
ಬೆಂಗಳೂರು: ಬೃಹತ್ ಮಹಾ ನಗರ ಪಾಲಿಕೆ () ವ್ಯಾಪ್ತಿಯಲ್ಲಿ ರಸ್ತೆ, ಪಾದಚಾರಿ ಮಾರ್ಗ, ಉದ್ಯಾನ, ಆಟದ ಮೈದಾನ, ಸರಕಾರಿ ಜಾಗಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಅನಧಿಕೃತವಾಗಿ ನಿರ್ಮಿಸಿರುವ 1509 ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಸೇರಿದಂತೆ ಎಲ್ಲ ಧಾರ್ಮಿಕ ಕಟ್ಟಡಗಳಿಗೆ ತೆರವಿನ ಆತಂಕ ಎದುರಾಗಿದೆ. ರಾಜ್ಯದ ಇತರ ಪ್ರದೇಶಗಳಲ್ಲೂ ಜಿಲ್ಲಾಡಳಿತ ಪಟ್ಟಿ ತಯಾರಿಸುವ ಸಾಧ್ಯತೆ ಇದೆ. ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ಪಾಲಿಕೆಯು 8 ವಲಯಗಳಲ್ಲೂ ಸಮೀಕ್ಷೆ ನಡೆಸಿ, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಇದೇ 29ರಂದು ಪ್ರಕರಣದ ವಿಚಾರಣೆ ನಡೆಯಲಿದ್ದು, ಬಿಬಿಎಂಪಿ ಆಯುಕ್ತರು ಅನಧಿಕೃತ ಧಾರ್ಮಿಕ ಕೇಂದ್ರಗಳ ವಿವರ ಸಲ್ಲಿಸಲಿದ್ದಾರೆ. ರಾಜ್ಯದೆಲ್ಲೆಡೆ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿರುವ ಧಾರ್ಮಿಕ ಕೇಂದ್ರಗಳ ಬಗ್ಗೆ ಸರ್ವೆ ನಡೆಸಿ ಫೆ.5ರೊಳಗೆ ವರದಿ ಸಲ್ಲಿಸಲು ನ್ಯಾಯಾಲಯ ಸೂಚಿಸಿದೆ. ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿರುವ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ 2009ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಅದರ ವಿಚಾರಣೆ ನಡೆಸಿದ ನ್ಯಾಯಾಲಯವು ರಸ್ತೆ, ಉದ್ಯಾನ, ಫುಟ್‌ಪಾತ್, ಆಟದ ಮೈದಾನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಪಡೆಯದೆ ಅಕ್ರಮವಾಗಿ ನಿರ್ಮಿಸಿರುವ ಧಾರ್ಮಿಕ ಕೇಂದ್ರಗಳನ್ನು ಗುರುತಿಸಿ, ತೆರವುಗೊಳಿಸಲು ಆದೇಶಿಸಿದೆ. ಈ ಆದೇಶವು ಕೇವಲ ಬಿಬಿಎಂಪಿಗೆ ಮಾತ್ರವಲ್ಲ; ಇಡೀ ದೇಶಕ್ಕೆ ಅನ್ವಯಿಸುತ್ತದೆ. 2009ರ ಸೆ.29ಕ್ಕೆ ಮೊದಲು ಅನುಮತಿ ಪಡೆಯದೆ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ಸಕ್ರಮಗೊಳಿಸಲು, ಸ್ಥಳಾಂತರ ಅಥವಾ ತೆರವುಗೊಳಿಸಲು ನ್ಯಾಯಾಲಯ ಆದೇಶಿಸಿದೆ. ಆದರೆ, 2009ರ ಸೆ.29ರ ನಂತರ ಅಕ್ರಮವಾಗಿ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳ ಸಕ್ರಮ ಮತ್ತು ಸ್ಥಳಾಂತರಕ್ಕೆ ಅವಕಾಶವಿಲ್ಲ. ಈ ಕಟ್ಟಡಗಳನ್ನು ತೆರವುಗೊಳಿಸಲೇಬೇಕಿದೆ.
from India & World News in Kannada | VK Polls https://ift.tt/3cgkT6X