
ರಾಘವೇಂದ್ರ ಮೇಗರವಳ್ಳಿ, ತೀರ್ಥಹಳ್ಳಿ ಶಿವಮೊಗ್ಗ: ಮಲೆನಾಡ ಭಾಗದ ಭೂ ಸಾಗುವಳಿ ರೈತರು ದಿನ ಕಳೆದಂತೆ ಕಾನೂನಿನ ಇಕ್ಕಟ್ಟಿಗೆ ಸಿಕ್ಕಿ ಬವಣೆ ಅನುಭವಿಸುತ್ತಿದ್ದಾರೆ. ಪ್ರತಿ ಚುನಾವಣೆ ಸಂದರ್ಭ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡುವ ಮತ ರಾಜಕಾರಣದ ಭರವಸೆ ನಂಬಿ ರೈತರು ಮೋಸ ಹೋದಂತಿದೆ. ಏತ್ಮನಧ್ಯೆ, ಬಗರ್‌ಹುಕುಂ ಭೂ ಸಾಗುವಳಿ ಮಂಜೂರಾತಿ ಪ್ರಕ್ರಿಯೆ ತಾಲೂಕಿನಲ್ಲಿ ಬಹುತೇಕ ಸ್ಥಗಿತವಾಗಿದ್ದು ಸಾವಿರಾರು ಅರ್ಜಿ ವಿಲೇವಾರಿ ಆಗದೆ ಬಾಕಿ ಉಳಿದಿದೆ. ಭೂ ಮಂಜೂರಾತಿ ಕುರಿತ ಸರಕಾರದ ಕಠಿಣ ನಿಯಮ ಬಗರ್‌ಹುಕುಂ ಸಾಗುವಳಿ ರೈತರ ಬದುಕಿಗೆ ಬರೆ ಎಳೆದಂತಿದೆ. ರೈತರ ಭೂ ಹಕ್ಕಿಗಾಗಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಸುಮಾರು 25 ವರ್ಷದ ಹಿಂದೆ ಆಗುಂಬೆಯಿಂದ ಶಿವಮೊಗ್ಗದವರೆಗೂ ಪಾದಯಾತ್ರೆ ಚಳವಳಿ ಮಾಡಿದ್ದರು. ಈಗ ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದು ಸರಕಾರದ ಪ್ರಭಾವಿ ಸ್ಥಾನದ ಅಧಿಕಾರವಧಿಯಲ್ಲೂ ರೈತರಿಗೆ ಭೂ ಹಕ್ಕು ಮರೀಚಿಕೆ ಆದಂತಿದೆ. ಸರಕಾರಕ್ಕಿಲ್ಲಇಚ್ಛೆ ಬಗರ್‌ಹುಕುಂ ಸಾಗುವಳಿ ನಂಬಿ ತಾಲೂಕಿನಲ್ಲಿ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಅವಿಭಕ್ತ ಕುಟುಂಬಗಳ ವಿಭಜನೆ ನಂತರ ಅನಿವಾರ‍್ಯವಾಗಿ ಬಗರ್ ಹುಕುಂ ಭೂ ಸಾಗುವಳಿ ವಿಸ್ತಾರಗೊಂಡಿದೆ. ಬಗರ್‌ಹುಕುಂ ಹೆಸರಲ್ಲಿ ದುರಾಸೆ ಒತ್ತುವರಿ ಪ್ರಕರಣಗಳು ಲೆಕ್ಕವಿಲ್ಲ. ದುರಾಸೆ, ಬದುಕಿಗಾಗಿ ಮಾಡಿದ ಬಗರ್‌ಹುಕುಂ ಸಾಗುವಳಿಯನ್ನು