ಹೊಸದಿಲ್ಲಿ: ಜಾನ್ಸನ್ & ಜಾನ್ಸನ್ ಕಂಪನಿ ಅಭಿವೃದ್ಧಿಪಡಿಸಿರುವ ಸಣ್ಣ ಪ್ರಮಾಣದಲ್ಲಿ ಜುಲೈನಿಂದ ದೇಶದಲ್ಲಿ ಲಭ್ಯವಾಗಲಿದೆ ಎಂದು ಮೂಲಗಳು ಹೇಳಿವೆ. ಆರೋಗ್ಯ ಸೇವೆ ಪೂರೈಕೆದಾರರ ಸಂಘ (ಎಎಚ್ಪಿ) ಖಾಸಗಿಯಾಗಿ ಅಮೆರಿಕದಿಂದಲೇ ಲಸಿಕೆಯನ್ನು ಖರೀದಿಸಲು ನಿರ್ಧರಿಸಿದೆ. ಜುಲೈನಲ್ಲಿ ಲಸಿಕೆ ಭಾರತದಕ್ಕೆ ಬರಲಿದ್ದು, ಆರಂಭದಲ್ಲಿ ಕೆಲವೇ ಸಾವಿರ ಡೋಸ್ಗಳಷ್ಟೇ ಬರಲಿವೆ. ಒಂದೇ ಡೋಸ್ ಮಾತ್ರ ನೀಡುವ ಲಸಿಕೆಯ ದರ ಭಾರತದಲ್ಲಿ 25 ಡಾಲರ್ (1850 ರೂ.) ಇರಲಿದೆ. ಈ ಲಸಿಕೆಯನ್ನು ಫ್ರೀಜರ್ನಲ್ಲಿ ಇಡಬೇಕಾಗಿಲ್ಲ. ಹೀಗಾಗಿ ಇದು ಭಾರತದಂಥ ಅಭಿವೃದ್ಧಿಶೀಲ ದೇಶಗಳ ಪಾಲಿಗೆ ವರದಾನವಾಗುವ ಸಾಧ್ಯತೆ ಇದೆ. ಈಗಾಗಲೇ ಜಾನ್ಸನ್ & ಜಾನ್ಸನ್ ದೇಶದಲ್ಲಿ ಲಸಿಕೆಗೆ ಹಾಗೂ ಲಸಿಕೆಯ ಉತ್ಪಾದನೆಗೆ ಅನುಮತಿ ನೀಡುವ ಸಂಬಂಧ ಕೇಂದ್ರ ಸರಕಾರದ ಜತೆ ಮಾತುಕತೆ ಆರಂಭಿಸಿದೆ. ಏಪ್ರಿಲ್ನಲ್ಲೇ ಸರಕಾರವನ್ನು ಸಂಪರ್ಕಿಸಿದ್ದ ಕಂಪನಿ, ಭಾರತದಲ್ಲಿ ವೈದ್ಯಕೀಯ ಅಧ್ಯಯನಕ್ಕೆ ಅನುಮತಿ ಕೋರಿತ್ತು. ಆದರೆ ಹೊಸ ನಿಯಮದ ಪ್ರಕಾರ ಅಮೆರಿಕ ಅನುಮತಿ ನೀಡಿರುವ ಲಸಿಕೆಗೆ ಭಾರತದಲ್ಲಿ ಪ್ರತ್ಯೇಕ ವೈದ್ಯಕೀಯ ಪರೀಕ್ಷೆ ಅಗತ್ಯವಿಲ್ಲ. ಹೀಗಾಗಿ ಬರುವ ತಿಂಗಳಲ್ಲಿ ಲಸಿಕೆಗೆ ಭಾರತ ಸರಕಾರವೂ ಅನುಮತಿ ನೀಡುವ ಸಾಧ್ಯತೆ ಇದೆ. ವಿಶ್ವ ಸಂಸ್ಥೆಯ ಪ್ರಕಾರ ಸೌಮ್ಯ ಮತ್ತು ಮಧ್ಯ ಕೊರೊನಾ ಲಕ್ಷಣಗಳಿರುವವರಿಗೆ ಈ ಲಸಿಕೆ ಶೇ. 66.3 ರಷ್ಟು ಪರಿಣಾಮಕಾರಿಯಾಗಿದೆ. ಆದರೆ ಗಂಭೀರದಿಂದ ಅತೀ ಗಂಭೀರ ಸೋಂಕಿತರಿಗೆ ಶೇ. 76.3ರಷ್ಟು ಪರಿಣಾಮಕಾರಿಯಾಗಿದೆ. ಜತೆಗೆ ಲಸಿಕೆ ಪಡೆದ 28 ದಿನಗಳ ನಂತರ, ಆಸ್ಪತ್ರೆಗೆ ದಾಖಲಾಗುವುದರಿಂದ ಶೇ. 100ರಷ್ಟು ರಕ್ಷಣೆ ನೀಡುತ್ತದೆ. ಫೆಬ್ರವರಿಯಲ್ಲಿಯೇ ಅಮೆರಿಕದ ಎಫ್ಡಿಎ ತುರ್ತು ಬಳಕೆಗೆ ಜಾನ್ಸನ್ & ಜಾನ್ಸನ್ ಲಸಿಕೆಗೆ ಅನುಮತಿ ನೀಡಿತ್ತು. ಬ್ರಿಟನ್ನಲ್ಲಿಯೂ ಕಳೆದ ತಿಂಗಳು ಜಾನ್ಸನ್ & ಜಾನ್ಸನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಆದರೆ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ರೂಪಾಂತರಿಗಳ ವಿರುದ್ಧ ವೈರಸ್ ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂಬ ಬಗ್ಗೆ ಅಧ್ಯಯನಗಳು ನಡೆದಿಲ್ಲ. ಈಗಾಗಲೇ ದೇಶದಲ್ಲಿ ಸೀರಂ ಇನ್ಸ್ಟ್ಯೂಟ್ ತಯಾರಿಸುತ್ತಿರುವ ಕೋವಿಶೀಲ್ಡ್, ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಹಾಗೂ ರಷ್ಯಾ ಮೂಲದ ಸ್ಪುಟ್ನಿಕ್-ವಿ ಲಸಿಕೆಗೆ ಅನುಮತಿ ನೀಡಲಾಗಿದೆ. ಜಾನ್ಸನ್ & ಜಾನ್ಸನ್ ಲಸಿಕೆಗೆ ಅನುಮತಿ ನೀಡಿದರೆ, ಭಾರತದಲ್ಲಿ ಅನುಮತಿ ಸಿಕ್ಕ ಲಸಿಕೆಗಳ ಸಂಖ್ಯೆ 4ಕ್ಕೆ ಏರಿಕೆಯಾಗಲಿದೆ.
from India & World News in Kannada | VK Polls https://ift.tt/3jgn6CX