ಬೆಂಗಳೂರು: ಉದ್ಯಮಿಯೊಬ್ಬರ ಮನೆಯಲ್ಲಿ ಪಿಓಪಿ ಕೆಲಸ ಮಾಡುತ್ತಿದ್ದವ ಕಾರು ಚಾಲಕನ ತುಟಿಯನ್ನು ಕಚ್ಚಿ ತುಂಡರಿಸಿದ ವಿಚಿತ್ರ ಘಟನೆ ಸಂಜಯ್ ನಗರದಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ಧಾರೆ. ಸಂಜಯ್ ನಗರದ ಉದ್ಯಮಿ ಕೃಷ್ಣ ಎಂಬುವವರ ಮನೆಯಲ್ಲಿ ಕಾರು ಚಾಲಕನಾಗಿರುವ ಸಂತೋಷ್(31) ಗಾಯಗೊಂಡವರು. ಅದೇ ಮನೆಯಲ್ಲಿ ಪಿಓಪಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ರಾಜೇಶ್ ಶ್ಯಾಮ್ (30) ತುಟಿ ಕಚ್ಚಿ ತುಂಡರಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಕಳೆದ 6 ತಿಂಗಳಿನಿಂದ ಕೃಷ್ಣ ಅವರ ಮನೆಯಲ್ಲಿ ಸಂತೋಷ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಡಿ.22ರಂದು ರಾತ್ರಿ 9.30ರಲ್ಲಿ ಸಂತೋಷ್, ರಾಜೇಶ್ ಶ್ಯಾಮ್ ಹಾಗೂ ವಾಚ್‌ಮ್ಯಾನ್ ಈಶ್ವರಪ್ಪ ಊಟ ಮಾಡಿ ಮಲಗಿದ್ದರು. ಆ ವೇಳೆ ಈಶ್ವರಪ್ಪ ಮೇಲೆ ರಾಜೇಶ್ ಶ್ಯಾಮ್ ನೀರು ಚೆಲ್ಲಿ ತೊಂದರೆ ಕೊಡುತ್ತಿದ್ದ. ಆಗ ಮಲಗಿರುವವರ ಮೇಲೆ ನೀರು ಚೆಲ್ಲಿ ಏಕೆ ತೊಂದರೆ ಕೊಡುತ್ತಿದ್ದೀಯಾ ಎಂದು ಸಂತೋಷ್ ಆತನನ್ನು ಪ್ರಶ್ನಿಸಿದ್ದ. ಇದರಿಂದ ಆಕ್ರೋಶಗೊಂಡ ರಾಜೇಶ್ ಶ್ಯಾಮ್, ಅವಾಚ್ಯ ಶಬ್ದಗಳಿಂದ ನಿಂದಿಸಿ ಸಂತೋಷ್ ಜತೆಗೆ ಜಗಳ ಮಾಡಿದ್ದ. ಜಗಳ ತಾರಕಕ್ಕೇರಿದಾಗ ಆರೋಪಿ ರಾಜೇಶ್ ಶ್ಯಾಮ್, ಸಂತೋಷ್‌ನ ತುಟಿಯನ್ನು ಕಚ್ಚಿದ್ದ ಪರಿಣಾಮ ಸಂತೋಷ್ ಮೇಲ್ಭಾಗದ ತುಟಿ ಹರಿದು ಗಂಭೀರವಾಗಿ ಗಾಯವಾಗಿತ್ತು. ‘ನನ್ನ ತುಟಿ ಎಲ್ಲಿ ಬಿದ್ದು ಹೋಯಿತು ಎಂಬುದೇ ನನಗೆ ಗೊತ್ತಾಗಲಿಲ್ಲ. ನಂತರ ಹುಡುಕಿದರೂ ಸಿಗಲಿಲ್ಲ. ನಮ್ಮ ಜತೆಗೆ ಕೆಲಸ ಮಾಡುತ್ತಿದ್ದ ತಿಪ್ಪೇಶ್ ಜಗಳ ಬಿಡಿಸಿ ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಂತೋಷ್ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸಂಜಯ್ ನಗರ ಪೊಲೀಸರು ಆರೋಪಿ ರಾಜೇಶ್ ಶ್ಯಾಮ್‌ನನ್ನು ಬಂಧಿಸಿದ್ದಾರೆ.
from India & World News in Kannada | VK Polls https://ift.tt/32Fj1lv