
ಹೊಸದಿಲ್ಲಿ: ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಮಸೂದೆ ವಿರೋಧಿಸಿ ದಿಲ್ಲಿಯಲ್ಲಿ ದೇಶದ ನಾನಾ ಸಂಘಟನೆಯ ರೈತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಕೆಲವು ರೈತರು ತೀವ್ರ ತರದ ಪ್ರತಿಭಟನೆ ನಡೆಸುತ್ತಿದ್ದಾರೆ. ಟ್ರ್ಯಾಕ್ಟರ್ ಮೂಲಕ ಪೊಲೀಸರು ಹಾಕಿದ ಬ್ಯಾರಿಕೇಡ್‌ಗಳನ್ನು ರೈತರು ತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆ ಪೊಲೀಸರು ಜಲಫಿರಂಗಿ, ಚಾರ್ಜ್ ಮೂಲಕ ಅನ್ನದಾತರನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಪೊಲೀಸ್ ಸಿಬ್ಬಂದಿಯೊಬ್ಬರು ರೈತರೊಬ್ಬರ ಮೇಲೆ ಲಾಠಿ ಬೀಸುವ ಫೋಟೊವೊಂದು ಭಾರೀ ಸದ್ದು ಮಾಡಿದೆ. ರಾಷ್ಟ್ರೀಯ ಸುದ್ದಿ ಸಂಸ್ಥೆ ಸಿಬ್ಬಂದಿಯೊಬ್ಬರು ತೆಗೆದ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕಾಂಗ್ರೆಸ್ ಪಕ್ಷದವರಾದ ಶಶಿ ತರೂರ್ ಸೇರಿ ಸ್ವತಃ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಫೋಟೊವನ್ನು ಶೇರ್ ಮಾಡಿ, ಪ್ರಧಾನಿ ಮೋದಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಇದೀಗ ಬೇರೆ ಸುದ್ದಿ ಸಂಸ್ಥೆಗಳು ಇದರ ಸತ್ಯಾಂಶ ಹೊರಹಾಕಿದ್ದಾರೆ. ಈ ಸಂಬಂಧ ವಿಡಿಯೊ ಶೇರ್ ಮಾಡಿರುವ ಸುದ್ದಿ ಸಂಸ್ಥೆ ರೈತನಿಗೆ ಒಂದು ಪೆಟ್ಟು ಕೂಡ ಪೊಲೀಸ್ ಸಿಬ್ಬಂದಿ ನೀಡಿಲ್ಲ ಎಂದು ಹೇಳಿದೆ. ವಿಡಿಯೋದಲ್ಲಿ ಏನಿದೆ? ವಿಡಿಯೋದಲ್ಲಿ ರೈತರೊಬ್ಬರು ಅತ್ತ ಕಡೆಯಿಂದ ಓಡಿಕೊಂಡು ಬರುತ್ತಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಹೊಡೆಯುವಂತೆ ಲಾಠಿ ಬೀಸುತ್ತಾರೆ(ಸದ್ಯ ವೈರಲ್ ಆಗುತ್ತಿರುವ ಫೋಟೊ). ಆದರೆ ಅವರಿಗೆ ಹೊಡೆಯುದಿಲ್ಲ, ಕೇವಲ ಬೆದರಿಸುವ ರೀತಿಯಲ್ಲಿ ಲಾಠಿ ಬೀಸುತ್ತಾರೆ, ನಂತರ ಪ್ರತಿಭಟನೆಗೆ ಬಂದಿದ್ದ ರೈತ ಓಡುತ್ತಾರೆ ಮತ್ತೊಮ್ಮೆ ಗಾಳಿಯಲ್ಲಿ ಪೊಲೀಸ್ ಸಿಬ್ಬಂದಿ ಲಾಠಿ ಬೀಸುತ್ತಾರೆ. ರೈತನಿಗೆ ಯಾವುದೇ ರೀತಿಯ ಏಟು ನೀಡುವುದಿಲ್ಲ. ಅಲ್ಲದೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈತ, ನನಗೆ ಪೊಲೀಸರು ಹೊಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ದಿಲ್ಲಿಯಲ್ಲಿ ರೈತರು ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ. ಪ್ರತಿಭಟನೆಗೆ ಇತೀಶ್ರೀ ಹಾಡುವಂತೆ ಕೇಂದ್ರ ಸಚಿವರುಗಳು ಮನವೊಲಿಸಿದರು ಅದು ಸಾಧ್ಯವಾಗಿಲ್ಲ. ಇನ್ನು ಪ್ರತಿಭಟನೆ ಮುಂದುವರಿದಿದೆ.
from India & World News in Kannada | VK Polls https://ift.tt/3qdYrzX