ದೊಡ್ಡ ಪ್ರಮಾಣದ '' ಅಭಿಯಾನದ ಈ ಕಾಲದ ಅಗತ್ಯ. ಇದು ನಮ್ಮನ್ನು ಆರೋಗ್ಯಕರ ಜೀವನದತ್ತ ಕರೆದೊಯ್ಯಲಿದೆ. ತಂತ್ರಜ್ಞಾನದ ಬೆಳವಣಿಗೆ ನಮ್ಮನ್ನು ನಿಷ್ಕ್ರಿಯ, ಚಟುವಟಿಕೆಯಿಲ್ಲದ ಜೀವನಶೈಲಿಯತ್ತ ಕರೆದುತಂದಿದೆ. ಫಿಟ್‌ನೆಸ್ ಎಂಬುದು, ಅನಂತ ಲಾಭವನ್ನು ತಂದುಕೊಡುವ ಶೂನ್ಯ ಬಡ್ಡಿಯ ಹೂಡಿಕೆ. ದೈಹಿಕ ಸ್ವಾಸ್ಥ್ಯ, ಯಾವಾಗಲೂ ನಮ್ಮ ದೇಶದ ಜನಜೀವನದ ಅವಿಭಾಜ್ಯ ಅಂಗವಾಗಿತ್ತು. ಕೆಲವು ವರ್ಷಗಳ ಹಿಂದೆ ಒಬ್ಬ ಸಾಮಾನ್ಯ ವ್ಯಕ್ತಿ ಎಂಟು ಹತ್ತು ಮೈಲುಗಳಷ್ಟು ದೂರ ಆರಾಮವಾಗಿ ನಡೆದುಹೋಗುತ್ತಿದ್ದ. ಸೈಕಲಿಂಗ್ ಮಾಡುತ್ತಿದ್ದ ಅಥವಾ ಓಡುತ್ತಿದ್ದ. ಇಂದು ಆ ಪ್ರಮಾಣದ ಚಟುವಟಿಕೆ ನಮ್ಮಲ್ಲಿಲ್ಲ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ದೈಹಿಕ ಚಟುವಟಿಕೆ ಇಳಿದಿದೆ. ನಾವು ಕಡಿಮೆ ನಡೆಯುತ್ತೇವೆ; ಮತ್ತು ಅದೇ ತಂತ್ರಜ್ಞಾನ ನಾವು ಸಾಕಷ್ಟು ನಡೆಯುತ್ತಿಲ್ಲ ಎಂದು ನಮಗೆ ಹೇಳುತ್ತಿದೆ! ಇದು ಪ್ರಧಾನಿ ಅವರು 'ಫಿಟ್ ಇಂಡಿಯಾ' ಅಭಿಯಾನವನ್ನು ಉದ್ಘಾಟಿಸಿ ನುಡಿದ ಮಾತುಗಳು. 'ಆರೋಗ್ಯ ಸಮಸ್ಯೆಗಳಿಂದ ಯುವಜನತೆ ಬಳಲುತ್ತಿರುವುದು ಚಿಂತೆಗೀಡು ಮಾಡುವ ವಿಷಯ. 12 ವರ್ಷದ ಮಕ್ಕಳಿಗೆ ಮಧುಮೇಹ, 30 ವರ್ಷದ ಯುವಕನಿಗೆ ಹೃದಯಾಘಾತ ಎಂಬಂತಹ ಸುದ್ದಿಗಳು ದಿಕ್ಕುಗೆಡಿಸುತ್ತವೆ. ಮಧಮೇಹ ಮತ್ತು ಹೈಪರ್‌ಟೆನ್ಷನ್‌ಗಳು ಇತರ ಜೀವನಶೈಲಿ ರೋಗಗಳೊಂದಿಗೆ ಸೇರಿವೆ. ನಮ್ಮ ಜೀವನಶೈಲಿ ಬದಲಾವಣೆ, ಹೆಚ್ಚಿನ ದೈಹಿಕ ಚಟುವಟಿಕೆಯೊಂದಿಗೆ ನಾವು ಮರಳಿ ಸ್ವಾಸ್ಥ್ಯವನ್ನು ಪಡೆಯಬಹುದು. ದೇಹ ಫಿಟ್ ಆಗಿದ್ದರೆ ಮನಸ್ಸೂ ಫಿಟ್ ಆಗಿರುತ್ತದೆ' ಎಂದಿದ್ದಾರೆ ಮೋದಿ. 