
ಜಿನೇವಾ: ಶ್ರೀಮಂತ ರಾಷ್ಟ್ರಗಳು ನಿರ್ಬಂಧಗಳನ್ನು ತೆಗೆಯುತ್ತಿವೆ ಮತ್ತು ಕೊರೊನಾದಿಂದ ಹೆಚ್ಚಿನ ಅಪಾಯವಿಲ್ಲದ ಯುವಜನರಿಗೂ ಲಸಿಕೆ ಹಾಕುತ್ತಿವೆ. ಆದರೆ ಬಡ ದೇಶಗಳು ಲಸಿಕೆ ಇಲ್ಲದೆ ಬಳಲುತ್ತಿವೆ ಎಂದು (ಡಬ್ಲ್ಯೂಎಚ್‌ಒ) ಶುಕ್ರವಾರ ಹೇಳಿದ್ದು, ಜಾಗತಿಕ ವೈಫಲ್ಯವನ್ನು ಖಂಡಿಸಿದೆ. ಕಳೆದ ವಾರಕ್ಕೆ ಹೋಲಿಸಿದರೆ ಆಫ್ರಿಕಾದಲ್ಲಿ ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಶೇ. 40ರಷ್ಟು ಹೆಚ್ಚಾಗಿದೆ. ಡೆಲ್ಟಾ ರೂಪಾಂತರಿಯೂ ಜಾಗತಿಕ ಮಟ್ಟದಲ್ಲಿ ಹರಡುತ್ತಿದ್ದು, ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶನ ಟೆಡ್ರಸ್ ಅಡೋನಮ್ ಗೇಬ್ರೆಯಾಸಿಸ್ ಆತಂಕ ವ್ಯಕ್ತಪಡಿಸಿದ್ದಾರೆ. “ಜಾಗತಿಕ ಸಮುದಾಯವಾಗಿ ನಾವು ವಿಫಲವಾಗುತ್ತಿರುವುದರಿಂದ, ನಮ್ಮ ಜಗತ್ತು ವಿಫಲವಾಗುತ್ತಿದೆ,” ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. "ಲಸಿಕೆ ಪೂರೈಕೆ ಸಮಸ್ಯೆಯಾಗಿ ಪರಿಣಮಿಸಿದೆ" ಎಂದು ಹೇಳಿರುವ ಅವರು, ಲಸಿಕೆ ನೀಡಿ ಎಂದು ಮುಂದುವರಿದ ರಾಷ್ಟ್ರಗಳ ಹೆಸರು ಉಲ್ಲೇಖಿಸದೆ ಬೇಡಿಕೊಂಡಿದ್ದಾರೆ. "ನಮ್ಮ ಪ್ರಪಂಚದ ಇದೆ ಮತ್ತು ಇಲ್ಲ ಎಂಬುದರ ನಡುವಿನ ವ್ಯತ್ಯಾಸ ಈಗ ಸಂಪೂರ್ಣವಾಗಿ ಬಹಿರಂಗವಾಗಿದೆ. ಅನ್ಯಾಯ, ಅಸಮಾನತೆಯನ್ನು ಎದುರಿಸೋಣ," ಎಂದು ಅವರು ಕರೆ ನೀಡಿದ್ದಾರೆ. ಗಾವಿ ವಾಕ್ಸಿನ್ ಅಲಯನ್ಸ್ ಮತ್ತು ವಿಶ್ವಸಂಸ್ಥೆ ಜತೆಯಾಗಿ ಆರಂಭಿಸಿರುವ ಕಾರ್ಯಕ್ರಮ 'ಕೊವಾಕ್ಸ್'ನಡಿ ಈಗಾಗಲೇ 132 ಬಡ ದೇಶಗಳಿಗೆ 9 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ. ಆದರೆ ಭಾರತ ಲಸಿಕೆ ರಫ್ತಿಗೆ ನಿಷೇಧ ಹೇರಿದ ನಂತರ ಈ ಒಕ್ಕೂಟ ಭಾರಿ ತೊಂದರೆ ಎದುರಿಸುತ್ತಿದೆ. “ಕೊವಾಕ್ಸ್ ಮೂಲಕ ಈ ತಿಂಗಳು ನಮಗೆ ಒಂದೇ ಒಂದು ಡೋಸ್ ಆಸ್ಟ್ರಾಝೆನಿಕಾ ಲಸಿಕೆ, ಎಸ್‌ಐಐ (ಸೀರಂ ಇನ್ಸ್‌ಟ್ಯೂಟ್ ಆಫ್ ಇಂಡಿಯಾ) ಲಸಿಕೆ, ಜೆ & ಜೆ (ಜಾನ್ಸನ್ & ಜಾನ್ಸನ್) ಲಸಿಕೆ ಸಿಕ್ಕಿಲ್ಲ," ಎಂದು ವಿಶ್ವ ಆರೋಗ್ಯ ಸಂಸ್ಥೆ ಹಿರಿಯ ಸಲಹೆಗಾರ ಬ್ರೂಸ್ ಐಲ್‌ವರ್ಡ್ ಹೇಳಿದ್ದಾರೆ. "ಈಗಿನ ಪರಿಸ್ಥಿತಿ ಭೀಕರವಾಗಿದೆ," ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
from India & World News in Kannada | VK Polls https://ift.tt/2TbTzPX