ವಿಶೇಷ ಚೇತನರು, ವಿಧವೆಯರಿಗೆ ನಿವೇಶನ ಹಂಚಿಕೆಗೆ 9 ವರ್ಷ ವಿಳಂಬ, ಸರಕಾರದ ವಿರುದ್ಧ ಹೈಕೋರ್ಟ್‌ ಗರಂ

ಬೆಂಗಳೂರು: ವಿಶೇಷ ಆಶ್ರಯ ಯೋಜನೆಯಡಿ , ಮಾಜಿ ಯೋಧರು ಮತ್ತು ವಿಧವೆಯರು ಸೇರಿ 202 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಕಳೆದ ಒಂಬತ್ತು ವರ್ಷಗಳಿಂದಲೂ ವಿಳಂಬ ಮಾಡುತ್ತಿರುವ ಸರಕಾರದ ಕಾರ್ಯವೈಖರಿ ವಿರುದ್ಧ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ರಾಜೇಶ್ವರಿ ಸೇರಿ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಅರ್ಜಿ ಪರಿಶೀಲಿಸಿದ ನ್ಯಾಯಪೀಠ, "ಹೈಕೋರ್ಟ್‌ ಆದೇಶ ನೀಡಿ ಒಂಬತ್ತು ವರ್ಷ ಕಳೆದರೂ ಇನ್ನೂ ಫಲಾನುಭವಿಗಳಿಗೆ ಏಕೆ ಸೌಲಭ್ಯ ತಲುಪಿಸಿಲ್ಲ. ನಿವೇಶನಗಳಿಗಾಗಿ ಫಲಾನುಭವಿಗಳನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿರುವುದು ಸರಿಯೇ?" ಎಂದು ಸರಕಾರವನ್ನು ಪ್ರಶ್ನಿಸಿತು. ವಿಶೇಷ ಆಶ್ರಯ ಯೋಜನೆಯಡಿ 71 ದಿವ್ಯಾಂಗರು, ಇಬ್ಬರು ಮಾಜಿ ಯೋಧರು ಮತ್ತು 129 ನಿರಾಶ್ರಿತರು ಹಾಗೂ ವಿಧವೆಯರು ಸೇರಿ ಒಟ್ಟು 202 ಫಲಾನುಭವಿಗಳನ್ನು ಗುರುತಿಸಲಾಗಿದೆ. ಆದರೆ, ಕಳೆದ 9 ವರ್ಷಗಳಿಂದ ಅವರಿಗೆ ಸೌಲಭ್ಯ ದೊರಕದಿರುವುದು ದುರದೃಷ್ಟಕರ ಎಂದು ಹೇಳಿತು. ಸರಕಾರಿ ವಕೀಲರು, "ವಿಶೇಷ ಆಶ್ರಯ ಯೋಜನೆಯಡಿ 202 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಈಗಾಗಲೇ 154 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ನಿವೇಶನ ವಿತರಿಸಲು ಸರ್ಜಾಪುರ ಹೋಬಳಿಯ ಆನೇಕಲ್‌ ತಾಲೂಕಿನಲ್ಲಿ ಭೂಮಿ ಗುರುತಿಸಲಾಗಿದೆ. ಬಡಾವಣೆ ರಚನೆ ಕಾರ್ಯ ಪ್ರಗತಿಯಲ್ಲಿದ್ದು, ಆ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿಯೇ ಖುದ್ದು ಮೇಲ್ವಿಚಾರಣೆ ನಡೆಸಿದ್ದಾರೆ. ಕೊನೆಯದಾಗಿ ಎಂಟು ವಾರ ಕಾಲಾವಕಾಶ ನೀಡಿದರೆ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು," ಎಂದು ತಿಳಿಸಿದರು. "ಸರಕಾರದ ಈ ಧೋರಣೆಯನ್ನು ನ್ಯಾಯಾಲಯ ಒಪ್ಪುವುದಿಲ್ಲ. ಆದರೆ, ಫಲಾನುಭವಿಗಳಿಗೆ ಈಗಾಗಲೇ ಹಕ್ಕು ಪತ್ರ ವಿತರಿಸಲಾಗಿದೆಯೆಂದು ಸರಕಾರಿ ವಕೀಲರು ಹೇಳಿದ್ದಾರೆ. ಇದರಿಂದ ಸರಕಾರಕ್ಕೆ ಕೊನೆಯದಾಗಿ ನಾಲ್ಕು ವಾರ ಕಾಲಾವಕಾಶ ನೀಡಲಾಗುವುದು. ಈಗಾಗಲೇ ಗುರುತಿಸಲಾಗಿರುವ ಫಲಾನುಭವಿಗಳಿಗೆ ಈ ಯೋಜನೆಯ ಸೌಲಭ್ಯ ಕಲ್ಪಿಸಿ ವರದಿ ಸಲ್ಲಿಸಬೇಕು. ತಪ್ಪಿದರೆ ಪ್ರತಿವಾದಿ ವಸತಿ ಇಲಾಖೆ ಕಾರ್ಯದರ್ಶಿ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಅರ್ಜಿಯ ಮುಂದಿನ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು," ಎಂದು ತಾಕೀತು ಮಾಡಿ ವಿಚಾರಣೆ ಮುಂದೂಡಿತು.


from India & World News in Kannada | VK Polls https://ift.tt/332AaFL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...