'ಈತ ಭವಿಷ್ಯದ ಶ್ರೇಷ್ಠ ಆಲ್‌ರೌಂಡರ್' ಕಿವೀಸ್‌ ಆಟಗಾರನನ್ನು ಶ್ಲಾಘಿಸಿದ ಸಚಿನ್!

ಹೊಸದಿಲ್ಲಿ: ಭಾರತದ ವಿರುದ್ಧ ಇತ್ತೀಚೆಗೆ ಮುಕ್ತಾಯವಾಗಿದ್ದ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ 7 ವಿಕೆಟ್‌ ಹಾಗೂ ಪ್ರಥಮ ಇನಿಂಗ್ಸ್‌ನಲ್ಲಿ ನಿರ್ಣಾಯಕ 21 ರನ್‌ ಗಳಿಸಿದ್ದ ನ್ಯೂಜಿಲೆಂಡ್‌ ತಂಡದ ಆಲ್‌ರೌಂಡರ್‌ ಅವರನ್ನು ಕ್ರಿಕೆಟ್‌ ದಂತಕತೆ ಗುಣಗಾನ ಮಾಡಿದ್ದಾರೆ. 26ರ ಪ್ರಾಯದ ಕೈಲ್‌ ಜೇಮಿಸನ್ ಅವರು 2020ರಿಂದ ಇಲ್ಲಿಯವರೆಗೂ ನ್ಯೂಜಿಲೆಂಡ್‌ ಪರ ಎಂಟು ಟೆಸ್ಟ್‌ ಪಂದ್ಯಗಳಾಡಿದ್ದಾರೆ. ಇದರಲ್ಲಿ ಅವರು ಐದು ಬಾರಿ 5 ವಿಕೆಟ್‌ಗಳ ಸಾಧನೆ ಮಾಡಿರುವುದು ವಿಶೇಷ. ಇದನ್ನು ಗಮನಿಸಿರುವ ಸಚಿನ್‌ ತೆಂಡೂಲ್ಕರ್‌, ನ್ಯೂಜಿಲೆಂಡ್‌ ಯುವ ಆಲ್‌ರೌಂಡರ್ ವಿಶ್ವ ಕ್ರಿಕೆಟ್‌ನಲ್ಲಿ ಬಹು ಎತ್ತರಕ್ಕೆ ಬೆಳೆಯಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ. "ನ್ಯೂಜಿಲೆಂಡ್‌ ತಂಡದಲ್ಲಿ ಕೈಲ್‌ ಜೇಮಿಸನ್‌ ಅವರು ಅದ್ಭುತ ಬೌಲರ್‌ ಹಾಗೂ ಉಪಯುಕ್ತ ಆಲ್‌ರೌಡರ್‌ ಆಗಿದ್ದಾರೆ. ವಿಶ್ವ ಕ್ರಿಕೆಟ್‌ನ ಮುಂಚೂಣಿ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗುವತ್ತ ಕೈಲ್‌ ಜೇಮಿಸನ್‌ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ಕಳೆದ ವರ್ಷ ನ್ಯೂಜಿಲೆಂಡ್‌ನಲ್ಲಿ ನೋಡಿದ್ದ ವೇಳೆ ಅವರು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ನನ್ನ ಗಮನ ಸೆಳೆದಿದ್ದರು," ಎಂದು ತೆಂಡೂಲ್ಕರ್‌ ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ತಿಳಿಸಿದ್ದಾರೆ. ಜೇಮಿಸನ್‌ ಅವರ 31ಕ್ಕೆ5 ಭಾರತದ ವಿರುದ್ಧ ಎರಡನೇ ಐದು ವಿಕೆಟ್‌ ಸಾಧನೆ ಇದಾಗಿದೆ. ಡಬ್ಲ್ಯುಟಿಸಿ ಫೈನಲ್‌ ಹಣಾಹಣಿಯ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡ ಒಂದು ಹಂತದಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 146 ರನ್‌ ಗಳಿಸಿತ್ತು. ಈ ವೇಳೆ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌ ಅವರ ವಿಕೆಟ್‌ಗಳನ್ನು ಉರುಳಿಸುವ ಮೂಲಕ ಜೇಮಿಸನ್‌ ಭಾರತ ತಂಡ 217ಕ್ಕೆ ಆಲೌಟ್‌ ಆಗುವಂತೆ ಮಾಡಿದ್ದರು. ನಂತರ ದ್ವಿತೀಯ ಇನಿಂಗ್ಸ್‌ನಲ್ಲಿ ಟ್ರೆಂಟ್‌ ಬೌಲ್ಟ್ ಹಾಗೂ ಟಿಮ್‌ ಸೌಥೀ ಮಿಂಚುವುದಕ್ಕೂ ಮೊದಲು ನಾಯಕ ವಿರಾಟ್‌ ಕೊಹ್ಲಿ ಹಾಗೂ ಚೇತೇಶ್ವರ್‌ ಪೂಜಾರ ಅವರ ನಿರ್ಣಾಯಕ ವಿಕೆಟ್‌ಗಳನ್ನ ಜೇಮಿಸನ್ ಪಡೆದುಕೊಂಡಿದ್ದರು. ಆ ಮೂಲಕ ಆರನೇ ದಿನ ಪಂದ್ಯದ ದಿಕ್ಕನ್ನು ಸಂಪೂರ್ಣವಾಗಿ ಬದಲಾಯಿಸಿದ್ದರು. "ನ್ಯೂಜಿಲೆಂಡ್‌ ತಂಡದಲ್ಲಿ ಹಿರಿಯ ವೇಗಿಗಳಾದ ಟಿಮ್‌ ಸೌಥೀ, ಟ್ರೆಂಟ್‌ ಬೌಲ್ಟ್, ನೀಲ್ ವ್ಯಾಗ್ನರ್‌ ಹಾಗೂ ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌ ಅವರಿಗಿಂತಲೂ ಕೈಲ್ ಜೇಮಿಸನ್‌ ವಿಭಿನ್ನ ಬೌಲರ್‌ ಆಗಿದ್ದಾರೆ. ತಂಡದ ಇತರೆ ಬೌಲರ್‌ಗಳು ಸ್ವಿಂಗ್‌ ಮಾಡಲು ಪ್ರಯತ್ನಿಸುತ್ತಾರೆ. ಆದರೆ, ಕೈಲ್‌ ಜೇಮಿಸನ್‌ ಚೆಂಡಿನ ಸೀಮ್‌ ಅನ್ನು ಬಲವಾಗಿ ಪಿಚ್‌ ಮಾಡುವ ಮೂಲಕ ಹೆಚ್ಚಿನ ಚಲನೆಯನ್ನು ಉಂಟು ಮಾಡುತ್ತಾರೆ. ಇದರೊಂದಿಗೆ ಸ್ಲಿಪ್‌ನಲ್ಲಿ ಕ್ಯಾಚ್‌ಗಳಾಗುವ ಅವಕಾಶಗಳನ್ನು ಸೃಷ್ಟಿಸುತ್ತಾರೆ," ಎಂದು ಗುಣಗಾನ ಮಾಡಿದರು. "ಜೇಮಿಸನ್ ತಮ್ಮ ಮುಷ್ಟಿಯನ್ನು ಆಂಗಲ್‌ನಲ್ಲಿ ಇಟ್ಟುಕೊಂಡು ಸ್ವಿಂಗ್‌ ಮಾಡಲು ಪ್ರಯತ್ನಿಸುತ್ತಾರೆ ಹಾಗೂ ಅವರಲ್ಲಿ ಹಲವು ವಿಭಿನ್ನ ಎಸೆತಗಳಿವೆ. ಎಂದಿಗೂ ಲಯವನ್ನು ಕಳೆದುಕೊಳ್ಳದೆ ಸ್ಥಿರವಾಗಿ ಬೌಲ್‌ ಮಾಡುವುದು ಅವರಲ್ಲಿರುವ ಮತ್ತೊಂದು ವಿಶೇಷತೆ," ಎಂದು ಸಚಿನ್‌ ತೆಂಡೂಲ್ಕರ್‌ ಮಾತು ಮುಗಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3qqA3LX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...