28 ಮಂದಿಯ ಸಮಿತಿ: ಫಿಟ್ ಇಂಡಿಯಾ' ಚಳವಳಿಯನ್ನು ಯೋಜಿತ ರೀತಿಯಲ್ಲಿ ಮುಂದಕ್ಕೊಯ್ಯಲು 28 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಕ್ರೀಡಾ ಸಚಿವರು ಇದರ ನೇತೃತ್ವ ವಹಿಸುತ್ತಾರೆ. ಸಮಿತಿಯಲ್ಲಿ ಕ್ರೀಡಾ, ಪ್ರೌಢ ಶಿಕ್ಷಣ, ಆಯುಷ್, ಯುವಜನ ಸೇವಾ ಮತ್ತಿತರ ಸಚಿವಾಲಯಗಳ ಕಾರ್ಯದರ್ಶಿಗಳಿದ್ದಾರೆ. ಹಾಕಿ ಆಟಗಾರ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನದಂದು ಸಂಘಟಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಕ್ರೀಡಾ ಸಚಿವ ಕಿರಣ್ ರಿಜಿಜು ಇದ್ದರು. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಯಿತು. ಕ್ರೀಡಾ ರಾಯಭಾರಿಗಳು: ಈ ಕಾರ್ಯಕ್ರಮಕ್ಕೆ ಮುನ್ನ, ಇತ್ತೀಚೆಗೆ ವಿಶ್ವ ಬ್ಯಾಡ್ಮಿಂಟನ್‌ಶಿಪ್ ಪ್ರಶಸ್ತಿ ಗೆದ್ದ ಪಿ.ವಿ ಸಿಂಧು ಅವರು, ಭಾರತೀಯರು ಫಿಟ್ ಇಂಡಿಯಾ ಸಂಕಲ್ಪ ಮಾಡುವಂತೆ ಕರೆ ನೀಡಿದರು. ಸಿಂಧು, ಸೈನಾ ನೆಹ್ವಾಲ್, ವಿರಾಟ್ ಕೊಹ್ಲಿ. ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಹಲವಾರು ಪ್ರಮುಖ ಭಾರತೀಯ ಕ್ರೀಡಾಪಟುಗಳು ಈ ಅಭಿಯಾನದ ರಾಯಭಾರಿಗಳಾಗಿ ಭಾಗವಹಿಲಿದ್ದಾರೆ. ಫಿಟ್ ಇಂಡಿಯಾ ಜಾಲತಾಣ: ಫಿಟ್ ಇಂಡಿಯಾಕ್ಕೆ ಸಂಬಂಧಿಸಿದ ಜಾಲತಾಣವೊಂದನ್ನು ಕೇಂದ್ರ ಸರಕಾರ ಅಭಿವೃದ್ಧಿಪಡಿಸಲಿದ್ದು, ಅದರಲ್ಲಿ ಫಿಟ್‌ನೆಸ್ ಪರಿಕಲ್ಪನೆಗಳು ಹಾಗೂ ಅದಕ್ಕಾಗಿ ಸರಕಾರ ಕೈಗೆತ್ತಿಕೊಳ್ಳಲಿರುವ ಯೋಜನೆಗಳನ್ನು ಪ್ರಕಟಿಸಲಿದೆ. ಶಾಲೆ ಕಾಲೇಜುಗಳು ಅದರಲ್ಲಿ ಅಭಿಯಾನಕ್ಕಾಗಿ ತಮ್ಮ ಕ್ರಿಯಾಯೋಜನೆಗಳನ್ನು ಅಪ್ಲೋಡ್ ಮಾಡಬಹುದು. ಏನೇನು ಕಾರ್ಯಕ್ರಮಗಳು?: ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಅನುದಾನವನ್ನು