ಪ್ರಿಯಾಂಕಾ ಗಾಂಧಿ ಆರೋಪ ಸುಳ್ಳೇ?: ಮಕ್ಕಳ ಇನ್‌ಸ್ಟಾ ಖಾತೆ ಹ್ಯಾಕ್ ಆಗಿಲ್ಲ ಎಂದ ತನಿಖಾ ಮೂಲಗಳು

ಹೊಸದಿಲ್ಲಿ: ತಮ್ಮ ಮಕ್ಕಳ ಖಾತೆಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಲಾಗಿದೆ ಎಂದು ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದ ನಾಯಕಿ ಅವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎನ್ನುವುದು ಪ್ರಾಥಮಿಕ ತನಿಖೆಗಳಿಂದ ಗೊತ್ತಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಅವರ ಮಕ್ಕಳ ಇನ್‌ಸ್ಟಾಗ್ರಾಂ ಖಾತೆಗಳು ಹ್ಯಾಕ್ ಆಗಿಲ್ಲ ಎಂದು ಪ್ರಾಥಮಿಕ ತನಿಖೆಯ ಮೂಲಗಳು ಹೇಳಿವೆ. ತಮ್ಮ ಮಕ್ಕಳ ಇನ್‌ಸ್ಟಾಗ್ರಾಂ ಖಾತೆಗಳನ್ನು ಹ್ಯಾಕ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದರು. 18 ವರ್ಷದ ಮಿರಾಯ ವಾದ್ರಾ ಮತ್ತು 20 ವರ್ಷದ ರೈಹಾನ್ ವಾದ್ರಾ ಅವರ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಮಂಗಳವಾರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ತುರ್ತು ತನಿಖೆಗೆ ಆದೇಶಿಸಲಾಗಿತ್ತು. ಪ್ರಾಥಮಿಕ ತನಿಖೆ ನಡೆಸಿರುವ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ ಸಿಇಆರ್‌ಟಿ-ಇನ್ (CERT-IN) ಇನ್‌ಸ್ಟಾ ಖಾತೆಗಳು ಹ್ಯಾಕ್ ಆಗಿಲ್ಲ ಎನ್ನುವುದನ್ನು ಕಂಡುಕೊಂಡಿದೆ. 'ಫೋನ್ ಕದ್ದಾಲಿಸುವುದು ಇರಲಿ, ಅವರು ನನ್ನ ಮಕ್ಕಳ ಇನ್‌ಸ್ಟಾಗ್ರಾಂ ಖಾತೆಗಳನ್ನೂ ಹ್ಯಾಕ್ ಮಾಡುತ್ತಿದ್ದಾರೆ. ಅವರಿಗೆ ಬೇರೆ ಯಾವುದೇ ಕೆಲಸ ಇಲ್ಲವೇ?' ಎಂದು ತಮ್ಮ ರಾಜಕೀಯ ವಿರೋಧಿಗಳ ಮೇಲೆ ಕೇಂದ್ರ ಸಂಸ್ಥೆಗಳ ದಾಳಿಗಳು ಹಾಗೂ ಅಕ್ರಮ ಫೋನ್ ಕದ್ದಾಲಿಕೆಯ ಆರೋಪಗಳ ಕುರಿತಾದ ಪ್ರಶ್ನೆಗೆ ಪ್ರಿಯಾಂಕಾ ಪ್ರತಿಕ್ರಿಯೆ ನೀಡಿದ್ದರು. ಪ್ರಿಯಾಂಕಾ ಅವರು ಈ ಕುರಿತು ಯಾವುದೇ ಅಧಿಕೃತ ದೂರು ನೀಡಿರಲಿಲ್ಲ. ಆದರೂ ಅವರ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ, ತಾನೇ ತನಿಖೆಗೆ ಸೂಚಿಸಲು ನಿರ್ಧಾರ ತೆಗೆದುಕೊಂಡಿತ್ತು. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಪ್ರಕರಣವನ್ನು ಸಿಇಆರ್‌ಟಿ-ಇನ್‌ಗೆ ವಹಿಸಿತ್ತು. ಹ್ಯಾಕರ್‌ಗಳನ್ನು ಪತ್ತೆ ಮಾಡುವ ಹಾಗೂ ಸೈಬರ್ ದಾಳಿಗಳನ್ನು ತಡೆಯುವ ಅತ್ಯಾಧುನಿಕ ಲ್ಯಾಬ್ ಹೊಂದಿರುವ ಸಿಇಆರ್‌ಟಿ-ಇನ್ ಈ ಬಗ್ಗೆ ಪರಿಶೀಲನೆ ನಡೆಸಿತ್ತು. ಈಗ ಪ್ರಾಥಮಿಕ ತನಿಖೆಯ ಮಾಹಿತಿ ಹೊರಬಂದಿರುವುದು ಪ್ರಿಯಾಂಕಾ ಅವರ ಹೇಳಿಕೆಯ ಕುರಿತು ಚರ್ಚೆಗೆ ಒಳಗಾಗಿದೆ. ಪ್ರಿಯಾಂಕಾ ಅವರು ಸರ್ಕಾರದ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದಾರೆಯೇ ಅಥವಾ ಸರ್ಕಾರದ ಪರವಾಗಿ ತನಿಖೆ ನಡೆದಿದೆಯೇ ಎಂಬ ವಾದಗಳು ಹುಟ್ಟಿಕೊಂಡಿವೆ. ಪೆಗಾಸಸ್ ಬೇಹುಗಾರಿಕೆ ವಿವಾದ ಮುನ್ನೆಲೆಗೆ ಬಂದಾಗ ಅಕ್ರಮ ಫೋನ್ ಕದ್ದಾಲಿಕೆಯ ಆರೋಪಗಳು ಹೆಚ್ಚಾಗಿವೆ. ಈ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪ್ರಿಯಾಂಕಾ ಹಲವು ಬಾರಿ ಆಗ್ರಹಿಸಿದ್ದರು. ಯೋಗಿ ಆದಿತ್ಯನಾಥ್ ಸರ್ಕಾರವು ತಮ್ಮ ಪಕ್ಷದ ಮುಖಂಡರ ಫೋನ್‌ಗಳನ್ನು ಟ್ಯಾಪ್ ಮಾಡುತ್ತಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಭಾನುವಾರ ಆರೋಪಿಸಿದ್ದರು. 'ನಮ್ಮ ಎಲ್ಲ ಫೋನ್‌ಗಳನ್ನೂ ಕದ್ದಾಲಿಕೆ ಮಾಡಲಾಗುತ್ತಿದೆ. ನಮ್ಮ ಮಾತುಕತೆಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗುತ್ತಿದೆ. ಪಕ್ಷದ ಕಚೇರಿಯಲ್ಲಿರುವ ಎಲ್ಲ ಫೋನ್‌ಗಳನ್ನೂ ಕದ್ದು ಕೇಳಿಸಿಕೊಳ್ಳುತ್ತಿದ್ದಾರೆ. ಸಂಜೆ ವೇಳೆ ಸ್ವತಃ ಮುಖ್ಯಮಂತ್ರಿಯೇ ಕುಳಿತು ಕೆಲವು ರೆಕಾರ್ಡ್‌ಗಳನ್ನು ಆಲಿಸುತ್ತಿದ್ದಾರೆ. ನೀವು ನಮ್ಮನ್ನು ಸಂಪರ್ಕಿಸಿದರೆ, ನಿಮ್ಮ ಕರೆಯನ್ನು ಅವರು ಆಲಿಸುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ' ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಯೋಗಿ ಆದಿತ್ಯನಾಥ್, 'ಬಹುಶಃ ಅಖಿಲೇಶ್ ಅವರು ತಾವು ಅಧಿಕಾರದಲ್ಲಿ ಇದ್ದಾಗ ಇದೇ ರೀತಿ ಮಾಡಿರಬೇಕು. ಹೀಗಾಗಿ ಬೇರೆಯವರ ವಿರುದ್ಧ ಆರೋಪ ಮಾಡುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.


from India & World News in Kannada | VK Polls https://ift.tt/3mnlx6T

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...