: ನಗರದ ಸೂಪರ್ ಮಾರುಕಟ್ಟೆಯಲ್ಲಿರುವ ಕೆನರಾ ಬ್ಯಾಂಕ್ಗೆ ಸೇರಿದ ಹಳೆಯ ಜನರೇಟರ್ ಬ್ಲಾಸ್ಟ್ ಆಗಿ ಭಾನುವಾರ ಸಂಜೆ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದ್ದು, ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ದಳದ ರಮೇಶ ಪವಾರ (55) ಮೃತಪಟ್ಟ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ರಮೇಶ್ ಬೆಂಕಿ ನಂದಿಸುವ ಕರ್ತವ್ಯ ನಿಭಾಯಿಸುತ್ತಿದ್ದರು. ಬೆಂಕಿಯ ಕೆನ್ನಾಲಿಗೆ ಅವರ ಮೈಮೇಲೆ ಬಂದ ಆರ್ಭಟಕ್ಕೆ ತುಸು ಬೆಚ್ಚಿ ಬಿದ್ದಿದ್ದಾರೆ. ಅವರಿಗೆ ವಿದ್ಯುತ್ ಶಾಕ್ ಕೂಡ ತಗುಲಿದೆ. ಈ ವೇಳೆ ಅವರಿಗೆ ಲಘು ಹೃದಯಾಘಾತವಾಗಿದ್ದು, ಕೆಳಗೆ ಬಿದ್ದ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆನರಾ ಬ್ಯಾಂಕ್ ಹಿಂಬದಿ ಕಟ್ಟಡದಲ್ಲಿ ಜನರೇಟರ್ ಇರಿಸಲಾಗಿತ್ತು. ಬ್ಯಾಂಕ್ ಸಿಬ್ಬಂದಿ ಭಾನುವಾರವೂ ಕೆಲಸ ಮುಗಿಸಿ ಮನೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಜನರೇಟರ್ನಿಂದ ಹೊಗೆಯ ವಾಸನೆ ಬಂದಿದ್ದು, ಇದನ್ನು ಗಮನಿಸಿದ ಕಟ್ಟಡದ ಎದುರಿಗೆ ಮಣ್ಣಿನ ಪಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬ ಅಪಾಯದ ಮುನ್ಸೂಚನೆ ಅರಿತು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ಸಂಚಾರ ಠಾಣೆಯ ಅಧಿಕಾರಿ ಅನಿಲ್ ಜೈನ್ ತಕ್ಷಣ ಆಟೋದಲ್ಲಿ ರಮೇಶ್ ಅವರನ್ನು ಕೂಡಿಸಿ ಆಸ್ಪತ್ರೆಗೆ ಕಳಿಸಿ ಕೊಟ್ಟಿದ್ದಾರೆ. ಜನರೇಟರ್ ಬೆಂಕಿ ಹೊತ್ತಿಕೊಂಡ ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಿಗೆ ಹೊರ ಭಾಗದಲ್ಲಿಯೂ ಚಾಚಿದೆ. ಪರಿಣಾಮ ಕಟ್ಟಡದ ಎದುರಿಗೆ ಇದ್ದ ಗಿಡದ ರೆಂಬೆಗಳಿಗೂ ಬೆಂಕಿ ಹೊತ್ತಿಕೊಂಡು ಆತಂಕ ಸೃಷ್ಟಿಸಿತ್ತು. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಜೆಸ್ಕಾಂ ಸಿಬ್ಬಂದಿ ಕೂಡಲೇ ಸೂಪರ್ ಮಾರುಕಟ್ಟೆಯ ಆ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದರು. ಪರಿಸ್ಥಿತಿ ತಹಬಂದಿಗೆ ಬಂದ ಬಳಿಕ ವಿದ್ಯುತ್ ಪೂರೈಕೆ ಪುನಾರಂಭಿಸಲಾಯಿತು.
from India & World News in Kannada | VK Polls https://ift.tt/3JjGUzD