ಬೆಂಗಳೂರು: ಜನವರಿ 30 ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನ. ಹಂತಕ ನಾಥುರಾಮ್ ಗೋಡ್ಸೆ ಗುಂಡಿಗೆ ಮಹಾತ್ಮರು ಬಲಿಯಾದ ದಿನ. ಈ ದಿನವನ್ನು ಹುತಾತ್ಮರ ದಿನವನ್ನಾಗಿ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಗಣ್ಯರು ಗಾಂಧೀಜಿಯನ್ನು ಹಾಗೂ ಅವರ ತತ್ವ ಸಿದ್ದಾಂತವನ್ನು ನೆನಪಿಸಿಕೊಂಡಿದ್ದಾರೆ. ಸತ್ಯ, ಅಹಿಂಸೆಯ ಆದರ್ಶಗಳ ಸಾಕಾರ ಮೂರ್ತಿಯಂತಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪುಣ್ಯತಿಥಿಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ನಮ್ಮನ್ನು ಸದಾ ಎಚ್ಚರಿಸುವ ಗಾಂಧೀಜಿಯವರ ಜೀವನ, ಅವರ ನಡೆ ಮತ್ತು ನುಡಿಗಳ ಬೆಳಕಿನಲ್ಲಿ ಸಮೃದ್ಧ, ಸಶಕ್ತ ಭಾರತ ನಿರ್ಮಾಣದ ಹಾದಿಯಲ್ಲಿ ಮುನ್ನಡೆಯೋಣ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ಕೋಮು ಸೌಹಾರ್ದತೆಗಾಗಿ ತನ್ನ ಜೀವವನ್ನು ಬಲಿದಾನಗೈದ ಬದುಕಿನಲ್ಲಿ ಮಾತ್ರವಲ್ಲ ಸಾವಿನಲ್ಲಿಯೂ ಹೇಳಿಹೋಗಿರುವ ಪಾಠವನ್ನು ಮರೆಯದಿರೋಣ. ಗಾಂಧೀಜಿ ಎಂಬ ಜಗದ್ಗರುವಿನ ತತ್ವಾದರ್ಶಗಳ ಅನುಷ್ಠಾನ ನಮ್ಮ ಗುರಿಯಾಗಿರಲಿ. ರಾಷ್ಟ್ರಪಿತನಿಗೆ ಗೌರವದ ಶ್ರದ್ಧಾಂಜಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಮಹಾತ್ಮ ಗಾಂಧೀಯನ್ನು ನೆನಪಿಸಿಕೊಂಡಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮುಂಚೂಣಿ ನಾಯಕತ್ವ ವಹಿಸಿ,ಅಹಿಂಸೆ, ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ,ತಮ್ಮ ತತ್ವ, ಸಿದ್ಧಾಂತಗಳನ್ನು ಅಕ್ಷರಶಃ ಬದುಕಿ, 'ನನ್ನ ಜೀವನವೇ ನನ್ನ ಸಂದೇಶ' ಎಂದು ಸಾರಿದ, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ಹುತಾತ್ಮರ ದಿನಾಚರಣೆಯಾದ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟ, ತ್ಯಾಗ, ಹೋರಾಟದಲ್ಲಿ ಅವರು ಲಕ್ಷಾಂತರ ಜನರಿಗೆ ನೀಡಿದ ಸ್ಫೂರ್ತಿ ಸ್ಮರಿಸೋಣ. ಅವರ ತತ್ತ್ವಾದರ್ಶಗಳು ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಮಾದರಿ ಎಂದು ಸಚಿವ ಶ್ರೀರಾಮುಲು ಅವರು ಮಹಾತ್ಮ ಗಾಂಧೀಯನ್ನು ನೆನಪಿಸಿಕೊಂಡಿದ್ದಾರೆ.
from India & World News in Kannada | VK Polls https://ift.tt/3pwHYWR