ಏಕಕ್ರಮ ದಡಿ ಗುರುತಿಸುವ ಸರಕಾರದ ಧೋರಣೆ ಪ್ರಶ್ನಾರ್ಹವಾಗಿದೆ. ಸಾಗುವಳಿ ಪ್ರದೇಶದಲ್ಲಿ ಲಕ್ಷಾಂತರ ರೂ ಬಂಡವಾಳ ತೊಡಗಿಸಿ ಬದುಕು ಕಟ್ಟಿಕೊಂಡ ಅರ್ಹ ಕುಟುಂಬಗಳಿಗೆ ಹಕ್ಕು ನೀಡಲು ಸರಕಾರಕ್ಕೆ ಪೂರ್ಣ ಇಚ್ಛೆ ಇದ್ದಂತಿಲ್ಲ. ಅರ್ಜಿದಾರರ ಅರ್ಹತೆಯನ್ನು ವರ್ಗೀಕರಿಸಿ ಮಂಜೂರಾತಿ ಕ್ರಮ ಸರಳಗೊಳಿಸಬೇಕೆಂಬ ಹಲವು ವರ್ಷದ ಬೇಡಿಕೆ ಈಡೇರಿಸಲು ಸರಕಾರದ ನಿರ್ಲಕ್ಷ್ಯ ರೈತರನ್ನು ಬಿಕ್ಕಟ್ಟಿಗೆ ಸಿಕ್ಕಿಸಿದೆ. ಇಲಾಖೆಗಳ ವ್ಯಾಜ್ಯ ಅರಣ್ಯ, ಕಂದಾಯ ಭೂ ಪ್ರದೇಶ ಹಂಚಿಕೆ, ಹದ್ದುಬಸ್ತ್ ಗಡಿ ನಿಗದಿ ಪ್ರಕ್ರಿಯೆ ಅಂತಿಮಗೊಳ್ಳದಿರುವುದು ಭೂ ಮಂಜೂರಾತಿ ಪ್ರಕ್ರಿಯೆ ವಿಳಂಬಕ್ಕೆ ಪ್ರಮುಖ ಕಾರಣವಾದಂತಿದೆ. ಸರಕಾರಿ ಭೂ ಪ್ರದೇಶದ ಒಡೆತನದ ಮಾತೃ ಸ್ಥಾನದ ಕಂದಾಯ ಇಲಾಖೆ ಇತ್ತೀಚಿನ ವರ್ಷದಲ್ಲಿ ಅರಣ್ಯ ಇಲಾಖೆಗೆ ತಲೆತಗ್ಗಿಸುವಂತಹ ಸನ್ನಿವೇಶ ಉದ್ಬವಿಸಿದ್ದರೂ ಸರಕಾರ ಮಾತ್ರ ಕಾನೂನು ತಿದ್ದುಪಡಿಗೆ ಮುಂದಾಗಿಲ್ಲ. ಸೊಪ್ಪಿನಬೆಟ್ಟ, ಕಾನು, ಕುಮ್ಕಿ, ಬಾನೆ, ಸರಕಾರಿ, ಖರಾಬ್, ಅಧಿಸೂಚಿತ ಅರಣ್ಯ ಪ್ರದೇಶ ಒಡೆತನ ಕುರಿತಾಗಿ ಕಂದಾಯ, ಅರಣ್ಯ ಇಲಾಖೆ ನಡುವೆ ವ್ಯಾಜ್ಯ ಬಗೆಹರಿದಿಲ್ಲ. ಸ್ವಾತಂತ್ರ್ಯ ಪೂರ್ವ ಕಂದಾಯ ಪ್ರದೇಶದಲ್ಲಿನ ಅಧಿಸೂಚಿತ ಅರಣ್ಯ ಪ್ರದೇಶದ ಕುರಿತು ಇನ್ನು ದಾಖಲೆ ಪತ್ರಗಳು ಪರಿಪೂರ್ಣವಾಗಿಲ್ಲ. ಜನಸಂಖ್ಯೆ ಹೆಚ್ಚಳ ಗಮನಿಸಿ ಅಧಿಸೂಚಿತ ಅರಣ್ಯ ವಿಸ್ತೀರ್ಣದ ಪರಿಷ್ಕರಣೆ ಕ್ರಮವುಆಗಿಲ್ಲ. ಬಗರ್ ಹುಕುಂ ಭೂ ಸಾಗುವಳಿಗೆ ಹಕ್ಕುಪತ್ರ ನೀಡಲುಇರುವ ಅನೇಕ ಅಡ್ಡಿ ಆತಂಕಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಿದಂತಿಲ್ಲ. ಹಕ್ಕುಪತ್ರ ಸದ್ಯಕ್ಕೆ ಚುನಾವಣೆ ಅಸ್ತ್ರ ವಾಗಿಯೇ ಉಳಿದುಕೊಂಡಂತಿದ್ದು ರೈತರಿಗೆ ಕಿರಿ ಕಿರಿಯಿಂದ ಮುಕ್ತಿಸಿಕ್ಕಿಲ್ಲ. 5 ಬಾರಿ ಅವಧಿ ಗಡುವು ವಿಸ್ತರಣೆ ..! 1991ರಲ್ಲಿಫಾರಂ- 50ರಡಿ 10,232 ರೈತರು ಅರ್ಜಿ ಸಲ್ಲಿಸಿದ್ದು 794 ರೈತರಿಗೆ ಭೂ ಹಕ್ಕು ಸಿಕ್ಕಿದೆ. 1999ರಲ್ಲಿ ಫಾರಂ-53ರಡಿ 11,779 ರೈತರು ಅರ್ಜಿ ಸಲ್ಲಿಸಿದ್ದು 2,663 ರೈತರಿಗೆ ಭೂ ಹಕ್ಕು ದೊರಕಿದೆ. 2017ರಲ್ಲಿ ಫಾರಂ-57ರಡಿ 11,497 ರೈತರು ಅರ್ಜಿ ಸಲ್ಲಿಸಿದ್ದು ಕೇವಲ 11 ರೈತರಿಗೆ ಹಕ್ಕುಪತ್ರ ನೀಡಲಾಗಿದೆ. ಸುಮಾರು 30 ವರ್ಷ ಅವಧಿಯಲ್ಲಿ ಅತ್ಯಲ್ಪ ಸಂಖ್ಯೆ ಅರ್ಜಿಗೆ ಭೂ ಮಂಜೂರಾತಿ ದೊರಕಿದೆ. ಸರಕಾರ ಭೂ ಮಂಜೂರಾತಿ ಅರ್ಜಿಗೆ 5 ವರ್ಷ ಅವಧಿ ನಿಗದಿಸಿದೆ. ಅರ್ಜಿಯ ನಿಗದಿ ಗಡುವು ಅವಧಿಯನ್ನು 5 ಬಾರಿ ವಿಸ್ತರಿಸಿದರೂ ರೈತರಿಗೆ ಸಾಗುವಳಿ ಹಕ್ಕುಪತ್ರ ಸಿಗದಂತಾಗಿದೆ. ಅರ್ಹ ಬಗರ್‌ಹುಕುಂ ಸಾಗುವಳಿ ರೈತರಿಗೆ ಭೂ ಹಕ್ಕು ನೀಡದ ಸರಕಾರಕ್ಕೆ ಧಿಕ್ಕಾರ ಇದೆ. ಭೂ ಹಕ್ಕಿಗೆ ಹೋರಾಡಿದ ಆರಗ ಜ್ಞಾನೇಂದ್ರ ಅಧಿಕಾರವಧಿಯಲ್ಲಿ ರೈತರಿಗೆ ಹಕ್ಕುಪತ್ರ ಸಿಗಲಿ. ಈ ವಿಷಯವಾಗಿ ವಿಫಲರಾದರೆ ರೈತರಿಗೆ ಆರಗ ಮೋಸ ಮಾಡಿದಂತೆ. ಯಾವುದೇ ನಿರ್ಬಂಧ ಇಲ್ಲದೆ ಕನಿಷ್ಟ 3 ಎಕರೆ ಸಾಗುವಳಿ ಜಮೀನು ಮಂಜೂರಾತಿಗೆ ಸರಕಾರ ಕಾಯಿದೆ ರೂಪಿಸಲಿ. ನೆಂಪೆ ದೇವರಾಜ್, ಸಂಚಾಲಕರು ಜಿಲ್ಲಾ ಮಲೆನಾಡು ಸಂಘರ್ಷ ಹೋರಾಟ ಸಮಿತಿ
from India & World News in Kannada | VK Polls https://ift.tt/3GSC628