ಉಡುಪಿ: ಆಹಾರ ಹುಡುಕಿ ಬಂದಿದ್ದ ಚಿರತೆಯೊಂದು ಮನೆಯ ಕೋಣೆಯೊಳಗೆ ಬಂಧಿಯಾದ ಘಟನೆ ಬ್ರಹ್ಮಾವರ ತಾಲೂಕಿನ ನೈಲಾಡಿ ಸಮೀಪ ನಡೆದಿದೆ. ಭಾನುವಾರ ಬೆಳಗ್ಗಿನ ಜಾವ ಆಹಾರ ಹುಡುಕುತ್ತಾ ಬಂದಿದ್ದ ಚಿರತೆ, ಸಾಕು ನಾಯಿಯ ಭೇಟಿಗೆ ಮುಂದಾಗಿದೆ. ಈ ವೇಳೆ ಹೆದರಿದ ನಾಯಿ ಮನೆಯ ಕೋಣೆಯೊಳಗೆ ನುಗ್ಗಿದೆ. ನಾಯಿಯನ್ನೇ ಬೆನ್ನಟ್ಟಿ ಚಿರತೆ ಕೊಠಡಿಗೆ ಹೋಗಿದೆ. ಕೋಣೆಯೊಳಗೆ ಸದ್ದು ಕೇಳಿ ಮನೆಯವರು ಎಚ್ಚರಗೊಂಡು ಕೋಣೆ ಬಾಗಿಲು ಹಾಕಿದ್ದಾರೆ. ಬಳಿಕ ವಿಷಯವನ್ನು ಸ್ಥಳೀಯ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ಬೋನ್ ಇಟ್ಟು ಅರಣ್ಯ ಇಲಾಖೆ ಸಾರ್ವಜನಿಕರ ಸಹಕಾರದೊಂದಿಗೆ ಚಿರತೆಯನ್ನು ಹಿಡಿದರು. ಕಾರ್ಯಾಚರಣೆಯಲ್ಲಿ ಶಂಕರನಾರಾಯಣ ವಲಯದ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ್, ಸಿಬ್ಬಂದಿ ರವಿ, ರವೀಂದ್ರ, ಸಂತೋಷ್ ಜೋಗಿ, ವಿಠಲ್ ನಾಯ್ಕ್, ಲಕ್ಷ್ಮಣ, ಶಿವು, ಸುದೀಪ್ ಶೆಟ್ಟಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸ್ಥಳದ ಸುತ್ತಲೂ ಊರಾರು ಸ್ಥಳೀಯರು ಸೇರಿದ್ದರು. ಸತತ ಒಂದೂವರೆ ಗಂಟೆಯ ನಿರಂತರ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಂಧಿಸಲಾಗಿದೆ. ಬಳಿಕ ಸಾಯ್ಬರಕಟ್ಟೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಮೀಸಲು ಅರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.
from India & World News in Kannada | VK Polls https://ift.tt/3tH6vde