ಮೈಶುಗರ್‌ ಕಾರ್ಖಾನೆ ನಿರ್ವಹಣೆ ಯಾರಿಗೆ? ವರದಿ ಪಡೆಯಲು ಸಂಪುಟ ಉಪಸಮಿತಿ ರಚನೆ

ಬೆಂಗಳೂರು: ಮಂಡ್ಯದ ಮೈಶುಗರ್‌ ಕಾರ್ಖಾನೆ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವ ಇಲ್ಲವೇ ಸರಕಾರವೇ ನಿರ್ವಹಿಸುವ ವಿಚಾರದಲ್ಲಿ ವರದಿ ಪಡೆಯಲು ಪ್ರತ್ಯೇಕ ಸಂಪುಟ ಉಪಸಮಿತಿ ರಚಿಸಲು ಸಚಿವ ನಿರ್ಧರಿಸಿದೆ. ವಿಧಾನಸೌಧದಲ್ಲಿ ಮಂಗಳವಾರ ಸಂಪುಟ ಸಭೆಯ ನಿರ್ಣಯಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಜೆ.ಸಿ. ಮಾಧುಸ್ವಾಮಿ, "ವರದಿ ಸಲ್ಲಿಸಲು ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರ್‌. ಅಶೋಕ್‌, ಕೆ.ಸಿ. ನಾರಾಯಣ ಗೌಡರು ಇರುತ್ತಾರೆ,'' ಎಂದು ಹೇಳಿದರು. ''ಮೈಶುಗರ್‌ ಕಾರ್ಖಾನೆ ನಡೆಸುವ ವಿಚಾರದಲ್ಲಿ ಬಹುಕಾಲದಿಂದ ಚರ್ಚೆ ನಡೆಯುತ್ತಿತ್ತು. ಸರಕಾರವೇ 'ಒ ಆ್ಯಂಡ್‌ ಎಂ' ವಹಿಸಿಕೊಂಡರೆ ತಗಲುವ ವೆಚ್ಚ ಮೊತ್ತ ಗಮನಿಸಿದರೆ ತ್ರಾಸದಾಯಕವಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಸಂಪುಟ ಉಪಸಮಿತಿಯಿಂದ ವರದಿ ಪಡೆಯಲು ತೀರ್ಮಾನಿಸಲಾಗಿದೆ,'' ಎಂದು ತಿಳಿಸಿದರು. ''ಸಿಎಂ ತಮ್ಮ ಅಭಿಪ್ರಾಯ ಹೇಳಿರಬಹುದೇ ಹೊರತು ಸರಕಾರವೇ ಕಾರ್ಖಾನೆಯ ನಿರ್ವಹಣೆ ವಹಿಸಿಕೊಳ್ಳಲಿದೆ ಎಂಬುದಾಗಿ ವಾಗ್ಧಾನ ನೀಡಿಲ್ಲ. ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿದ ನಂತರ ಮೈಶುಗರ್‌ ಕಾರ್ಖಾನೆಯನ್ನೂ ಖಾಸಗಿಯವರಿಗೆ ಕೊಡಬಾರದು ಎಂಬ ಆಗ್ರಹ ಕೇಳಿಬಂತು. ಆ ಹಿನ್ನೆಲೆಯಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದೆ,'' ಎಂದು ಹೇಳಿದರು. ವೃದ್ಧಾಪ್ಯ ವೇತನ ಹೆಚ್ಚಳಕ್ಕೆ ಹಣ ಸಾಮಾಜಿಕ ಭದ್ರತೆ ಯೋಜನೆಯಡಿ 60 ವರ್ಷ ಮೀರಿದವರಿಗೆ 600 ರೂ. ಹಾಗೂ 65 ವರ್ಷ ಮೀರಿದವರಿಗೆ 1000 ರೂ. ಮಾಸಿಕ ವೃದ್ಧಾಪ್ಯ ವೇತನ ನೀಡಲಾಗುತ್ತಿದೆ. ಅದನ್ನು ಕ್ರಮವಾಗಿ 800 ರೂ. ಹಾಗೂ 1200 ರೂ.ಗೆ ಹೆಚ್ಚಿಸಲು ಸೆ. 18ರಂದು ಆದೇಶ ಹೊರಡಿಸಲಾಗಿದ್ದು, ಅದಕ್ಕಾಗಿ ಹೆಚ್ಚುವರಿ ಮೊತ್ತವಾಗಿ 207 ಕೋಟಿ ರೂ. ಭರಿಸಲು ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿದೆ. ಇದರಿಂದ 36 ಲಕ್ಷ ಮಂದಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಪೊಲೀಸ್‌ ಬಡ್ತಿ ನೀಡಿಕೆ ಅವಧಿ ಇಳಿಕೆ ''ಪೊಲೀಸ್‌ ಇಲಾಖೆಯಲ್ಲಿ ಪೇದೆಯಿಂದ ಸಬ್‌ಇನ್‌ಸ್ಪೆಕ್ಟರ್‌ವರೆಗೆ ಒಂದು ವೃಂದದಿಂದ ಮತ್ತೊಂದು ವೃಂದಕ್ಕೆ ಬಡ್ತಿ ಪಡೆಯಲು ಕನಿಷ್ಠ 8 ವರ್ಷ ಪೂರ್ಣಗೊಳಿಸಿರಬೇಕೆಂಬ ನಿಯಮವಿದೆ. ಒಂದೊಮ್ಮೆ ಅರ್ಹರಿಲ್ಲದಿದ್ದಾಗ ಕನಿಷ್ಠ 5 ವರ್ಷ ಸೇವೆ ಪೂರೈಸಿದವರನ್ನು ಪರಿಗಣಿಸಲು ಅವಕಾಶವಿತ್ತು. ಈಗ ಈ ಮಿತಿಯನ್ನು 5 ರಿಂದ 4 ವರ್ಷಕ್ಕೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಪೊಲೀಸ್‌ ಲಿಪಿಕ ಸೇವೆಗಳನ್ನೊಳಗೊಂಡಂತೆ ನೇಮಕಾತಿ ತಿದ್ದುಪಡಿ ನಿಯಮ- 2021ಕ್ಕೆ ಸಂಪುಟ ಒಪ್ಪಿಗೆ ನೀಡಿದೆ.


from India & World News in Kannada | VK Polls https://ift.tt/3lcNwGd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...