ಬೆಂಗಳೂರು: ಸೋಮವಾರ ಆರಂಭವಾದ ಮೂರನೇ ಹಂತದ ಕೋವಿಡ್ ಲಸಿಕಾ ಅಭಿಯಾನದಲ್ಲಿ ರಾಜ್ಯಾದ್ಯಂತ 45ರಿಂದ 60 ವರ್ಷದೊಳಗಿನವರ ಪೈಕಿ 374 ಮಂದಿ ಲಸಿಕೆ ಹಾಕಿಸಿಕೊಂಡರೆ, 60 ವರ್ಷ ಮೇಲ್ಪಟ್ಟವರ ಪೈಕಿ 1576 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಸೋಮವಾರ ಒಟ್ಟು ಪ್ರಥಮ, ದ್ವಿತೀಯ ಹಾಗೂ ತೃತೀಯ ಸುತ್ತಿನಲ್ಲಿ 3809 ಜನ ಲಸಿಕೆ ಹಾಕಿಸಿಕೊಂಡಿದ್ದಾರೆ. ಮೂರನೇ ಹಂತದ ವ್ಯಾಕ್ಸಿನ್ ಹಂಚಿಕೆಗೆ ಸೋಮವಾರ ಬೆಳಗ್ಗೆ 9 ಗಂಟೆಯಿಂದ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಆದರೆ, ನೋಂದಣಿ ಮಾಡಿಕೊಳ್ಳಲು ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ಬಹುತೇಕ ಎಲ್ಲಿಯೂ ಪೂರ್ವ ಸಿದ್ಧತೆ ಮಾಡಿಕೊಂಡಿರಲಿಲ್ಲ. ಹೀಗಾಗಿ ಬೆಳಗ್ಗೆ 9 ಗಂಟೆಯಿಂದಲೇ ಕಾದು ಕುಳಿತ ಹಿರಿಯ ನಾಗರಿಕರು ತಾಂತ್ರಿಕ ಸಮಸ್ಯೆ ಸರಿಯಾಗುವವರೆಗೂ ಕಾದರು. ಮಧ್ಯಾಹ್ನ 12 ಗಂಟೆ ವೇಳೆಗೆ ತಾಂತ್ರಿಕ ಸಮಸ್ಯೆ ಬಗೆಹರಿದ ನಂತರ ಲಸಿಕೆ ಅಭಿಯಾನ ಸರಾಗವಾಗಿ ನಡೆಯಿತು. ಕೆಲ ಜಿಲ್ಲೆಗಳನ್ನು ಹೊರತು ಪಡಿಸಿದರೆ ಉಳಿದಂತೆ ಉತ್ಸಾಹದಿಂದ ಲಸಿಕೆ ಹಾಕಿಸಿಕೊಂಡರು. ಭಯ ಪಡುವವರಿಗೆ ಧೈರ್ಯ ತುಂಬಿದರು. ಇವರ ಆಸಕ್ತಿ ಮತ್ತು ಶ್ರದ್ಧೆಯನ್ನು ಕಂಡು ವೈದ್ಯಕೀಯ ಸಿಬ್ಬಂದಿ ವಿಸ್ಮಯಗೊಂಡರು. ರಾಯಚೂರಿಗೆ ಅಗ್ರಸ್ಥಾನ ಸೋಮವಾರ 45ರಿಂದ 59 ವರ್ಷದೊಳಗಿನವರಲ್ಲಿ ಅತಿ ಹೆಚ್ಚು ಲಸಿಕೆ ಹಾಕಿಸಿಕೊಂಡ ಜಿಲ್ಲೆಗಳ ಪೈಕಿ ರಾಯಚೂರು ಅಗ್ರಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 83 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ75, ಬಳ್ಳಾರಿಯಲ್ಲಿ47, ಕಲಬುರಗಿಯಲ್ಲಿ22, ಬೀದರ್ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ 19 ಮಂದಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ನಂತರದ ಸ್ಥಾನ ಪಡೆದಿವೆ. 