ಹೆಚ್ಚಿಸಿ, ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಲಾಗುವುದು. ಫಿಟ್ ಇಂಡಿಯಾ ಅಭಿಯಾನದಲ್ಲಿ ಪಾಲುಗೊಳ್ಳಲು ವಿದ್ಯಾರ್ಥಿಗಳನ್ನು ಉತ್ತೇಜಿಸುವಂತೆ ವಿಶ್ವವಿದ್ಯಾಲಯಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿಯು ಸೂಚಿಸಿದೆ. ದೇಶಾದ್ಯಂತ 9 ತಿಂಗಳ ಕಾಲ ವಿವಿಧ ದೈಹಿಕ ಕಸರತ್ತು, ಬಲವರ್ಧನೆ ಚಟುವಟಿಕೆಗಳು ನಡೆಯಲಿವೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ವಾಕಥಾನ್, ಸೈಕಲ್ ರಾರಯಲಿ, ಆರೋಗ್ಯ ತಪಾಸಣೆ, ಕ್ರೀಡಾ ಕಾರ್ಯಕ್ರಮಗಳು ನಡೆಯಲಿವೆ. ಜೀವನಶೈಲಿ ರೋಗಗಳ ಬಗ್ಗೆ ಎಲ್ಲ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದ ಅಂಕಿಸಂಖ್ಯೆ ಹಾಗೂ ವರದಿಗಳನ್ನು ತರಿಸಿಕೊಂಡು, ಅದಕ್ಕನುಗುಣವಾಗಿ ಸಮಗ್ರ ಹಾಗೂ ಸಾಮೂಹಿಕ ದೈಹಿಕ ಆರೋಗ್ಯ ಚಟುವಟಿಕೆಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಸಾರ್ವಜನಿಕ ಪಾರ್ಕ್‌ಗಳಲ್ಲಿ ಜಿಮ್‌ಗಳನ್ನು ಹೆಚ್ಚಿಸುವ ಕ್ರಮಗಳು, ಆಸ್ಪತ್ರೆಗಳಲ್ಲಿ ಫಿಸಿಯೋಥೆರಪಿ ವಿಭಾಗಗಳಿಗೆ ಇನ್ನಷ್ಟು ಬಲ ಹಾಗೂ ಹೊಣೆ ನೀಡಲಾಗುವುದು. ಚೀನಾ ಮಾದರಿ: ಚೀನಾ ದೇಶವನ್ನು ಈ ಕುರಿತು ಒಂದು ಮಾದರಿಯಾಗಿಯೇ ಪರಿಗಣಿಸಬಹುದು. 2009ರಲ್ಲಿ ಚೀನಾದಲ್ಲಿ ಬೀಜಿಂಗ್ ಒಲಿಂಪಿಕ್ಸ್ ನಡೆಯಿತು. ಇದರ ಉದ್ಘಾಟನೆ ನಡೆದ ಆ.8ನ್ನು 'ನ್ಯಾಷನಲ್ ಫಿಟ್‌ನೆಸ್ ಡೇ' ಎಂದು ಕರೆದು, ಅಂದು ಎಲ್ಲ ಸರಕಾರಿ, ಖಾಸಗಿ ಫಿಟ್‌ನೆಸ್ ವ್ಯವಸ್ಥೆಗಳು ಎಲ್ಲ ನಾಗರಿಕರಿಗೆ ಉಚಿತ ಎಂದು ಘೋಷಿಸಲಾಯಿತು. 