ಸುನಿಲ್ ಪೊನ್ನೇಟಿ ಮಡಿಕೇರಿ: ಪ್ರವಾಸೋದ್ಯಮದ ಮೂಲಕ ಗುರುತಿಸಿಕೊಂಡಿರುವ ಪುಟ್ಟ ಜಿಲ್ಲೆ ಕೊಡಗಿಗೆ ರೈಲ್ವೆ ಸಂಪರ್ಕ ಕನಸಾಗಿಯೇ ಉಳಿಯುವ ಲಕ್ಷಣಗಳು ಗೋಚರಿಸುತ್ತಿರುವ ಬೆನ್ನಲ್ಲೇ ಮಿನಿ ವಿಮಾನ ನಿಲ್ದಾಣವೂ ಗಗನ ಕುಸುಮವಾಗುವ ಸಾಧ್ಯತೆಗಳು ಅಧಿಕವಾಗಿದೆ. ಸಂಬಂಧಪಟ್ಟ ಇಲಾಖೆಗಳ ತಜ್ಞರ ತಂಡ ಈಗಾಗಲೇ ಹಲವು ಬಾರಿ ಇಲ್ಲಿಗೆ ಆಗಮಿಸಿ ಪರಿಶೀಲನೆ ನಡೆಸಿ ಮರಳಿದ್ದರೂ ಪ್ರಸ್ತಾವನೆ ಪರಿಶೀಲನೆ ಹಂತದಲ್ಲಿದೆ ಎನ್ನುವ ಸರಕಾರದ ಉತ್ತರದಿಂದ ಸ್ಥಳೀಯರಿಗೆ ನಿರಾಸೆ ಆಗಿದೆ. ಕೊಡಗಿಗೆ ಒಂದು ಮಿನಿ ಬೇಕು ಎನ್ನುವುದು ಸ್ಥಳೀಯರ ಹಳೆಯ ಬೇಡಿಕೆ. ಇದರಿಂದಾಗಿ ಜಗತ್ತಿನ ಜೊತೆ ಸಂಪರ್ಕ ಸುಲಭವಾಗಲಿದೆ. ಪ್ರವಾಸೋದ್ಯಮ ಮತ್ತು ವಾಣಿಜ್ಯ ವ್ಯವಹಾರಗಳ ಬೆಳವಣಿಗೆ ದೃಷ್ಟಿಯಿಂದಲೂ ಪೂರಕವಾಗಲಿದೆ ಎನ್ನುವ ಸದುದ್ದೇಶವೂ ಇದರ ಹಿಂದಿದೆ. ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕೂಡ 10 ವರ್ಷಗಳಿಂದ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಾ ಬಂದಿದ್ದಾರೆ. ಯೋಜನೆಗೆ ನಕಾರಬೆಟ್ಟ-ಗುಡ್ಡಗಳಿಂದ ಕೂಡಿರುವ ಕೊಡಗಿನಲ್ಲಿ ವಿಮಾನ ನಿಲ್ದಾಣಕ್ಕೆ ಅಗತ್ಯವಾದ ವಿಶಾಲವಾಗಿರುವ ಸಮತಟ್ಟು ಜಾಗ ಸಿಗುವುದು ಕಷ್ಟ. ಆದರೂ, ಜಿಲ್ಲಾಕೇಂದ್ರ ಮಡಿಕೇರಿಯ ಸುತ್ತಮುತ್ತ, ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಚಿಕ್ಕ ಅಳುವಾರ, ಬ್ಯಾಡಗೊಟ್ಟ, ಬೈದಗುಟ್ಟ, ಮಾದಾಪುರ, ಕೂಡಿಗೆ ಮತ್ತಿತರ ಜಾಗದಲ್ಲಿ ಸ್ಥಳ ಹುಡುಕಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಗುಡ್ಡಗಾಡು ಪ್ರದೇಶ ಎನ್ನುವ ಕಾರಣ ನೀಡಿಯೇ ತಜ್ಞರು ಯೋಜನೆಗೆ ನಕಾರ ಸೂಚಿಸಿದ್ದರು. ಆದರೂ ಛಲ ಬಿಡದ ಅಪ್ಪಚ್ಚು ರಂಜನ್ 2012ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾಗಿದ್ದ ವೇಳೆ ಮತ್ತೆ ಪ್ರಸ್ತಾವ ಸಲ್ಲಿಸಿದರು. ಕೂಡಿಗೆ ಕೃಷಿ ಫಾರಂ ಆವರಣದಲ್ಲಿರುವ ವಿಶಾಲವಾದ ಜಾಗದ ಬಳಕೆ ಬಗ್ಗೆ ತಮ್ಮ ಪ್ರಸ್ತಾವನೆಯಲ್ಲಿ ಸಲಹೆ ನೀಡಿದ್ದರು. ವಿಮಾನ ನಿಲ್ದಾಣ ಮಾತ್ರವಲ್ಲದೆ ವಿಮಾನ ಯಾನ ತರಬೇತಿ ಕೇಂದ್ರ ತೆರೆಯುವ ಚಿಂತನೆಯನ್ನೂ ನಡೆಸಲಾಗಿತ್ತು. ಪ್ರಗತಿ ಕುಂಠಿತ 2019ರ ನವೆಂಬರ್ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಂಸ್ಥೆ ಹೊರಡಿಸಿದ ಪ್ರಕಟಣೆಯಲ್ಲೂ ರಾಜ್ಯದಲ್ಲಿ ಉದ್ದೇಶಿತ ನಿಲ್ದಾಣಗಳ ಪೈಕಿ ಕೊಡಗಿನ ಮಿನಿ ವಿಮಾನ ನಿಲ್ದಾಣಕ್ಕೆ ಸ್ಥಾನ ಸಿಕ್ಕಿತ್ತು. ಉಡಾನ್ ಯೋಜನೆ ಅಡಿಯಲ್ಲಿ ಒಂದು ಕಿ.ಮೀ. ಉದ್ದದ ರನ್ ವೇ ಇರುವ ಮಿನಿ ವಿಮಾನ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ವಿವಿಧ ಇಲಾಖೆಗಳ ತಜ್ಞರ ತಂಡವೂ ಆಗಮಿಸಿ ಸ್ಥಳ ಪರಿಶೀಲನೆಯನ್ನೂ ನಡೆಸಿತ್ತು. ಆದರೆ, ಯೋಜನೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿರಲಿಲ್ಲ. ಈ ಬಗ್ಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ವಿಧಾನ ಸಭೆಯಲ್ಲಿ ಕೇಳಿರುವ ಪ್ರಶ್ನೆಗೆ ಸೋಮವಾರ (ಡಿ.20) ಉತ್ತರಿಸಿರುವ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ, ಪ್ರಸ್ತಾವನೆ ಪರಿಶೀಲನೆಯಲ್ಲಿದ್ದು, ಯಾವುದೇ ಅನುದಾನ ಮೀಸಲಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕ- ಖಾಸಗಿ ಸಹಭಾಗಿತ್ವ ಯೋಜನೆ ಅಡಿಯಲ್ಲಿ ವಿಮಾನಯಾನ ಸೇವೆಗಳೊಂದಿಗೆ ರಾಜ್ಯದ ವಿವಿಧ ಸ್ಥಳಗಳಲ್ಲಿ ಇಳಿದಾಣಗಳನ್ನು ಅಭಿವೃದ್ಧಿ ಪಡಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ.
from India & World News in Kannada | VK Polls https://ift.tt/32xkZ7s