ಬೆಂಗಳೂರಿಗರೇ ಗಮನಿಸಿ: ಪಾರ್ಕಿಂಗ್‌ ಸ್ಥಳವಿಲ್ಲದಿದ್ದರೆ ಹೊಸ ಕಾರು ಖರೀದಿಗೆ ಸಿಗುವುದಿಲ್ಲ ಅವಕಾಶ!

ಬೆಂಗಳೂರು: ನಗರದಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರಕಾರ, ಇನ್ನು ಮುಂದೆ ಪಾರ್ಕಿಂಗ್‌ಗೆ ಸ್ಥಳವಿದ್ದರೆ ಮಾತ್ರ ವಾಹನ ಖರೀದಿಸಲು ಷರತ್ತು ವಿಧಿಸುವ ಸಂಬಂಧ ಹೊಸ ನೀತಿ ರೂಪಿಸಲು ಪರಿಶೀಲನೆ ನಡೆಸುತ್ತಿದೆ. ಸದ್ಯಕ್ಕೆ ಬಹುತೇಕ ಬಡಾವಣೆಗಳಲ್ಲಿ ರಸ್ತೆಯ ಅಕ್ಕ ಪಕ್ಕ ವಾಹನ ನಿಲ್ಲಿಸಲಾಗುತ್ತಿದೆ. ಮನೆಯ ಗೇಟ್‌ನೊಳಗೆ ವಾಹನ ಪಾರ್ಕಿಂಗ್‌ ಮಾಡಲು ಜಾಗವಿಲ್ಲದ್ದರಿಂದ ಈ ಸಮಸ್ಯೆ ಎದುರಾಗಿದೆ. ಅದರಲ್ಲೂ ಕಾರು ಇನ್ನಿತರ ನಾಲ್ಕು ಚಕ್ರದ ವಾಹನಗಳನ್ನು ರಸ್ತೆ ಪಕ್ಕ ಬೇಕಾಬಿಟ್ಟಿ ನಿಲ್ಲಿಸುವುದರಿಂದ ಸಂಚಾರ ದಟ್ಟಣೆಯಾಗುತ್ತಿದೆ. ವಾಹನಗಳು ಫುಟ್‌ಪಾತ್‌ಗಳನ್ನೂ ಅತಿಕ್ರಮಿಸಿಕೊಳ್ಳುತ್ತಿವೆ. ಇದರಿಂದಾಗಿ ಜನಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ಹಾಗಾಗಿ, ಪಾರ್ಕಿಂಗ್‌ಗೆ ಸ್ಥಳಾವಕಾಶವಿದ್ದರೆ ಮಾತ್ರ ವಾಹನ ಖರೀದಿಸಬಹುದು ಎಂಬ ಷರತ್ತು ವಿಧಿಸಬೇಕೆಂಬ ಸಲಹೆ ಬಂದಿದೆ. ಸಿಎಂ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿಈ ವಿಚಾರವಾಗಿ ಗಂಭೀರ ಚರ್ಚೆಯಾಗಿದೆ. ರಸ್ತೆ ಪಕ್ಕದ ಪಾರ್ಕಿಂಗ್‌ಗೆ ಕಡಿವಾಣ ಹಾಕುವ ದೃಷ್ಟಿಯಿಂದ ಮನೆಗಳ ಅಕ್ಕ ಪಕ್ಕದ ಖಾಲಿ ನಿವೇಶನದಲ್ಲಿ ವಾಹನ ನಿಲುಗಡೆಗೆ ಬಿಬಿಎಂಪಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕು. ವಾಹನ ಖರೀದಿದಾರರು ತಮ್ಮ ಮನೆಯೊಳಗೆ ಅಥವಾ ಪಾರ್ಕಿಂಗ್‌ ಸ್ಥಳದಲ್ಲಿ ಗಾಡಿ ನಿಲ್ಲಿಸುವ ಸಂಬಂಧ ಬದ್ಧತಾ ಪ್ರಮಾಣ ಪತ್ರ ನೀಡಬೇಕು. ಈ ಷರತ್ತು ಪೂರೈಸಿದವರಿಗೆ ಮಾತ್ರ ಹೊಸ ವಾಹನ ಖರೀದಿಸಲು ಅವಕಾಶ ನೀಡಬೇಕು ಎಂಬ ಪ್ರಸ್ತಾಪ ಬಂದಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿ ಅವರು ಪರಾಮರ್ಶೆ ನಡೆಸಿದ ಬಳಿಕ ಅಂತಿಮ ತೀರ್ಮಾನವಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌, ಈ ಬಗ್ಗೆ ಸಲಹೆ ಬಂದಿದೆ. ಮುಖ್ಯ ಕಾರ್ಯದರ್ಶಿಯವರ ಸಮಿತಿ ಪರಿಶೀಲನೆ ನಡೆಸಿದ ಬಳಿಕ ಸೂಕ್ತ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ. ಸಚಿವ ಸಂಪುಟದ ಮುಂದಿಡಲು ಸಿಎಂ ಸೂಚನೆ ಈ ನಡುವೆ, ನಗರದ ವಾಹನ ನಿಲುಗಡೆ ಸಂಬಂಧದ '' ಅನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಅಧಿಕಾರಿಗಳಿಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಅವರು, ನಗರದಲ್ಲಿ ಕಳೆದ ಏಳು ವರ್ಷಗಳಲ್ಲಿ ವಾಹನಗಳ ಸಂಖ್ಯೆ ದ್ವಿಗುಣಗೊಂಡಿದೆ. ಪಾರ್ಕಿಂಗ್‌ ವ್ಯವಸ್ಥೆ ಅಸಮರ್ಪಕವಾಗಿರುವುದರಿಂದ ಸಂಚಾರ ದಟ್ಟಣೆಯೂ ಹೆಚ್ಚುತ್ತಿದೆ. ಹಾಗಾಗಿ, ತಂತ್ರಜ್ಞಾನ ಆಧಾರಿತ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಪಾರ್ಕಿಂಗ್‌ ನೀತಿ ಸಂಬಂಧ ಸ್ವಯಂಸೇವಾ ಸಂಸ್ಥೆಗಳು, ನಾನಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಬಳಕೆದಾರರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದನ್ನು ಕ್ರೋಡೀಕರಿಸಿ ನವೀಕರಿಸಿದ ನೀತಿಯನ್ನು ಸರಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಬಿಎಸ್‌ವೈ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿಈ ನೀತಿಯನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಬೇಕು. ಬಳಿಕ ಪಾರ್ಕಿಂಗ್‌ ನೀತಿ 2.0 ಅನ್ನು ಸಂಪುಟ ಸಭೆಯ ಮುಂದಿಡಬೇಕು ಎಂದು ಸೂಚಿಸಿದರು. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌, ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌, ಸಿಎಂ ಸಲಹೆಗಾರ ಎಂ.ಲಕ್ಷ್ಮೇನಾರಾಯಣ, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತೆ ವಿ.ಮಂಜುಳಾ, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ಗುಪ್ತ, ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸಭೆಯಲ್ಲಿದ್ದರು. ನಗರದೆಲ್ಲೆಡೆ ಕಟ್ಟುನಿಟ್ಟಿನ ಪಾರ್ಕಿಂಗ್‌ ಶುಲ್ಕ ನಿರೀಕ್ಷೆ! ಬೇಕಾಬಿಟ್ಟಿ ವಾಹನ ನಿಲುಗಡೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ನಗರದ ಬಹುತೇಕ ಕಡೆ ಕಟ್ಟುನಿಟ್ಟಿನ ಪಾರ್ಕಿಂಗ್‌ ಶುಲ್ಕ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆಯಿದೆ. ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಈ ಬಗ್ಗೆ ಚರ್ಚೆಯಾಗಿದೆ. ಪಾರ್ಕಿಂಗ್‌ ಶುಲ್ಕ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಸುಳಿವು ನೀಡಿದ್ದಾರೆ. ಸಿಎಂ ನೇತೃತ್ವದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಗರದಲ್ಲಿ ಸದ್ಯಕ್ಕೆ 80 ರಿಂದ 85 ಸ್ಥಳಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ಶುಲ್ಕ ಸಂಗ್ರಹ ಕೇಂದ್ರಗಳಿವೆ. ಇದನ್ನು ನಗರದ ಎಲ್ಲ ಕಡೆ ವಿಸ್ತರಿಸುವ ಅನಿವಾರ್ಯತೆಯಿದೆ. ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಜನಸಾಮಾನ್ಯರಿಗೆ ತೊಂದರೆ ಕೊಡುವುದನ್ನು ತಪ್ಪಿಸಲು ಪಾರ್ಕಿಂಗ್‌ ನೀತಿ ತರಲಾಗುತ್ತಿದೆ. ಈ ಸಂಬಂಧದ ಅಧ್ಯಯನ ವರದಿಯ ಪ್ರತಿಯನ್ನು ಸರಕಾರಕ್ಕೆ ಮುಖ್ಯ ಕಾರ್ಯದರ್ಶಿಯವರು ಸಲ್ಲಿಸಿದ್ದಾರೆ,'' ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/3qfdVDT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...