ಹೈದರಾಬಾದ್: ಕರ್ನಾಟಕದ ರಾಜ್ಯಪಾಲರಾಗಿ ಎರಡು ತಿಂಗಳು ಕಾರ್ಯ ನಿರ್ವಹಿಸಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ (Konijeti Rosaiah) ಅವರು ಶನಿವಾರ ಬೆಳಿಗ್ಗೆ ನಿಧನರಾದರು. 88 ವರ್ಷದ ರೋಸಯ್ಯ ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ 2009-2010ರಲ್ಲಿ ಅವರು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ ರಾಜ್ಯಪಾಲರಾಗಿ 2014ರಲ್ಲಿ ಜೂನ್ 28ರಿಂದ ಆಗಸ್ಟ್ 31ರವರೆಗೆ ಅಲ್ಪಾವಧಿ ಸೇವೆ ಸಲ್ಲಿಸಿದ್ದರು. ಅವರು ತಮಿಳುನಾಡಿನ ರಾಜ್ಯಪಾಲರಾಗಿ 2011 ರಿಂದ 2016ರವರೆಗೆ ಕಾರ್ಯನಿರ್ವಹಣೆ ಮಾಡಿದ್ದರು. ಕರ್ನಾಟಕದ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರ ಅವಧಿ ಮುಗಿದಿದ್ದರಿಂದ ತಮಿಳುನಾಡಿನ ಜತೆಗೆ ಹೆಚ್ಚುವರಿಯಾಗಿ ಕರ್ನಾಟಕದ ಜವಾಬ್ದಾರಿ ನೀಡಲಾಗಿತ್ತು. 2014ರ ಸೆ. 1ರಂದು ವಜೂಭಾಯಿ ವಾಲಾ ರಾಜ್ಯಪಾಲರಾಗಿ ನೇಮಕಗೊಂಡಿದ್ದರಿಂದ ಎರಡೇ ತಿಂಗಳಿಗೆ ಕೋಸಯ್ಯ ಅವರ ಅವಧಿ ಅಂತ್ಯಗೊಂಡಿತ್ತು. ಹಲವು ದಶಕಗಳ ಕಾಲ ರಾಜಕೀಯದಲ್ಲಿದ್ದ ಅವರು ಕಾಂಗ್ರೆಸ್ ಶಾಸಕರಾಗಿ, ವಿಧಾಪರಿಷತ್ ಸದಸ್ಯರಾಗಿ, ಸಂಸದರಾಗಿ ಅನೇಕ ಬಾರಿ ಆಯ್ಕೆಯಾಗಿದ್ದರು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವು ಸಲ ಸಚಿವ ಸ್ಥಾನವನ್ನು ಪಡೆದಿದ್ದರು. ವಿಧಾನಸಭೆಯಲ್ಲಿ 15 ಬಾರಿ ಬಜೆಟ್ ಮಂಡಿಸಿದ ದಾಖಲೆ ಅವರಲ್ಲಿದೆ. 1933ರ ಜುಲೈ ತಿಂಗಳಲ್ಲಿ ಗುಂಟೂರು ಜಿಲ್ಲೆಯ ವೆಮೂರು ತಾಲೂಕಿನ ತೆನಾಲಿ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅವರು, ಆಂಧ್ರ ವಿವಿಯಲ್ಲಿ ವಾಣಿಜ್ಯ ಪದವಿ ಪಡೆದಿದ್ದರು. ಗುಂಟೂರಿನಲ್ಲಿ ಓದುವಾಗಲೇ ವಿದ್ಯಾರ್ಥಿ ನಾಯಕರಾಗಿ ಹೊರಹೊಮ್ಮಿದ್ದರು. ಅಲ್ಲಿಂದ ರಾಜಕೀಯಕ್ಕೆ ಧುಮುಕಿದ್ದರು. 1950ರ ಜೂನ್ 4ರಂದು ಶಿವಾಲಕ್ಷ್ಮಿ ಅವರನ್ನು ವಿವಾಹವಾಗಿದ್ದ ರೋಸಯ್ಯ ಅವರಿಗೆ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದಾರೆ.
from India & World News in Kannada | VK Polls https://ift.tt/3lBitDA