ಬ್ರಿಸ್ಬೇನ್‌ ಟೆಸ್ಟ್‌ಗೆ ಕುಲ್ದೀಪ್‌ ಬದಲು ಸುಂದರ್‌ ಆಡಿಸಲು ಕಾರಣ ತಿಳಿಸಿದ ರಹಾನೆ!

ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಕುಲ್ದೀಪ್‌ ಯಾದವ್‌ ಬದಲು ಸ್ಪಿನ್‌ ಆಲ್‌ರೌಂಡರ್‌ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಲು ಕಾರಣವೇನೆಂಬುದನ್ನು ಬಹಿರಂಗಪಡಿಸಿದ್ದಾರೆ. ಅಡಿಲೇಡ್‌ ಟೆಸ್ಟ್ ಬಳಿಕ ಕಾಯಂ ನಾಯಕ ವಿರಾಟ್‌ ಕೊಹ್ಲಿ ಪಿತೃತ್ವ ರಜೆಯ ಮೇಲೆ ತವರಿಗೆ ಮರಳಿದ್ದರು. ಈ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಅಜಿಂಕ್ಯ ರಹಾನೆ, ಮೆಲ್ಬೋರ್ನ್‌ ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯವನ್ನು ಗೆಲ್ಲಿಸಿದ್ದರು. ನಂತರ, ಸಿಡ್ನಿಯಲ್ಲಿ ನಡೆದಿದ್ದ ಮೂರನೇ ಪಂದ್ಯವನ್ನು ಡ್ರಾ ಮಾಡಿಸಿದ್ದರು. ಮೂರನೇ ಪಂದ್ಯದ ಅಂತ್ಯಕ್ಕೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು 1-1 ಸಮಬಲ ಸಾಧಿಸಿದ್ದವು. ಆ ಮೂಲಕ ದಿ ಗಬ್ಬಾ ಟೆಸ್ಟ್ ಸಾಕಷ್ಟು ಕುತೂಹಲ ಕೆರಳಿಸಿತ್ತು. ಆದರೆ, ಗಾಯದಿಂದಾಗಿ ರವಿಚಂದ್ರನ್‌ ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ ಬ್ರಿಸ್ಬೇನ್‌ ಟೆಸ್ಟ್‌ನಿಂದ ಹೊರ ನಡೆದಿದ್ದರು. ಈ ವೇಳೆ ಇವರಿಬ್ಬರ ಅನುಪಸ್ಥಿತಿಯಲ್ಲಿ ನಾಲ್ಕನೇ ಟೆಸ್ಟ್‌ಗೆ ಯಾರನ್ನು ಆಡಿಸಬೇಕೆಂಬ ತಲೆ ನೋವು ನಾಯಕ ಅಜಿಂಕ್ಯ ರಹಾನೆಗೆ ಉಂಟಾಗಿತ್ತು. ಆಸ್ಟ್ರೇಲಿಯಾ ವಿರುದ್ಧ 2019ರ ಸಿಡ್ನಿ ಟೆಸ್ಟ್‌ನಲ್ಲಿ ಕುಲ್ದೀಪ್‌ ಯಾದವ್‌ ಐದು ವಿಕೆಟ್‌ ಸಾಧನೆ ಮಾಡಿದ್ದರು ಹಾಗೂ ಆರು ಟೆಸ್ಟ್ ಪಂದ್ಯಗಳಾಡಿರುವ ಅನುಭವವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕುಲ್ದೀಪ್‌ ಅಂತಿಮ 11ರಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ, ಅಜಿಂಕ್ಯ ರಹಾನೆ ಅಂತಿಮವಾಗಿ ತಮಿಳುನಾಡು ಮೂಲದ ಅವರಿಗೆ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶ ನೀಡಿದ್ದರು. ಸ್ಪೋರ್ಟ್ಸ್‌ ಟುಡೇ ಜತೆ ಮಾತನಾಡಿದ ಅಜಿಂಕ್ಯ ರಹಾನೆ, ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನೆಂದು ವಿವರಿಸಿದ್ದಾರೆ. "ಅಂತಿಮ 11ರಲ್ಲಿ ಆಡುವ ಅರ್ಹತೆ ಇರುವ ಕುಲ್ದೀಪ್‌ ಯಾದವ್‌ ಅವರಿಗೆ ಅವಕಾಶ ನೀಡದೇ ಇದ್ದದ್ದು ನಿಜಕ್ಕೂ ಕಠಿಣ ಕರೆ. ಟೆಸ್ಟ್ ಪಂದ್ಯ ಎಂದಾಗ ಅಂದಿನ ನಿರ್ದಿಷ್ಟ ದಿನದಲ್ಲಿ ಅತ್ಯುತ್ತಮ ಸಂಯೋಜನೆಯನ್ನು ಕಣಕ್ಕೆ ಇಳಿಸಬೇಕಾಗುತ್ತದೆ. ವಾಷಿಂಗ್ಟನ್‌ ಸುಂದರ್‌ ಸ್ಪಿನ್‌ ಜತೆಗೆ ಬ್ಯಾಟ್‌ ಮೂಲಕವೂ ತಂಡಕ್ಕೆ ಆಸರೆಯಾಗಬಲ್ಲರು. ಅದರಂತೆ ಅವರು ತಮ್ಮ ಸಾಮರ್ಥ್ಯವೇನೆಂಬುದನ್ನು ಸಾಬೀತುಪಡಿಸಿದರು," ಎಂದು ತಿಳಿಸಿದರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ವಾಷಿಂಗ್ಟನ್‌ ಸುಂದರ್‌ ಪ್ರಥಮ ಇನಿಂಗ್ಸ್‌ನಲ್ಲಿ ಸ್ಟೀವನ್‌ ಸ್ಮಿತ್‌ ವಿಕೆಟ್‌ ಪಡೆದರು ಹಾಗೂ ಟೆಸ್ಟ್ ವೃತ್ತಿ ಜೀವನದ ಚೊಚ್ಚಲ ಅರ್ಧಶತಕ ಸಿಡಿಸಿದರು. ಜತೆಗೆ, ಶಾರ್ದುಲ್‌ ಠಾಕುರ್ ಅವರ ಜತೆಗೂಡಿ 123 ರನ್‌ ಜತೆಯಾಟವಾಡಿದ್ದರು. ಇದು ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ಆಗಿತ್ತು. ಅಲ್ಲದೆ, ಸುಂದರ್‌ ಎರಡನೇ ಇನಿಂಗ್ಸ್‌ನಲ್ಲಿಯೂ 22 ರನ್‌ ಗಳಿಸಿ ಐತಿಹಾಸಿಕ ಗೆಲುವಿಗೆ ಕಾರಣರಾಗಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3adIjY6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...