ತುಮಕೂರು: ಬೆಂಗಳೂರು ಮೂಲದ ವ್ಯಕ್ತಿಯ ಹೃದಯ, ಕುತ್ತಿಗೆ ಮತ್ತು ತಲೆಯ ಭಾಗಕ್ಕೆ ಚಾಕುವಿನಿಂದ ಇರಿದು ಮಾಡಿ ನಂತರ ತುಂಬಾಡಿ ಬಳಿ ಅಪಘಾತದ ಬಣ್ಣ ಹಚ್ಚಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ. ತಾಲೂಕು ಚನ್ನರಾಯನದುರ್ಗ ಹೋಬಳಿ ತುಂಬಾಡಿ ಗ್ರಾಪಂ ಕೇಂದ್ರಸ್ಥಾನದ ಶಾಲೆಯ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ನಡೆದಿರುವ ಘಟನೆಗೆ ಜನತೆ ಬೆಚ್ಚಿಬಿದ್ದಿದ್ದಾರೆ. ಬೆಂಗಳೂರು ಮೂಲದ ನಿಸ್ಸಾರ್ ಅಹಮ್ಮದ್(48) ಕೊಲೆಯಾದ ವ್ಯಕ್ತಿಯಾಗಿದ್ದು, ಕಾರಿನ ಚಾಲಕನ ಸೀಟಿನಲ್ಲಿ ಮೃತ ವ್ಯಕ್ತಿಯ ಶವ ಶನಿವಾರ ಪತ್ತೆಯಾಗಿದೆ. ಕೊಲೆಯ ಪ್ರಕರಣ ಮರೆಮಾಚಲು ಕಾರು ಕಂಬಕ್ಕೆ ಡಿಕ್ಕಿಯಾದಂತೆ ನಿಲ್ಲಿಸಿ ಮೃತ ವ್ಯಕ್ತಿಯ ಶವವನ್ನು ಚಾಲಕನ ಸೀಟಿನಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿ ಆಗಿದ್ದಾರೆ. ಕೊಲೆಯ ಆರೋಪಿಗಳ ಪತ್ತೆಗೆ ತುಮಕೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ್, ಮಧುಗಿರಿ ಡಿವೈಎಸ್ಪಿ ರಾಮಕೃಷ್ಣ ಮಾರ್ಗದರ್ಶದಲ್ಲಿ ಈಗಾಗಲೇ ವಿಶೇಷ ತಂಡವನ್ನು ರಚಿಸಲಾಗಿದೆ. ಸ್ಥಳಕ್ಕೆ ತುಮಕೂರು ಬೆರಳಚ್ಚು ತಜ್ಞರು, ಶ್ವಾನದಳ ಮತ್ತು ಮಧುಗಿರಿ ಸಿಪಿಐ ಸರ್ಧಾರ್, ಕೊರಟಗೆರೆ ಸಿಪಿಐ ನಧಾಪ್, ಪಿಎಸೈ ಮುತ್ತುರಾಜು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
from India & World News in Kannada | VK Polls https://ift.tt/3r97AcL