IND vs AUS: ಸಚಿನ್‌ ತೆಂಡೂಲ್ಕರ್‌ ಅವರ ಮತ್ತೊಂದು ದಾಖಲೆ ಪುಡಿ-ಪುಡಿ ಕಿಂಗ್‌ ಕೊಹ್ಲಿ!

ಕಾನ್ಬೆರಾ: ಇಲ್ಲಿನ ಮನುಕಾ ಓವಲ್‌ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಓಡಿಐ ಪಂದ್ಯದಲ್ಲಿ ಟೀಮ್‌ ಇಂಡಿಯಾ ನಾಯಕ ಏಕದಿನ ಕ್ರಿಕೆಟ್‌ನಲ್ಲಿ 12,000 ರನ್‌ಗಳನ್ನು ಪೂರೈಸಿದರು. ಈ ಪಂದ್ಯಕ್ಕೂ ಮುನ್ನ ಅವರಿಗೆ ಈ ಸಾಧನೆ ಮಾಡಲು 23 ರನ್‌ಗಳ ಅಗತ್ಯವಿತ್ತು. 12ನೇ ಓವರ್‌ನಲ್ಲಿ ಶಾನ್‌ ಅಬಾಟ್‌ ಎಸೆತದಲ್ಲಿ ಕೊಹ್ಲಿ ಒಂದು ರನ್‌ ಪಡೆಯುವ ಮೂಲಕ ಈ ಸಾಧನೆಯನ್ನು ಮಾಡಿದರು. ಆ ಮೂಲಕ ಅತಿ ವೇಗವಾಗಿ ಓಡಿಐ ಕ್ರಿಕೆಟ್‌ನಲ್ಲಿ 12,000 ರನ್‌ಗಳನ್ನು ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಗೆ ಭಾರತ ತಂಡದ ನಾಯಕ ಭಾಜನರಾದರು. ಜತೆಗೆ, ಮಾಸ್ಟರ್‌ ಬ್ಲಾಸ್ಟರ್‌ ಅವರ 17 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಸಚಿನ್‌ ತೆಂಡೂಲ್ಕರ್‌ ಈ ದಾಖಲೆಯನ್ನು ಮಾಡಲು 300 ಓಡಿಐ ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಸೆಂಚೂರಿಯನ್‌ನಲ್ಲಿ 2003ರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶಾಹೀದ್‌ ಅಫ್ರಿದಿ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ ಸಚಿನ್‌ ತೆಂಡೂಲ್ಕರ್‌ ಈ ಸಾಧನೆ ಮಾಡಿದ್ದರು. ಇದೀಗ ಕೊಹ್ಲಿ ಈ ದಾಖಲೆಯನ್ನು ಪುಡಿ-ಪುಡಿ ಮಾಡಿದ್ದಾರೆ. 12,000 ರನ್‌ಗಳನ್ನು ಪೂರೈಸಲು ವಿರಾಟ್‌ ಕೊಹ್ಲಿ 241 ಇನಿಂಗ್ಸ್‌(251 ಪಂದ್ಯಗಳು) ಗಳನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ವಿರಾಟ್,‌ ವಿಶ್ವದಲ್ಲಿಯೇ ಆರನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌, ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ, ಸನತ್‌ ಜಯಸೂರ್ಯ, ಹಾಗೂ ಮಹೇಲಾ ಜಯವರ್ದನೆ ಕೊಹ್ಲಿಗೂ ಮುಂದಿನ ಸಾಲಿನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದ ವಿರಾಟ್‌ ಕೊಹ್ಲಿ, 78 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 63 ರನ್‌ಗಳನ್ನು ಗಳಿಸಿದರು. ಒಂದು ಕಡೆ ವಿಕೆಟ್‌ಗಳು ನಿಯಮಿತವಾಗಿ ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಆಡುತ್ತಿದ್ದ ಕೊಹ್ಲಿ, ತಂಡಕ್ಕೆ ಆಸರೆಯನ್ನು ಮೂಡಿಸಿದ್ದರು. ಆದರೆ, ಜಾಶ್‌ ಹೇಜಲ್‌ವುಡ್‌ ಎಸೆತದಲ್ಲಿ 32ನೇ ಓವರ್‌ನಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡಿದರು. ಇದಕ್ಕೂ ಮುನ್ನ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಪರ ಗಮನಾರ್ಹ ಪ್ರದರ್ಶನ ನೀಡಿದ್ದ ಎಡಗೈ ವೇಗಿ ಟಿ. ನಟರಾಜನ್‌ ಬುಧವಾರ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಓಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಭಾರತದ ಪರ ಆಡಿದ ಏಕದಿನ ಕ್ರಿಕೆಟ್‌ ಆಡಿದ 232ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾದ ಟಿ, ನಟರಾಜನ್‌ಗೆ ನಾಯಕ ವಿರಾಟ್‌ ಕೊಹ್ಲಿ ಟೀಮ್‌ ಇಂಡಿಯಾ ಕ್ಯಾಪ್ ನೀಡಿ ಗೌರವಿಸಿದರು. ಪ್ರಸಕ್ತ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದ ಮೊಹಮ್ಮದ್‌ ಶಮಿ ಅವರ ಸ್ಥಾನಕ್ಕೆ ನಟರಾಜನ್‌ ಅವಕಾಶ ಪಡೆದುಕೊಂಡರು. ಒಟ್ಟಾರೆ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಲಾಯಿತು. ಮಯಾಂಕ್‌ ಅಗರ್ವಾಲ್‌ ಸ್ಥಾನಕ್ಕೆ ಶುಭಮನ್‌ ಗಿಲ್‌, ನವದೀಪ್‌ ಸೈನಿ ಸ್ಥಾನಕ್ಕೆ ಶಾರ್ದೂಲ್‌ ಠಾಕೂರ್‌ ಹಾಗೂ ಯುಜ್ವೇಂದ್ರ ಚಹಲ್‌ ಅವರ ಸ್ಥಾನಕ್ಕೆ ಕುಲ್ದೀಪ್‌ ಯಾದವ್‌ ಅವಕಾಶ ಪಡೆದುಕೊಂಡರು. ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಭಾರತ ತಂಡ, 0-2 ಅಂತರದಲ್ಲಿ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ತಂಡಕ್ಕೆ ಬಿಟ್ಟುಕೊಟ್ಟಿದೆ. ಆದ್ದರಿಂದ ಈ ಪಂದ್ಯವನ್ನು ಗೆದ್ದು ಗೌರವ ಉಳಿಸಿಕೊಳ್ಳುವತ್ತ ಭಾರತದ ಚಿತ್ತ ನೆಟ್ಟಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3fY4HH5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...