ಉಡುಪಿ: ಓಮಿಕ್ರಾನ್ ಸೋಂಕು ಹರಡುವುದನ್ನು ನಿಯಂತ್ರಿಸಲು ಡಿ.28ರಿಂದ ಜ.7ರ ತನಕ ಪ್ರತಿದಿನ ರಾತ್ರಿ 10ರಿಂದ ಬೆಳಗ್ಗೆ 10ರವರೆಗೆ ಜಾರಿಯಲ್ಲಿದ್ದು, ಮದುವೆ, ಸಭೆ, ಸಮಾರಂಭವನ್ನು 300 ಜನರಿಗೆ ಸೀಮಿತಗೊಳಿಸಿ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ತಿಳಿಸಿದ್ದಾರೆ. ಡಿ.30ರಿಂದ ಜ.2ರ ತನಕ ರೆಸ್ಟೋರೆಂಟ್, ಹೋಟೆಲ್, ಕ್ಲಬ್, ಪಬ್ಗಳು ಶೇ.50 ಆಸನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬೇಕು. 2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶಾವಕಾಶ ನೀಡಬೇಕು. ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್-19 ಲಸಿಕೆಯ ಎರಡು ಡೋಸ್ ಪಡೆದು, ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು ಎಂದರು. ಯಕ್ಷಗಾನ, ಕೋಲ, ಕಂಬಳವನ್ನು ರಾತ್ರಿ 10ರೊಳಗೆ ಮುಗಿಸಬೇಕು. ರಾತ್ರಿ 10ರಿಂದ ಬೆಳಗ್ಗೆ 5ರ ತನಕ ಅಗತ್ಯ ಚಟುವಟಿಕೆಗಳ ಹೊರತು ಜನರ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ರೋಗಿಗಳು, ಸಹಾಯಕರು ತುರ್ತು ಅಗತ್ಯಕ್ಕಾಗಿ ವ್ಯಕ್ತಿಗಳನ್ನು ಸ್ಥಳಾಂತರಿಸಲು ಅನುಮತಿ ನೀಡಲಾಗಿದೆ. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕೈಗಾರಿಕೆಗಳು, ಕಂಪನಿಗಳಿಗೆ ರಾತ್ರಿ ವೇಳೆ ಕಾರ್ಯಾಚರಿಸಲು ಅನುಮತಿ ನೀಡಲಾಗಿದೆ. ನೌಕರರು ಸಂಸ್ಥೆಯಿಂದ ನೀಡಿದ ಗುರುತಿನ ಚೀಟಿ, ದಾಖಲೆಗಳನ್ನು ತಮ್ಮ ಪ್ರಯಾಣ ಸಂದರ್ಭ ಹೊಂದಿರಬೇಕು. ದೂರವಾಣಿ, ಅಂತರ್ಜಾಲ ಸೇವೆ ಒದಗಿಸುವ ನೌಕರರು ಹಾಗೂ ವಾಹನಗಳು ಸೂಕ್ತ ಗುರುತಿನ ಚೀಟಿಯೊಂದಿಗೆ ಸಂಚರಿಸಬಹುದು. ಐಟಿ ಸಿಬ್ಬಂದಿ, ಕಾರ್ಮಿಕರ ಹೊರತು ಅನ್ಯರು ಮನೆಗಳಲ್ಲಿಯೇ ಕಾರ್ಯನಿರ್ವಹಿಸಬೇಕು(ವರ್ಕ್ ಫ್ರಂ ಹೋಂ) ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ವೈದ್ಯಕೀಯ, ತುರ್ತು ಹಾಗೂ ಔಷಧಾಲಯ ಸಹಿತ ಅಗತ್ಯ ಸೇವೆಗಳಲ್ಲಿ ವ್ಯತ್ಯಯವಾಗದು. ಟ್ರಕ್ಗಳಲ್ಲಿ ಸಾಗಿಸುವ ಸರಕುಗಳು, ಸರಕು ವಾಹನ, ಖಾಲಿ ವಾಹನ ಓಡಾಟಕ್ಕೆ ಅವಕಾಶವಿದೆ. ಇ-ಕಾಮರ್ಸ್ ಕಂಪನಿಗಳು, ಹೋಂ ಡೆಲಿವರಿ ಕೆಲಸ ಮುಂದುವರಿಸಬಹುದು. ಬಸ್ ಸೇವೆ, ರೈಲು, ವಿಮಾನ ಪ್ರಯಾಣಕ್ಕೆ ಅನುಮತಿಯಿದ್ದು, ಸಾರ್ವಜನಿಕರ ಸಾರಿಗೆ, ಖಾಸಗಿ ವಾಹನ, ಟ್ಯಾಕ್ಸಿ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಪ್ರಯಾಣ ಸಂದರ್ಭ ಪ್ರಯಾಣಿಕರು ಸೂಕ್ತ ಪ್ರಯಾಣದ ದಾಖಲೆ, ಟಿಕೆಟ್ ಹೊಂದಿರಬೇಕು. ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವವರು 72 ಗಂಟೆ ಮೊದಲಿನ ಆರ್ಟಿಪಿಸಿಆರ್ ನೆಗೆಟಿವ್ ಹೊಂದಿರಬೇಕು, ಏಳು ದಿನಗಳ ಕ್ವಾರಂಟೈನ್ಗೆ ಒಳಗಾಗಿ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬೇಕು. ಜಿಲ್ಲೆಯ ಪಾಸಿಟಿವಿಟಿ ಕಳೆದೊಂದು ವಾರದಲ್ಲಿ ಶೇ.0.20ರಷ್ಟಿದ್ದು ಮಣಿಪಾಲದಲ್ಲಿ ಕಳೆದೆರಡು ವಾರದಲ್ಲಿ 10,733 ಜನರನ್ನು ಪರೀಕ್ಷೆಗೊಳಪಡಿಸಿದ್ದು, 35 ಪ್ರಕರಣ ಪಾಸಿಟಿವ್(ಶೇ.0.30 ಪಾಸಿಟಿವಿಟಿ) ಕಂಡು ಬಂದಿದೆ. 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆಗೆ ಸಿದ್ಧತೆ ನಡೆದಿದೆ ಎಂದರು. ಡಿ.30ರಿಂದ ಜ.2 ಕ್ಲಬ್, ಪಬ್, ರೆಸ್ಟೋರೆಂಟ್, ಹೋಟೆಲ್, ಖಾಸಗಿ ಸ್ಥಳಗಳಲ್ಲಿ ಡಿಜೆ, ಆರ್ಕೆಸ್ಟ್ರಾ, ಸಮೂಹ ನೃತ್ಯ ಸಹಿತ ಯಾವುದೇ ವಿಶೇಷ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಹೊಸ ವರ್ಷ ಆಚರಣೆಗೆ ಸಾರ್ವಜನಿಕ ಸ್ಥಳ ಸೇರಿದಂತೆ ರಸ್ತೆ, ಉದ್ಯಾನವನ, ಆಟದ ಮೈದಾನ ಬಳಸುವಂತಿಲ್ಲ. ಅಪಾರ್ಟ್ಮೆಂಟ್ ಅಸೋಸಿಯೇಶನ್ಗೆ ಸಂಬಂಧಿಸಿ ಸಾಮಾಜಿಕ ಅಂತರ ಹಾಗೂ ಕೋವಿಡ್ ಸಮುಚಿತ ವರ್ತನೆಯೊಂದಿಗೆ ತಮ್ಮ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿದೆ. ಗುಂಪು ನೃತ್ಯ ಡಿಜೆ/ಡಾನ್ಸ್ ಪ್ಲೋರ್ನಂತಹ ಯಾವುದೇ ವಿಶೇಷ ಕಾರ್ಯಕ್ರಮ ಆಯೋಜಿಸುವಂತಿಲ್ಲ, ಅದಕ್ಕೆ ಸಂಘಟಕರೇ ಜವಾಬ್ದಾರಿ. ಕಾನೂನು ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯಿದೆಯಡಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
- ಉಡುಪಿ ಜಿಲ್ಲೆಯಲ್ಲಿ ಈ ತನಕ ಎರಡು ಓಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು ಜಿನೋಮಿಕ್ಸ್ ಸೀಕ್ವೆನ್ಸಿಂಗ್ ನಿಟ್ಟಿನಲ್ಲಿ ಈ ತನಕ 180 ಮಾದರಿ ಕಳುಹಿಸಿದ್ದು 58 ಮಾದರಿಗಳ ಫಲಿತಾಂಶ ಬರಲು ಬಾಕಿಯಿದೆ.
- ಜ.7ರ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ 2022ರ ಜ.18ರಂದು ನಡೆಯುವ ಉಡುಪಿ ಪರ್ಯಾಯಕ್ಕೆ ಸಂಬಂಧಿಸಿ ಪರ್ಯಾಯ ಸ್ವಾಗತ ಸಮಿತಿ ಪದಾಧಿಕಾರಿಗಳ ಸಭೆ ಕರೆದು ಸಮಾಲೋಚಿಸಲಾಗುವುದು.
from India & World News in Kannada | VK Polls https://ift.tt/3FyQj45