45ರಿಂದ 59 ವರ್ಷದೊಳಗಿನವರ ಪೈಕಿ ರಾಜ್ಯಾದ್ಯಂತ ಒಟ್ಟು 374 ಮಂದಿ ಸೋಮವಾರ ಲಸಿಕೆ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟವರಲ್ಲಿ ಬೆಂಗಳೂರು ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 285 ಜನ ಲಸಿಕೆ ಪಡೆದಿದ್ದಾರೆ. ಉಳಿದಂತೆ ಬಳ್ಳಾರಿಯಲ್ಲಿ168, ಉತ್ತರ ಕನ್ನಡದಲ್ಲಿ120 ಹಾಗೂ ಬೆಳಗಾವಿಯಲ್ಲಿ80 ಮಂದಿ ಲಸಿಕೆ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟವರ ಪೈಕಿ 1576 ಮಂದಿ ಸೋಮವಾರ ಲಸಿಕೆ ಪಡೆದುಕೊಂಡಿದ್ದಾರೆ. ಇದುವರೆಗೆ ಒಟ್ಟು 8,24,202 ಜನರು ಲಸಿಕೆ ಪಡೆದಿದ್ದಾರೆ. ನಾರಾಯಣಮೂರ್ತಿ ದಂಪತಿಗೂ ವ್ಯಾಕ್ಸಿನ್ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷ ಸುಧಾಮೂರ್ತಿ ದಂಪತಿ ಸಹ ಲಸಿಕೆ ಪಡೆದು ಈ ಅಭಿಯಾನಕ್ಕೆ ಬಲ ತುಂಬಿದ್ದಾರೆ. ಬೊಮ್ಮಸಂದ್ರದಲ್ಲಿರುವ ಪ್ರತಿಷ್ಠಿತ ನಾರಾಯಣ ಹೆಲ್ತ್ ಸಿಟಿಯಲ್ಲಿ ಲಸಿಕೆ ಪಡೆದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ದಂಪತಿಗೆ ನಾರಾಯಣ ಹೆಲ್ತ್ ಸಿಟಿ ಸಂಸ್ಥಾಪಕ ಡಾ. ದೇವಿ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ಸೋಮವಾರ ಬೆಳಗ್ಗೆ ಇನ್ಫೋಸಿಸ್ ಸಹ ಸಂಸ್ಥಾಪಕ ಗೋಪಾಲಕೃಷ್ಣನ್ ಕೂಡ ಲಸಿಕೆ ಪಡೆದಿದ್ದಾರೆ.ರಾಜ್ಯಸಭಾ ಮಾಜಿ ಸದಸ್ಯ ರೆಹಮಾನ್ ಖಾನ್ ಕೂಡ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡು, ಜನರಿಗೆ ಆತ್ಮಸ್ಥೆರ್ಯ ತುಂಬಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಂಡ 97ರ ವೃದ್ಧ ಬೆಂಗಳೂರಿನಲ್ಲಿ 97 ವರ್ಷದ ವ್ಯಕ್ತಿ ಲಸಿಕೆ ಪಡೆದಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ 97 ವರ್ಷದ ರಾಮಸ್ವಾಮಿ ಪಾರ್ಥಸಾರಥಿ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಸೀನಿಯರ್ಸ್ ಫಸ್ಟ್ ಬೆಂಗಳೂರಿನಲ್ಲಿಅತಿ ಹೆಚ್ಚು ಹಿರಿಯ ನಾಗರಿಕರು ವ್ಯಾಕ್ಸಿನ್ ಪಡೆದಿದ್ದು, ಒಟ್ಟು 938 ಮಂದಿ 45 ರಿಂದ 60 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದಿದ್ದಾರೆ. ಒಟ್ಟು 23 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡುವ ಯೋಜನೆ ಕೈಗೊಳ್ಳಲಾಗಿದ್ದು, ಸೋಮವಾರ 17 ಕಡೆಗಳಲ್ಲಿ ಲಸಿಕೆ ನೀಡಲಾಗಿದೆ.
from India & World News in Kannada | VK Polls https://ift.tt/3uIUo0E