ಹೊಸದಿಲ್ಲಿ: ಮಾರಕ ಕೊರೊನಾ ವೈರಸ್ ಹಾವಳಿ ಸಮಯದಲ್ಲಿ ಕೇಂದ್ರ ಸರ್ಕಾರದ ಸಮಯೋಚಿತ ನಿರ್ಧಾರದಿಂದಾಗಿ ಲಕ್ಷಾಂತರ ನಾಗರಿಕರ ಜೀವ ಉಳಿದಿದ್ದು, ಕೇಂದ್ರದ ನಿರ್ಧಾರಗಳು ನಿಜಕ್ಕೂ ಸ್ವಾಗತಾರ್ಹ ಎಂದು ರಾಷ್ಟ್ರಪತಿ ಹೇಳಿದ್ದಾರೆ. ಕೇಂದ್ರದ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ದೇಶ ಸಮರ್ಥವಾಗಿ ಕೊರೊನಾ ವೈರಸ್ ಹಾವಳಿ ಎದುರಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರ ತೆಗೆದುಕೊಂಡ ಸಮಯೋಚಿತ ನಿರ್ಧಾರಗಳೇ ಪ್ರಮುಖ ಕಾರಣ ಎಂದು ರಾಮನಾಥ್ ಕೋವಿಂದ್ ಅಭಿಪ್ರಾಯಪಟ್ಟರು. ಭಾರತ ಇಡೀ ವಿಶ್ವದಲ್ಲೇ ಅತ್ಯಂತ ಲಸಿಕಾ ಅಭಿಯಾನ ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದ ಕೋವಿಂದ್, ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭಾರತ ತನ್ನ ಜಾಗತಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವುದನ್ನು ಜಗತ್ತು ನೋಡುತ್ತಿದೆ ಎಂದು ಹೇಳಿದರು. ಹಲವಾರು ರಾಷ್ಟ್ರಗಳಿಗೆ ಲಕ್ಷಾಂತರ ಕೊರೊನಾ ಲಸಿಕೆಗಳನ್ನು ರವಾನಿಸಿರುವ ಭಾರತ, ಮಾನವೀಯತೆಯ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಇದೇ ವೇಳೆ ಗಣರಾಜ್ಯೋತ್ಸವ ದಿನಾಚರಣೆ(ಜ.26-ಮಂಗಳವಾರ)ಯಂದು ನಡೆದ ಹಿಂಸಾಚಾರವನ್ನು ಉಲ್ಲೇಖಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರತಿಭಟನೆ ಹೆಸರಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು. ಸಂವಿಧಾನ ನಮಗೆ ವಾಕ್ ಸ್ವಾಂತಂತ್ಯವನ್ನು ನೀಡಿದೆ ಹೌದಾದರೂ, ಕಾನೂನು ಮತ್ತು ನಿಯಮಗಳನ್ನು ಪಾಲಿಸುವ ಕರ್ತವ್ಯಗಳನ್ನೂ ನೀಡಿದೆ ಎಂದು ರಾಮನಾಥ್ ಕೋವಿಂದ್ ಸೂಚ್ಯವಾಗಿ ಹೇಳಿದರು. ಇದಕ್ಕೂ ಮೊದಲು ಸಂಸತ್ತಿನ ಹೊರಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸುಗಮ ಬಜೆಟ್ ಅಧಿವೇಶನಕ್ಕೆ ಪ್ರೆತಿಪಕ್ಷಗಳ ಸಹಕಾರ ಕೋರಿದರು.
from India & World News in Kannada | VK Polls https://ift.tt/3r03Iur