ಕಲಾದಗಿ: ಗ್ರಾಮದಲ್ಲಿ ಪ್ರತಿ ಗುರುವಾರ ನಡೆಯುವ ವಾರದ ಸಂತೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಕಳ್ಳರ ಕರಾಮತ್ತಿಗೆ ಸಾರ್ವಜನಿಕರು ಕಂಗಾಲಾಗಿದ್ದಾರೆ. ಗುರುವಾರದ ಸಂತೆಯಲ್ಲಿ ಕನಿಷ್ಠ ಎಂದರೂ ನಾಲ್ಕೈದು ಮೊಬೈಲ್ಗಳು ಮಾಯವಾಗುತ್ತಿದ್ದು, ಸಂತೆಗೆ ಬರುವ ಸಾರ್ವಜನಿಕರಲ್ಲಿಆತಂಕ ಮೂಡಿದೆ. ಪ್ರತಿ ವಾರ ಜನರ ಜೇಬಿನಲ್ಲಿದ್ದ ಮೊಬೈಲ್ ಹಾಗೂ ಹಣ ಕಳ್ಳರು ಎಗರಿಸುತ್ತಿದ್ದಾರೆ. ಕಳೆದ ಅನೇಕ ತಿಂಗಳುಗಳಿಂದಲೂ ಕಳ್ಳತನ ಮುಂದುವರೆದಿದ್ದು, ಕಳ್ಳರು ಮಾತ್ರ ನಿರ್ಭಿತಿಯಿಂದ ಓಡಾಡುತ್ತಿದ್ದಾರೆ. ಅದೆಷ್ಟೇ ಜಾಗರುಕತೆಯಿಂದ ಮೊಬೈಲ್ ರಕ್ಷಿಸಿಕೊಂಡರು ಅರಿವಿಗೆ ಬಾರದಂತೆ ಕ್ಷಣಾರ್ಧದಲ್ಲಿ ಮೊಬೈಲನ್ನು ಚಾಲಾಕಿತನದಿಂದ ಕಳ್ಳರು ಎಗರಿಸುತ್ತಿರುವುದು ಪೊಲೀಸ್ ಇಲಾಖೆಗೆ ತಲೆ ಬೇನೆಯಾಗಿದೆ. ಸಾರ್ವಜನಿಕರು ತರಕಾರಿ ಖರೀದಿಯಲ್ಲಿ ಮೈಮರೆಯುತ್ತಿದ್ದಂತೆ ಚಾಲಾಕಿತನದಿಂದ ಮೊಬೈಲ್ನ್ನು ಎಗರಿಸುವ ಪುಟ್ಟ ಪುಟ್ಟ ಮಕ್ಕಳ ತಂಡವೇ ಇದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಹೀಗಾಗಿ ಕಳ್ಳತನ ಮಾಡುವಾಗ ಹಿಡಿಯುವುದು ಕಷ್ಟವಾಗಿದೆ ಎಂಬುದು ಬಹುಜನರ ಅಭಿಪ್ರಾಯ. ಬಹಳ ಸಲ ಗದ್ದಲವಿರುವ ಕಡೆ, ಬಾಗಿ ತರಕಾರಿಯನ್ನು ಕೊಳ್ಳುವಾಗ ಮೊಬೈಲ್ ಕಳ್ಳತನಗಳು ನಡೆಯುತ್ತಿವೆ. ಮೊಬೈಲ್ ಕಳ್ಳತನ ಭೀತಿಯಿಂದ ಜನರು ಸಂತೆಗೆ ಬರುವುದು ಕಷ್ಟವಾಗಿದ್ದು, ಕಳ್ಳತನ ತಡೆಯುವ ನಿಟ್ಟಿನಲ್ಲಿ ಪೊಲೀಸರು ಮತ್ತಷ್ಟು ಕಟ್ಟೆಚ್ಚರ ವಹಿಸಬೇಕಾಗಿದೆ.
from India & World News in Kannada | VK Polls https://ift.tt/3t99XxI