ಹಾವೇರಿ: ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತ ಹಾಕದಂತೆ ಕೆಲವರಿಗೆ ಕೋಳಿ ಜತೆಗೆ ಮದ್ಯದ ಗಿಫ್ಟ್‌ಗಳು ನಿತ್ಯವೂ ಮನೆ ಸೇರುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಪ್ರತಿಸ್ಪರ್ಧಿಯ ಈ ರಣತಂತ್ರ ಆಕಾಂಕ್ಷಿ ಅಭ್ಯರ್ಥಿಗಳ ನಿದ್ದೆಗೆಡಿಸಿದೆ. ಅರಳಿ ಮರ ತಪ್ಪಿದಲ್ಲಿ ಊರಿನ ಕಟ್ಟೆಗಳ ಮೇಲೆ ಮತ ಹಾಕಿಸುವ ಲೆಕ್ಕಾಚಾರ ಮಾಡುವ ಪಕ್ಷಗಳ ಕಾರ್ಯಕರ್ತರು ಮುಖಂಡರ ಮನೆ ತಲುಪುತ್ತಿದ್ದಂತೆ ಬರುವ ಒಂದೇ ಒಂದು ಪ್ರಶ್ನೆ ಎಂದರೆ, ಏನಪಾ ಆ ಓಣಿಯವರ ಮತ ಬರ್ತಾವ ಇಲ್ಲ? ನಮಗ ವೋಟ ಹಾಕೋದಿಲ್ಲ ಅಂದ್ರ ಅವರಿಗೆ ಬಿಡಬ್ಯಾಡ್ರಿ. ದಿನಾ ಕಂಠ ಮಟ ಕುಡಿಸ್ರಿ, ಮನೀಗೆ ಹೋಗೋ ಮುಂದ ಮತ್ತೊಂದು ಬಾಟ್ಲಿಇಡ್ರಿ. ಅವರ ಮನಿಗೆ ಕೋಳಿ ಕೊಟ್ಟು ಬರ್ರಿ. ಯಾವ್ದ ಕಾರಣಕ್ಕೂ ಅವರು ಮತ ಹಾಕದಂಗ ನೋಡಕೊಳ್ರಿ ಅನ್ನೋ ಮಾತು ಪಡಸಾಲೆಯಲ್ಲಿ ಕೇಳಿ ಬರುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಕೋಳಿ ಜಗಳಬಹಿರಂಗ ಪ್ರಚಾರಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ಇನ್ನೇನಿದ್ದರೂ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ ಇದೆ. ಸಂಪ್ರದಾಯದಂತೆ ಶುಕ್ರವಾರ ಮತ್ತು ಶನಿವಾರ ಕತ್ತಲ್ ರಾತ್ರಿ. ಒಂದೂವರೆ ದಿನದ ತಂತ್ರಗಾರಿಕೆಯೇ ಭಾನುವಾರ ಮತಗಳಾಗಿ ಪರಿವರ್ತನೆಗೊಳ್ಳುತ್ತವೆ ಎನ್ನುವುದು ಪಕ್ಷಗಳ ಅಂಬೋಣ. ಮದ್ಯದ ಸರಬರಾಜು ಸೇರಿದಂತೆ ಮತ ಆಮಿಷ ರಾಜಾರೋಷವಾಗಿ ನಡೆದಿದ್ದರೂ ಇವುಗಳನ್ನು ನಿಯಂತ್ರಿಸಬೇಕಿರುವ ಎಂಸಿಸಿ ತಂಡ ಆಟಕ್ಕುಂಟು ಲೆಕ್ಕಕ್ಕಿಲ್ಲಎನ್ನುವಂತಿದೆ. ಜಿಲ್ಲಾಡಳಿತ ಮೂಲಗಳು ಮಾತ್ರ ಈ ಆರೋಪವನ್ನು ಒಪ್ಪಿಕೊಳ್ಳದೇ ಈವರೆಗೂ ಕನಿಷ್ಠ 15ಕ್ಕೂ ಹೆಚ್ಚು ಕೇಸ್‌ಗಳನ್ನು ದಾಖಲಿಸಿ ಕಾರ್ಯಕ್ಷಮತೆ ನಿರೂಪಿಸಿದೆ ಎಂದು ಸಮರ್ಥಿಸಿಕೊಂಡಿದೆ. ನಾಯಕರಿಲ್ಲದ ಎಲೆಕ್ಷನ್! ಜಿಲ್ಲಾದ್ಯಂತ ಎಲ್ಲಿಯೂ ಪಕ್ಷಗಳ ನಾಯಕರ ಅಬ್ಬರದ ಪ್ರಚಾರದ ಭಾಷಣ ಇಲ್ಲದೇ ಎಲೆಕ್ಷನ್ ಕಳೆಗುಂದಿದೆ ಅನ್ನೋ ಮಾತು ಸಾಮಾನ್ಯವಾಗಿದೆ. ಮೇಲ್ನೋಟಕ್ಕೆ ಇದು ನಿಜವಾಗಿದೆ. ನಾಯಕರ ಆಂತರಿಕ ಗಿಮಿಕ್ ಬಿಂದಾಸ್ ಆಗೇ ಮುಂದುವರಿದಿದೆ. ಪ್ರಚಾರಕ್ಕೆ ಬರದಿದ್ದರೂ ಆಪ್ತರಿಗೆ ಕಾಂಚಾಣ ಮುಟ್ಟಿಸಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ ಎನ್ನುವ ಹಾರೈಕೆ ಬಹಿರಂಗವಾಗಿಯೇ ಕಂಡು ಬರುತ್ತಿದೆ. ಒಟ್ಟಿನಲ್ಲಿ ಗ್ರಾಮ ಸಮರದ ಎರಡನೇ ಹಂತ ಭಾರಿ ಸದ್ದು ಮಾಡುತ್ತಿದೆ. ಚಿಕನ್ ಸೆಂಟರ್‌ಗಳಲ್ಲಿ ಕೋಳಿ ಮತ್ತು ಮಾಂಸ ಮಾರಾಟ ಭರ್ಜರಿಯಾಗಿಯೇ ನಡೆದಿದೆ. ಮದ್ಯದ ಸರಬರಾಜಿಗಂತೂ ಕಡಿವಾಣವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವುದು ಎಲೆಕ್ಷನ್‌ಗೆ ಕಿಕ್ ಕೊಟ್ಟಿದೆ. ಮತ ಹಾಕದ ಮತದಾರರಿಗೆ ಕಂಠಮಟ ಕುಡಿಸಿ ಮನೆಯಲ್ಲೇ ಉಳಿಯುವಂತೆ ಮಾಡುವ ತಂತ್ರಗಾರಿಕೆ ನಿಜಕ್ಕೂ ವರ್ಕೌಟ್ ಆಗುವುದೇ? ಕಾದು ನೋಡಬೇಕಿದೆ.
from India & World News in Kannada | VK Polls https://ift.tt/3huZc3L