ಮುಂಬಯಿ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಇತ್ತೀಚೆಗೆ ವಿವಾದಾತ್ಮಕ ತೀರ್ಪುಗಳನ್ನು ನೀಡಿದ್ದ ಮುಂಬಯಿ ಹೈಕೋರ್ಟ್‌ನ ನಾಗ್ಪುರ ಪೀಠದ ನ್ಯಾಯಮೂರ್ತಿ ಅವರು ಮತ್ತೊಂದು ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯನ್ನು ದೋಷಮುಕ್ತಗೊಳಿಸಲು ನೀಡಿರುವ ಅಭಿಪ್ರಾಯ ಹೊಸ ವಿವಾದ ಸೃಷ್ಟಿಸಿದೆ. ಒಬ್ಬನೇ ವ್ಯಕ್ತಿ ಮಹಿಳೆಯನ್ನು ಎಳೆದೊಯ್ದು, ಯಾವುದೇ ಘರ್ಷಣೆ ಇಲ್ಲದೆ ಆಕೆಯನ್ನು ವಿವಸ್ತ್ರಗೊಳಿಸಿ, ಅತ್ಯಾಚಾರ ಎಸಗುವುದು ಸಾಧ್ಯವೇ ಇಲ್ಲ ಎಂದು ನ್ಯಾ.ಪುಷ್ಪಾ ಅಭಿಪ್ರಾಯಪಟ್ಟಿದ್ದಾರೆ. ಯಾವತ್ಮಲ್‌ನ ಸೂರಜ್ ಕಸರ್‌ಕರ್ ಎಂಬಾತನ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ವಿಚಾರಣೆ ವೇಳೆ ನ್ಯಾ. ಪುಷ್ಪಾ ನೀಡಿರುವ ಈ ಅಭಿಪ್ರಾಯ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅತ್ಯಾಚಾರ ಎಸಗುವಾತ ಮಹಿಳೆಯ ಬಾಯಿಯನ್ನು ಮುಚ್ಚಿ, ತನ್ನ ಮತ್ತು ಆಕೆಯ ಬಟ್ಟೆಗಳನ್ನು ಸುಲಭವಾಗಿ ಬಿಚ್ಚುವುದು ಅಸಾಧ್ಯ. ಅತ್ಯಾಚಾರ ನಡೆದಿದೆ ಎಂದರೆ ಅಲ್ಲಿ ಘರ್ಷಣೆ ನಡೆದಿರಲೇಬೇಕು. ಈ ಪ್ರಕರಣದಲ್ಲಿ ವೈದ್ಯಕೀಯ ಸಾಕ್ಷ್ಯಗಳು ಆರೋಪಕ್ಕೆ ಪೂರಕವಾಗಿಲ್ಲ ಎಂದು ನ್ಯಾ.ಪುಷ್ಪಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ವರದಿಯು ಸಂತ್ರಸ್ತೆಯ ದೇಹದಲ್ಲಿ ಗಾಯಗಳಾಗಿಲ್ಲಎಂದು ತಿಳಿಸಿದೆ. ಸಂತ್ರಸ್ತೆ ಕೂಡ ತಾಯಿ ಒತ್ತಾಯಿಸದಿದ್ದರೆ ತಾನು ದೂರು ನೀಡುತ್ತಿರಲಿಲ್ಲ ಎಂದು ಹೇಳಿದ್ದಾಳೆ. ಇವೆಲ್ಲವನ್ನು ಪರಾಮರ್ಶಿಸಿ ನೋಡಿದಾಗ ಬಲವಂತದ ದೈಹಿಕ ಸಂಪರ್ಕವಾಗಿದೆ ಎಂದು ಪರಿಗಣಿಸುವುದು ಕಷ್ಟವಾಗುತ್ತದೆ ಎಂದು ನ್ಯಾ. ಪುಷ್ಪಾ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. 2013ರ ಜುಲೈನಲ್ಲಿ ಸಂತ್ರಸ್ತೆಯ ತಾಯಿ, 15 ವರ್ಷದ ಮಗಳ ಮೇಲೆ ಸೂರಜ್ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಿದ್ದರು. ಲೈಂಗಿಕ ದೌರ್ಜನ್ಯದ ವ್ಯಾಖ್ಯಾನಕ್ಕೆ ಚರ್ಮದ ಸಂಪರ್ಕ ಮುಖ್ಯವಾಗಿದೆ. ಅಪ್ರಾಪ್ತ ವಯಸ್ಕಳ ಕೈಹಿಡಿದು, ಆಕೆಯ ಪ್ಯಾಂಟಿನ ಝಿಪ್ ಬಿಚ್ಚಿದ ಮಾತ್ರಕ್ಕೆ ದೌರ್ಜನ್ಯದ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ ಎಂದು ಇತ್ತೀಚೆಗೆ ನ್ಯಾ.ಪುಷ್ಪಾ ಅವರು ಪ್ರಕರಣವೊಂದರಲ್ಲಿಆದೇಶ ನೀಡಿದ್ದರು. ಇದು ತೀವ್ರ ವಿವಾದಕ್ಕೆ ಗುರಿಯಾದ ಬೆನ್ನಿಗೇ ಪ್ರಕರಣ ಸಂಬಂಧ ಆರೋಪಿಯ ಖುಲಾಸೆ ಸುಪ್ರೀಂಕೋರ್ಟ್ ತಡೆ ನೀಡಿತ್ತು. ಇಂಥ ಆದೇಶ ಭವಿಷ್ಯದಲ್ಲಿಅಪಾಯಕಾರಿ ಸನ್ನಿವೇಶಗಳನ್ನು ಸೃಷಿಸುವ ಸಾಧ್ಯತೆಯಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಆತಂಕ ವ್ಯಕ್ತಪಡಿಸಿದ್ದರು. ಮತ್ತೊಂದು ಪ್ರಕರಣದಲ್ಲಿ, ಐದು ವರ್ಷದ ಬಾಲಕಿಯ ಕೈ ಹಿಡಿದುಕೊಂಡು ಪ್ಯಾಂಟ್‌ನ ಜಿಪ್ ಕಳಚುವುದು ಪೊಸ್ಕೊ ಅಡಿಯಲ್ಲಿ ಲೈಂಗಿಕ ದೌರ್ಜನ್ಯವಾಗುವುದಿಲ್ಲ ಎಂದೂ ನ್ಯಾ.ಪುಷ್ಪಾ ತೀರ್ಪು ನೀಡಿದ್ದರು.
from India & World News in Kannada | VK Polls https://ift.tt/39svR7r