ಡಬ್ಲ್ಯುಟಿಸಿ ಫೈನಲ್‌ನಲ್ಲಿ ಟೀಮ್‌ ಇಂಡಿಯಾ ಮಾಡಿದ್ದ ತಪ್ಪನ್ನು ತಿಳಿಸಿದ ಅಕ್ಮಲ್‌!

ಹೊಸದಿಲ್ಲಿ: ನ್ಯೂಜಿಲೆಂಡ್‌ ವಿರುದ್ಧ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ಭಾರತ ತಂಡದ ಪ್ಲೇಯಿಂಗ್‌ ಇಲೆವೆನ್‌ ತಪ್ಪಾಗಿತ್ತು. ಈ ಕಾರಣದಿಂದಲೇ ಕೊಹ್ಲಿ ಪಡೆ ಮಹತ್ವದ ಪಂದ್ಯದಲ್ಲಿ ಹಿನ್ನಡೆ ಅನುಭವಿಸಬೇಕಾಯಿತು ಎಂದು ಪಾಕಿಸ್ತಾನ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ಮುಕ್ತಾಯವಾಗಿದ್ದ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್‌ ಪ್ರದರ್ಶನ ಕೊಂಚ ಸಮಾಧಾನ ತಂದಿತ್ತಾದರೂ ಬ್ಯಾಟಿಂಗ್‌ ಪ್ರದರ್ಶನ ಮಾತ್ರ ಸಂಪೂರ್ಣ ನೆಲ ಕಚ್ಚಿತ್ತು. ಈ ಕಾರಣದಿಂದಲೇ ಕೊಹ್ಲಿ ಪಡೆ ಮಹತ್ವದ ಹಣಾಹಣಿಯಲ್ಲಿ ಎಂಟು ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯ ನಡೆದಿದ್ದ ಸೌಥ್‌ಹ್ಯಾಂಪ್ಟನ್‌ನ ರೋಸ್‌ ಬೌಲ್‌ ಅಂಗಳದ ವಿಕೆಟ್‌ ವೇಗಿಗಳ ಸ್ನೇಹಿಯಾಗಿದ್ದರೂ ಭಾರತ ತಂಡದ ಅಂತಿಮ 11ರಲ್ಲಿ ಆರ್‌ ಅಶ್ವಿನ್ ಹಾಗೂ ಆರ್‌ ಜಡೇಜಾ ಸೇರಿ ಇಬ್ಬರು ಸ್ಪಿನ್ನರ್‌ಗಳಿಗೆ ಅವಕಾಶ ನೀಡಲಾಗಿತ್ತು. ಇದರಲ್ಲಿ ಆರ್‌ ಅಶ್ವಿನ್‌ ಸಕ್ಸಸ್‌ ಕಂಡಿದ್ದರೆ, ಜಡೇಜಾ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ವೈಫಲ್ಯ ಅನುಭವಿಸಿದ್ದರು. 'ಮೈ ಮಾಸ್ಟರ್‌ ಕ್ರಿಕೆಟ್‌ ಕೋಚ್‌' ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಭಾರತ ತಂಡದ ವೈಫಲ್ಯದ ಬಗ್ಗೆ ಪಾಕಿಸ್ತಾನದ ವಿಕೆಟ್‌-ಕೀಪರ್‌ ಕಮ್ರಾನ್‌ ಅಕ್ಮಲ್‌ ಚರ್ಚೆ ನಡೆಸಿದರು ಹಾಗೂ ಸೌಥ್‌ಹ್ಯಾಂಪ್ಟನ್‌ ಪರಿಸ್ಥಿತಿಗಳಿಗೆ ತಕ್ಕಂತೆ ಪ್ಲೇಯಿಂಗ್ ಇಲೆವೆನ್‌ ಆಯ್ಕೆ ಮಾಡುವಲ್ಲಿ ಎಡವಿದೆ ಎಂಬ ಅಂಶವನ್ನು ಒತ್ತಿ ಹೇಳಿದ್ದಾರೆ. "ಡಬ್ಲ್ಯುಟಿಸಿ ಫೈನಲ್‌ ಪಂದ್ಯದಲ್ಲಿ ಭಾರತ ತಂಡಕ್ಕೆ ಎದುರಾದ ದೊಡ್ಡ ಅಪಾಯವೆಂದರೆ ನ್ಯೂಜಿಲೆಂಡ್‌ ತಂಡದ ಬೌಲಿಂಗ್‌. ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದಂತೆ ಭಾರತದ ಬ್ಯಾಟ್ಸ್‌ಮನ್‌ಗಳು ಕಿವೀಸ್‌ ಬೌಲರ್‌ಗಳ ಎದುರು ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಈ ಹಿಂದೆ ಎಂಸಿಜೆ ಟೆಸ್ಟ್‌ನಲ್ಲಿ ರಹಾನೆ ಶತಕ ಸಿಡಿಸಿದ್ದರು. ನಂತರ ಅತ್ಯಂತ ನಿರ್ಣಾಯಕ ಸನ್ನಿವೇಶಗಳಲ್ಲಿ ರಿಷಭ್‌ ಪಂತ್‌ ರನ್‌ ಗಳಿಸಿದ್ದರು. ಅದರಂತೆ ಇಂಗ್ಲೆಂಡ್‌ ವಿರುದ್ಧದ ತವರು ಟೆಸ್ಟ್‌ ಸರಣಿಯಲ್ಲಿಯೂ ಪಂತ್‌ ಹಾಗೂ ಅಶ್ವಿನ್‌ ರನ್‌ಗಳನ್ನು ಗಳಿಸಿದ್ದರು," ಎಂದು ಅಕ್ಮಲ್‌ ಹೇಳಿದರು. "ಡಬ್ಲ್ಯುಟಿಸಿ ಫೈನಲ್‌ಗೆ ಭಾರತ ತಂಡದ ಪ್ಲೇಯಿಂಗ್‌ ಇಲೆವೆನ್‌ ಅನ್ನು ನೀವು ನೋಡುವುದಾದರೆ, ಸೀಮಿಂಗ್ ವಿಕೆಟ್‌ನಲ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಬಾರದಿತ್ತು. ವಿದೇಶಿ ಪರಿಸ್ಥಿತಿಗಳಿಗೆ ಅನುಗುಣವಾಗಿ ನ್ಯೂಜಿಲೆಂಡ್‌ ತಂಡ ತನ್ನ ಅಂತಿಮ 11ಕ್ಕೆ ಆಟಗಾರರನ್ನು ಆಯ್ಕೆ ಮಾಡಿಕೊಂಡಿತ್ತು. ಮೊದಲನೇ ದಿನ ಮಳೆಗೆ ಆಹುತಿಯಾದ ಹೊರತಾಗಿಯೂ ಆಡಿದ ಎಲ್ಲಾ ದಿನಗಳಲ್ಲಿಯೂ ಕಿವೀಸ್‌ ಮುನ್ನಡೆ ಸಾಧಿಸಿತ್ತು," ಎಂದರು. "ಭಾರತದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಅಲ್ಲದೆ, ನಾಯಕ ವಿರಾಟ್‌ ಕೊಹ್ಲಿ ಫಾರ್ಮ್‌ನಲ್ಲಿ ಇರಲಿಲ್ಲ. ಇದರ ನಡುವೆ ಆರಂಭಿಕ ಬ್ಯಾಟ್ಸ್‌ಮನ್‌ಗಳ ಜೊತೆಯಾಟ ಕೂಡ ಕೆಲಸ ಮಾಡಲಿಲ್ಲ. ಫೈನಲ್‌ ಪಂದ್ಯ ಆಡುವುದಕ್ಕೂ ಮುನ್ನ ಈ ಎಲ್ಲಾ ಸಮಸ್ಯೆಗಳಿಗೆ ಟೀಮ್‌ ಮ್ಯಾನೇಜ್‌ಮೆಂಟ್‌ ಪರಿಹಾರ ಹುಡುಕಿಕೊಳ್ಳಬೇಕಾಗಿತ್ತು. ಆಸ್ಟ್ರೇಲಿಯಾ ನೆಲದಂತೆ ಇಲ್ಲಿಯೂ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಿದ್ದೇ ಭಾರತ ತಂಡದ ಹಿನ್ನಡೆಗೆ ಕಾರಣ," ಎಂದು ಹೇಳಿದರು. 2019-21ರ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ 12 ಪಂದ್ಯಗಳಲ್ಲಿ ಜಯ, 4 ಸೋಲು ಹಾಗೂ ಒಂದೇ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿತ್ತು. ಆ ಮೂಲಕ ವಿರಾಟ್‌ ಕೊಹ್ಲಿ ಬಳಗ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತ್ತು. ಆಗಸ್ಟ್ 4 ರಿಂದ ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡುವ ಮೂಲಕ ಭಾರತ, 2021/23ರ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಅಭಿಯಾನ ಶುರು ಮಾಡಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3quSoY8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...