
ಹೊಸದಿಲ್ಲಿ: ಅಯೋಧ್ಯೆ ವಿವಾದ ಬಗೆಹರಿಸುವಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ ವಿಫಲವಾಗಿದ್ದು, ಪ್ರಕರಣದ ವಿಚಾರಣೆಯನ್ನು ಪ್ರತಿದಿನ ನಡೆಸಲು ಇಂದು ದಿನಾಂಕ ನಿಗದಿಪಡಿಸುವ ನಿರೀಕ್ಷೆಯಿದೆ. ನೇಮಿಸಿದ್ದ ತ್ರಿಸದಸ್ಯ ಸಂಧಾನ ಸಮಿತಿ ಗುರುವಾರ ತನ್ನ ವರದಿಯನ್ನು ಕೋರ್ಟಿಗೆ ಸಲ್ಲಿಸಿದ್ದು, ವಿವಾದ ಬಗೆಹರಿಸುವ ನಿಟ್ಟಿನಲ್ಲಿ ನಡೆಸಿದ ತನ್ನ ಪ್ರಯತ್ನಗಳು ವಿಫಲವಾಗಿವೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸಿಜೆಐ ರಂಜನ್ ಗೊಗೋಯ್ ಮತ್ತು ಜಸ್ಟಿಸ್ ಎಸ್.ಎ ಬೊಬ್ಡೆ, ಡಿ.ವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನೊಳಗೊಂಡ ಪೀಠ, ಅಯೋಧ್ಯೆಯ ಮೂಲ ದಾವೆಯ ವಿಚಾರಣೆಯನ್ನು ಪ್ರತಿದಿನ ನಡೆಸಲು ಇಂದು (ಶುಕ್ರವಾರ) ದಿನಾಂಕ ನಿಗದಿಪಡಿಸಲಿದೆ. ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದಲ್ಲಿ 2.77 ಎಕರೆ ಭೂಮಿಯ ಮಾಲೀಕತ್ವ ಯಾರಿಗೆ ಸೇರಿದ್ದು ಎಂಬ ವಿಚಾರ ಇತ್ಯರ್ಥವಾಗಬೇಕಿದೆ. ನಿವೇಶನವನ್ನು ರಾಮಲಲ್ಲಾ, ನಿರ್ಮೋಹಿ ಆಖಾಡ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಮೂರು ಸಮಾನ ಭಾಗಗಳಾಗಿ ಹಂಚಿದ್ದ 2010ರ ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ ಹಲವು ಅರ್ಜಿಗಳನ್ನು ಒಟ್ಟಾಗಿ ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಳ್ಳಲಿದೆ. ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಎಫ್‌ಎಂಐ ಕಲೀಪುಲ್ಲಾ, ಖ್ಯಾತ ಸಂಧಾನಕಾರ ಹಾಗೂ ಹಿರಿಯ ವಕೀಲ ಶ್ರೀರಾಮ್ ಪಂಚು ಮತ್ತು ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಅವರನ್ನೊಳಗೊಂಡ ಸಂಧಾನಕಾರರ ತಂಡಕ್ಕೆ ಜುಲೈ 15ರಂದು ಕೊನೇ ಅವಕಾಶ ನೀಡಿ 15 ದಿನಗಳ ಅವಧಿ ವಿಸ್ತರಣೆ ಮಾಡಲಾಗಿತ್ತು. ಹಾಗಿದ್ದರೂ ಸಂಬಂಧಿತ ಕಕ್ಷಿದಾರರ ಜತೆ ಒಮ್ಮತದ ತೀರ್ಮಾನಕ್ಕೆ ಬರುವಲ್ಲಿ ವಿಫಲವಾಗಿ, ಸಂಧಾನ ಕೈಬಿಟ್ಟಿರುವುದಾಗಿ ವರದಿ ಸಲ್ಲಿಸಿತ್ತು. 155 ದಿನಗಳ ಅವಧಿಯ ಸಂಧಾನ ಪ್ರಕ್ರಿಯೆ ಮಾರ್ಚ್ 8ರಂದು ಫೈಜಾಬಾದ್‌ನಲ್ಲಿ ಆರಂಭವಾಗಿತ್ತು. ಈ ಅವಧಿಯಲ್ಲಿ ಸಂಧಾನಕಾರರು ವಿವಾದಕ್ಕೆ ಸಂಬಂಧಿಸಿದ ಹಲವಾರು ವ್ಯಕ್ತಿಗಳು ಮತ್ತು ಸಂಸ್ಥೆಗಳ ಜತೆ ಸರಣಿ ಸಮಾಲೋಚನೆ ನಡೆಸಿದ್ದರು. ಹಿಂದೂ ಸಂಘಟನೆಗಳಿಂದ ಸಂಧಾನಕ್ಕೆ ಪ್ರಬಲ ವಿರೋಧ ವ್ಯಕ್ತವಾಯಿತು. ಮುಸ್ಲಿಂ ಗುಂಪುಗಳು ಸಂಧಾನ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಸಹಮತ ವ್ಯಕ್ತಪಡಿಸಿದೆ ಎಂದು ವಾದಿಸಿದ್ದವು. ಸಂಧಾನದ ಮೇಜಿಗೆ ಬಂದು ವಿವಾದ ಬಗೆಹರಿಸುವಂತೆ ಎರಡೂ ಪಕ್ಷಗಳ ಮನವೊಲಿಸುವ ಆರಂಭಿಕ ಉದ್ದೇಶದಲ್ಲೇ ಸಂಧಾನ ಸಮಿತಿ ವಿಫಲವಾಯಿತು. ಹೀಗಾಗಿ ಸಂಧಾನ ಪ್ರಕ್ರಿಯೆ ಕೈಬಿಟ್ಟಿರುವುದಾಗಿ ವರದಿ ಸಲ್ಲಿಸಿತು.
from India & World News in Kannada | VK Polls https://ift.tt/2yxxAFq