
ಬೆಂಗಳೂರು: ಗುರುವಾರದಿಂದ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳಲಿದ್ದು ಈ ಬಾರಿಯ ಅಧಿವೇಶನದಲ್ಲಿ ಶಾಸಕ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಪಕ್ಷದ ಕೆಲವು ನಾಯಕರು ಅದರಲ್ಲೂ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅವರ ಆಪ್ತರ ವಿರುದ್ಧವಾಗಿ ಬಂಡಾಯ ಎದ್ದಿರುವ ಬಸನಗೌಡ ಪಾಟೀಲ್ ಯತ್ನಾಳ್ ಸದನದಲ್ಲೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂತೆ ನಡೆದುಕೊಳ್ಳುತ್ತಾರಾ ಎಂಬುವುದು ಕುತೂಹಲ ಕೆರಳಿಸಿದೆ. ಈಗಾಗಲೇ ಬಿಎಸ್ ಯಡಿಯೂರಪ್ಪ ಕಾರ್ಯವೈಖರಿಯ ಬಗ್ಗೆ ಯತ್ನಾಳ್ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಕ್ಷೇತ್ರಕ್ಕೆ ಅನುದಾನ ನೀಡುತ್ತಿಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ. ಶಾಸಕ ಜಮೀರ್ ಅಹಮ್ಮದ್ ಖಾನ್ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಆದರೆ ಬಿಜೆಪಿ ಶಾಸಕರ ಕ್ಷೇತ್ರಕ್ಕೆ ನೀಡುತ್ತಿಲ್ಲ, ಕೇಳಿದರೆ ಹಣಕಾಸು ಕೊರತೆ ಕಾರಣ ನೀಡುತ್ತಾರೆ ಎಂದು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಯತ್ನಾಳ್ ಅವರ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸದನದಲ್ಲಿ ಅನುದಾನ ಹಾಗೂ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಸ್ವಪಕ್ಷದ ಶಾಸಕರೇ ಪ್ರಸ್ತಾಪ ಮಾಡಿದರೆ ಅದು ಆಡಳಿತ ಪಕ್ಷಕ್ಕೂ ಮುಜುಗರ ತಂದೊಡ್ಡುತ್ತದೆ. ಆಡಳಿತ ಪಕ್ಷದ ಶಾಸಕರಿಗೆ ಸರ್ಕಾರದ ಬಗ್ಗೆ ವಿಶ್ವಾಸ ಇಲ್ಲ ಎಂದು ವಿಪಕ್ಷಗಳು ಗದ್ದಲ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಈ ವಿಚಾರಗಳು ಚರ್ಚೆ ನಡೆಯಬಹುದು. ಸದನ ಆರಂಭಕ್ಕೂ ಮುನ್ನ ಬಿಎಸ್‌ವೈ ಶಾಸಕಾಂಗ ಪಕ್ಷದ ಸಭೆ ಕರೆದು ಅಲ್ಲಿ ಚರ್ಚೆ ನಡೆಸಿ ಸದನದಲ್ಲಿ ವಿಪಕ್ಷಗಳ ಆರೋಪಕ್ಕೆ ತಕ್ಕ ಉತ್ತರ ನೀಡುವಂತೆ ಸೂಚನೆ ನೀಡಬಹುದು. ಆದರೆ ಈ ಸೂಚನೆಯನ್ನು ಯತ್ನಾಳ್ ಪಾಲನೆ ಮಾಡುತ್ತಾರಾ ಎಂಬುವುದು ಸದ್ಯಕ್ಕೆ ಕುತೂಹಲ ಕೆರಳಿಸಿದೆ.
from India & World News in Kannada | VK Polls https://ift.tt/2Mtnbos