ಹೊಸದಿಲ್ಲಿ: ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳ ಗಲ್ಲುಜಾರಿಯನ್ನು ಅನಿರ್ದಿಷ್ಟಾವಧಿವರೆಗೂ ಮುಂದೂಡಿದ ದಿಲ್ಲಿ ಪಟಿಯಾಲ ಹೌಸ್ ಕೋರ್ಟ್ ಆದೇಶ ಪ್ರಶ್ನಿಸಿ ಕೇಂದ್ರ ಸರಕಾರ ಸಲ್ಲಿಸಿದ ಅರ್ಜಿ ಕುರಿತು ದಿಲ್ಲಿಹೈಕೋರ್ಟ್ ಬುಧವಾರ ತೀರ್ಪು ಪ್ರಕಟಿಸಲಿದೆ. ರಜಾ ದಿನವಾದ ಭಾನುವಾರವೂ ವಿಶೇಷ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರು ಫೆ.2ರಂದು ತೀರ್ಪು ಕಾಯ್ದಿರಿಸಿದ್ದರು. ಮರಣದಂಡನೆಯಿಂದ ಬಚಾವಾಗಲು ಮುಕೇಶ್ ಕುಮಾರ್ ಸಿಂಗ್, ವಿನಯ್ ಶರ್ಮಾ, ಪವನ್ ಗುಪ್ತಾ ಹಾಗೂ ಅಕ್ಷಯ್ ಕುಮಾರ್ ಸಿಂಗ್ ದಿನಕ್ಕೊಂದು ದಾರಿ ಹುಡುಕತ್ತಲೇ ಇದ್ದು ಕಣ್ಣಾಮುಚ್ಚಾಲೆ ಮುಂದುವರಿದಿದೆ. ಈ ನಾಲ್ವರು ಅತ್ಯಾಚಾರಿಗಳನ್ನು ಫೆ.1ರಂದು ಗಲ್ಲಿಗೇರಿಸಲು ಹೊರಡಿಸಲಾಗಿದ್ದ ಡೆತ್ ವಾರಂಟ್‌ಗೆ ದಿಲ್ಲಿ ನ್ಯಾಯಾಲಯ ಜ.31ರಂದು ತಾತ್ಕಾಲಿಕ ತಡೆ ನೀಡಿದ್ದನ್ನು ಕೇಂದ್ರ ಸರಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ರಾಜ್ಯ ಸಭೆಯಲ್ಲಿ ಸದ್ದು: ನಿರ್ಭಯಾ ಅಪರಾಧಿಗಳ ನೇಣು ಸಂಗತಿ ರಾಜ್ಯಸಭೆ ಕಲಾಪದಲ್ಲಿ ಮಂಗಳವಾರ ಸದ್ದು ಮಾಡಿತು. ಆಪ್ ಸಂಸದ ಸಂಜಯ್ ಸಿಂಗ್, ಅಪರಾಧಿಗಳನ್ನು ನೇಣಿಗೇರಿಸುವುದು ವಿಳಂಬವಾಗುತ್ತಿರುವ ವಿಷಯ ಪ್ರಸ್ತಾಪಿಸಿ, ಈ ವಿಚಾರದಲ್ಲಿ ರಾಷ್ಟ್ರಪತಿ ಇಲ್ಲವೇ ಸಿಜೆಐ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.
from India & World News in Kannada | VK Polls https://ift.tt/2SmxBoS