2014ರಲ್ಲಿ, ರಾಷ್ಟ್ರೀಯ ಫಿಟ್‌ನೆಸ್ ನೀತಿಯನ್ನು ಚೀನಾದಲ್ಲಿ ರೂಪಿಸಲಾಯಿತು. ದೊಡ್ಡಮಟ್ಟದ ಸಾರ್ವಜನಿಕ ಜಿಮ್‌ಗಳನ್ನು ಮೂಲಸೌಕರ್ಯದಂತೆ ಅಭಿವೃದ್ಧಿಪಡಿಸುವುದು, ಫುಟ್ಬಾಲ್ ಕ್ರೀಡೆಯನ್ನು ಜನಪ್ರಿಯಗೊಳಿಸುವುದು ಈ ಅಭಿಯಾನದಲ್ಲಿ ಸೇರಿವೆ. ಸರಕಾರಿ ವೆಚ್ಚದಲ್ಲಿ ಎಲ್ಲರಿಗೂ ಆರೋಗ್ಯ ಎಂಬ ನೀತಿ ಜನಪ್ರಿಯವಾಗಿದ್ದು, ಉಚಿತವಾಗಿ ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುತ್ತಾರೆ. 6 ಲಕ್ಷದಷ್ಟು ಉಚಿತ ವ್ಯಾಯಾಮ ಕೇಂದ್ರಗಳಿವೆ. 20 ಲಕ್ಷ ಕ್ರೀಡಾ ತರಬೇತುದಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಚೀನಾದ ಈ ಮಾದರಿಯನ್ನು ಭಾರತ ಅನುಸರಿಬಹುದು ಎಂದು ತಜ್ಞರು ಹೇಳಿದ್ದಾರೆ. ಬ್ರಿಟನ್‌ನಲ್ಲಿ ಆಗಸ್ಟ್ 25ನ್ನು 'ಫಿಟ್‌ನೆಸ್ ಡೇ' ಎಂದು ಆಚರಿಸಲಾಗುತ್ತಿದೆ. 'ಯುಕೆ ಆ್ಯಕ್ಟಿವ್' ಎಂಬ ಅಭಿಯಾನವನ್ನೂ ಅಲ್ಲಿ ಆರಂಭಿಸಲಾಗಿದ್ದು, ದೇಶದ ಜನತೆಯ ಆರೋಗ್ಯವನ್ನು ದೈಹಿಕ ಚಟುವಟಿಕೆ, ಆಟಗಳ ಮೂಲಕ ಕಾಪಾಡಿಕೊಳ್ಳುವುದು ಇದರ ಉದ್ದೇಶ. ಆಸ್ಪ್ರೇಲಿಯ, ಅಮೆರಿಕಗಳಲ್ಲೂ ದೈಹಿಕ ಸ್ವಾಸ್ಥ್ಯವನ್ನು ಪ್ರಮುಖ ಪರಿಕಲ್ಪನೆಯಾಗಿ ಬೆಳೆಸಲಾಗುತ್ತಿದೆ. ಇದಕ್ಕೆ ಸರಕಾರದ ಪ್ರೇರಣೆ ಹಾಗೂ ಖಾಸಗಿ ಸಂಸ್ಥೆಗಳ ಸಹಭಾಗಿತ್ವವೂ ಇದೆ. ಜೀವನಶೈಲಿ ರೋಗಗಳು: ಭಾರತದಲ್ಲಿ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳನ್ನು ಹೊಂದಿದವರ ಸಂಖ್ಯೆ ದಿನೇದಿನೇ ಏರುತ್ತಿದೆ. ಕುಳಿತಲ್ಲೇ ಕೆಲಸ ಮಾಡುವುದು, ವ್ಯಾಯಾಮ ಇಲ್ಲದಿರುವುದು, ಹೊತ್ತಲ್ಲದ ಹೊತ್ತಿನಲ್ಲಿ ಆಹಾರ ಸೇವನೆ, ಧೂಮಪಾನ, ಮಧ್ಯಪಾನ ಇತ್ಯಾದಿಗಳಿಂದಾಗಿ ಆರೋಗ್ಯ ಹದಗೆಡುತ್ತದೆ. ಈ ಕಾಯಿಲೆಗಳಲ್ಲಿ ಬೊಜ್ಜು ಮತ್ತು ಮಧುಮೇಹ ಪ್ರಮುಖ. ಸುಮಾರು 15 ಕೋಟಿ ಮಂದಿ ಭಾರತೀಯರಲ್ಲಿ ಬೊಜ್ಜಿನ ಸಮಸ್ಯೆಯಿದ್ದು, ಜಗತ್ತಿನಲ್ಲೇ ಈ ಸಮಸ್ಯೆಯಲ್ಲಿ ನಮ್ಮ ದೇಶ ಎರಡನೇ ಸ್ಥಾನ ಹೊಂದಿದೆ. ಪ್ರತಿವರ್ಷ 33-51%ದಷ್ಟು ವೇಗದಲ್ಲಿ ಈ ಸಮಸ್ಯೆ ಹೊಂದಿದವರ ಸಂಖ್ಯೆ ಏರುತ್ತಿದೆ. ಬೊಜ್ಜಿನಿಂದಾಗಿ ಟೈಪ್ 2 ಮಧುಮೇಹ ಹೊಂದಿದವರ ಸಂಖ್ಯೆಯೂ ಏರುತ್ತಿದೆ- ಅದು ಈಗ 4.1 ಕೋಟಿಯಷ್ಟಿದೆ. ಸಣ್ಣ ಮಕ್ಕಳಲ್ಲೂ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಧೂಮಪಾನ, ಮಧುಮೇಹ. ಅತ್ಯಧಿಕ ಕೊಲೆಸ್ಟರಾಲ್‌ಗಳಿಂದ ಹೃದಯ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಪ್ರಸ್ತುತ 5 ಕೋಟಿ ಮಂದಿ ಇಲ್ಲಿ ಇವುಗಳಿಂದ ನರಳುತ್ತಿದ್ದಾರೆ. ಸುಮಾರು 10 ಕೋಟಿ ಮಂದಿಗೆ ಅಧಿಕ ರಕ್ತದೊತ್ತಡವಿದೆ. ಭಾರತದಲ್ಲಿ ಸಂಭವಿಸುವ ಹೃದಯಾಘಾತದ ಸಾವುಗಳಲ್ಲಿ 40%ದಷ್ಟು ಮಂದಿ 34-64 ವಯೋಮಾನದವರಾಗಿದ್ದಾರೆ. ನಮ್ಮಲ್ಲಿ ಕಿವಿಗಳಿಗೆ ಸದಾ ಇಯರ್‌ಫೋನ್ ಸಿಕ್ಕಿಸಿಕೊಂಡವರ ಸಂಖ್ಯೆ ಹೆಚ್ಚುತ್ತಿದೆ; ಇದರಿಂದ 'ಸ್ವಿಮ್ಮರ್ಸ್ ಇಯರ್' ಎಂಬ ಕಿವಿನೋವು ಹೆಚ್ಚುತ್ತಿದೆ. ಕಿವಿನೋವು, ಕಿವುಡುತನ, ಉರಿ, ತುರಿಕೆ, ಸೋಂಕು ಕಾಣಿಸಿಕೊಳ್ಳುತ್ತವೆ. ಕ್ಯಾನ್ಸರ್, ಪಾಶ್ರ್ವವಾಯುಗಳಿಗೂ ಕಳಪೆ ಜೀವನಶೈಲಿಯ ಕೊಡುಗೆ ಇದೆ. ಕಳಪೆ ಆಹಾರ, ಅದರಿಂದ ರೋಗಪ್ರತಿರೋಧ ಶಕ್ತಿ ನೀಡುವ ಶ್ವೇತರಕ್ತಕಣಗಳ ಸಂಖ್ಯೆ ಕಡಿಮೆಯಾಗಿ ಕ್ಯಾನ್ಸರ್ ಬರಬಹುದು; ಅಧಿಕ ರಕ್ತದೊತ್ತಡದ ಪರಿಣಾಮ ರಕ್ತಕಣಗಳು ಬ್ಲಾಕ್ ಆಗಿ ಪಾಶ್ರ್ವವಾಯು ಉಂಟಾಗಬಹುದು. ಇದೆಲ್ಲಕ್ಕೂ ಆರೋಗ್ಯಕರ ಜೀವನಶೈಲಿ, ದೈಹಿಕ ಚಟುವಟಿಕೆ, ಹಿತಮಿತಾಹಾರಗಳೇ ಮದ್ದು.
from India & World News in Kannada | VK Polls https://ift.tt/2ZwTmsV