೆಯಿಂದ ಬಂದವರಿಗೆ ಅಲ್ಲಿನ ರಾಜ್ಯ ಸರಕಾರಿ ನೌಕರಿಯೂ ನೀಡುವಂತಿಲ್ಲ.
from India & World News in Kannada | VK Polls https://ift.tt/2YNQRkM