ಹೊಸದಿಲ್ಲಿ: ಗಣ್ಯ ವ್ಯಕ್ತಿಗಳ ಭದ್ರತೆಯ ಹೊಣೆ ಹೊತ್ತಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಇದೇ ಮೊದಲ ಬಾರಿಗೆ ತರಬೇತಿ ಪಡೆದ 32 ಮಹಿಳಾ ಕಮಾಂಡೊಗಳನ್ನು ಸಚಿವರು ಹಾಗೂ ರಾಜಕೀಯ ಮುಖಂಡರ ಕಾವಲಿಗೆ ನಿಯೋಜಿಸಲಿದೆ. ಒಟ್ಟಾರೆ 32 ಮಹಿಳಾ ಕಮಾಂಡೊಗಳಿಗೆ ಸಿಆರ್ಪಿಎಫ್ನಿಂದ 10 ವಾರಗಳ ಕಠಿಣಾತಿಕಠಿಣ ತರಬೇತಿ ನೀಡಲಾಗಿದೆ. ಶಸ್ತ್ರಾಸ್ತ್ರ ರಹಿತ ಸಮರ, ವಿಶೇಷ ಶಸ್ತ್ರಗಳ ಚಲಾವಣೆ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಗಣ್ಯರ ಪ್ರಾಣ ರಕ್ಷಣೆಗೆ ಯಾವುದೇ ಕಸರತ್ತು ನಡೆಸಲು ಮಹಿಳಾ ಕಮಾಂಡೊಗಳು ಸನ್ನದ್ಧರಾಗಿರುತ್ತಾರೆ. ಜನವರಿಯಿಂದ ಮಹಿಳಾ ಕಮಾಂಡೊಗಳನ್ನು ಗೃಹ ಸಚಿವ ಅಮಿತ್ ಶಾ ಅವರ ಭದ್ರತಾ ಪಡೆ ಸೇರಿದಂತೆ ಕಾಂಗ್ರೆಸ್ ನಾಯಕಿ , ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರ ಕಾವಲುಪಡೆಯಲ್ಲಿ ನಿಯೋಜಿಸಲಾಗುವುದು. ಪ್ರಮುಖವಾಗಿ 'ಝಡ್+' ಶ್ರೇಣಿಯ ಭದ್ರತೆ ಪಡೆದಿರುವ ಗಣ್ಯರ ಕಾವಲಿಗೆ ಮಹಿಳಾ ಕಮಾಂಡೊಗಳು ಸನ್ನದ್ಧರಾಗಿರಲಿದ್ದಾರೆ. ಪುರುಷ ಕಮಾಂಡೊಗಳ ಬಳಿ ಇರುವ ಎಲ್ಲ ರೀತಿಯ ಆಧುನಿಕ ಶಸ್ತ್ರಾಸ್ತ್ರಗಳನ್ನು ಕೂಡ ಮಹಿಳಾ ಕಮಾಂಡೊಗಳಿಗೆ ನೀಡಲಾಗುತ್ತಿದೆ ಎಂದು ಸಿಆರ್ಪಿಎಫ್ ಮಾಹಿತಿ ನೀಡಿದೆ. ಮೊದಲ ಹಂತದಲ್ಲಿ ಮಹಿಳಾ ಕಮಾಂಡೊಗಳನ್ನು ಗಣ್ಯರ ನಿವಾಸದ ಬಳಿಯಲ್ಲಿ ಸುರಕ್ಷತೆಗೆ ಮೀಸಲಾದ ತಂಡದಲ್ಲಿ ಸೇರ್ಪಡೆ ಮಾಡಲಾಗುವುದು. ಕೆಲ ತಿಂಗಳ ಬಳಿಕ ಗಣ್ಯರೊಂದಿಗೆ ಸಂಚರಿಸುವ ತಂಡಕ್ಕೆ ಕೂಡ ಸೇರಿಸಲಾಗುತ್ತದೆ. ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿರಿಸಿಕೊಂಡು ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾದ ಅನೇಕ ರಾಜಕೀಯ ಮುಖಂಡರ ಸುರಕ್ಷತಾ ಪಡೆಗಳಿಗೂ ನಾರಿ ಶಕ್ತಿಯ ಸೇರ್ಪಡೆ ಆಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
from India & World News in Kannada | VK Polls https://ift.tt/3FtTURc