ಮದ್ಯ ಲೈಸೆನ್ಸ್‌ ಮಾರಾಟಕ್ಕೆ ಮೂಗುದಾರ: ಸಿ ಎಲ್-7 ಅಕ್ರಮ ತಡೆಗೆ ಅಬಕಾರಿ ಇಲಾಖೆ ಬ್ರೇಕ್!

ವೆಂ.ಸುನೀಲ್‌ ಕುಮಾರ್‌ ಕೋಲಾರ ಬೆಂಗಳೂರು: ರಾಜ್ಯಾದ್ಯಂತ ಪ್ರವಾಸೋದ್ಯಮದ ಹೆಸರಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಮದ್ಯ ಅನುಮತಿ ನೀಡುವುದಕ್ಕೆ ಸರಕಾರ ಕಡಿವಾಣ ಹಾಕಲು ಮುಂದಾಗಿದೆ. ರಾಜ್ಯ ಸರಕಾರ ಹೊಸ ಮದ್ಯದಂಗಡಿಗಳಿಗೆ ಅನುಮತಿ ಸ್ಥಗಿತಗೊಳಿಸಿದ್ದರಿಂದ ಪ್ರವಾಸೋದ್ಯಮದ ಹೆಸರಿನಲ್ಲಿ ಸಿಎಲ್‌-7 ಸನ್ನದು ಮೂಲಕ ಎಲ್ಲೆಂದರಲ್ಲಿ ಮಾರಾಟ ನಡೆಸಲು ಅವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಜಯ ಕರ್ನಾಟಕವು 'ಮಾರಾಟಕ್ಕಿದೆ ಅಬಕಾರಿ !' ಎಂಬ ಶೀರ್ಷಿಕೆಯಡಿ ಅಕ್ಟೋಬರ್‌ 30ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಅಬಕಾರಿ ಇಲಾಖೆಯು ಸಿಎಲ್‌-7 ಸನ್ನದು ಮಂಜೂರಾತಿಯಲ್ಲಿ ಲೋಪಗಳನ್ನು ಸರಿಪಡಿಸಲು ಮುಂದಾಗಿದೆ. ಸಿಎಲ್‌-7 ಲೈಸೆನ್ಸ್‌ ಪಡೆಯಲು ಹಲವು ನಿಯಮಗಳಿವೆ. ಆದರೆ, ಅಬಕಾರಿ ಸನ್ನದು ಪಡೆಯುವ ಉದ್ದೇಶದಿಂದಲೇ ಪ್ರಸ್ತಾವನೆಯನ್ನು ಸೂಕ್ತ ದಾಖಲಾತಿಗಳಿಲ್ಲದೆ ಸಿದ್ಧಪಡಿಸಿ ಸಲ್ಲಿಸಲಾಗುತ್ತಿತ್ತು. ಕೆಲವು ಅಧಿಕಾರಿಗಳ ಬೆಂಬಲದಿಂದ ಅಕ್ರಮವಾಗಿ ಸನ್ನದು ನೀಡಲಾಗುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಹೊಸ ಸುತ್ತೋಲೆ ಹೊರಡಿಸಿದೆ. ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಅಬಕಾರಿ ಜಿಲ್ಲಾಉಪ ಆಯುಕ್ತರಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ಎಲ್ಲ ರೀತಿಯ ದಾಖಲೆಗಳನ್ನು ಪರಿಶೀಲಿಸಿ ಯಾವುದೇ ಕಾಯಿದೆ ಉಲ್ಲಂಘನೆಯಾಗದಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಖುದ್ದು ಸ್ಥಳ ಪರೀಕ್ಷೆಗೆ ಸೂಚನೆನಿಯಮಗಳ ಉಲ್ಲಂಘನೆ ಗೊತ್ತಿದ್ದೂ ಸನ್ನದು ನೀಡಲು ಶಿಫಾರಸು ಮಾಡಲಾಗುತ್ತಿರುವುದನ್ನು ಗಮನಿಸಿರುವ ಅಬಕಾರಿ ಆಯುಕ್ತರು, ಖುದ್ದು ಸ್ಥಳ ಪರಿಶೀಲನೆಯ ಬಳಿಕವೇ ಅನುಮತಿ ನೀಡಬೇಕು ಎಂದು ಉಪಾಯುಕ್ತರಿಗೆ ಸೂಚಿಸಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ. 16 ಅಂಶಗಳು ಕಡ್ಡಾಯಸಿಎಲ್‌- 7 ಸನ್ನದು ನೀಡಲು 16 ಅಂಶಗಳು ಕಡ್ಡಾಯವೆಂದು ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಸಿಎಲ್‌-7 ನಡೆಸಲು ಉದ್ದೇಶಿತ ಕಟ್ಟಡಕ್ಕೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಿಂದ ವಾಣಿಜ್ಯ ಉದ್ದೇಶಕ್ಕಾಗಿ ಅನುಮತಿ ಪಡೆಯಬೇಕು. ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ, ಸ್ವಚ್ಛತೆ ಹಾಗೂ ಕಟ್ಟಡದಲ್ಲಿ ಅಗ್ನಿಶಾಮಕ ಸೌಲಭ್ಯವನ್ನು ಹೊಂದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಸಿಎಲ್‌-7 ಸನ್ನದಿಗಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ತಹಸೀಲ್ದಾರ್‌ ಅವರಿಂದ ಜನಸಂಖ್ಯೆ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕಾಗಿದೆ. ಜತೆಗೆ ರಾಜ್ಯ/ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಕಾಯಿದೆ ಉಲ್ಲಂಘನೆಯಾಗದಿರುವ ಬಗ್ಗೆ ನಿರಾಕ್ಷೇಪಣಾ ಪತ್ರ ಸಲ್ಲಿಸಬೇಕು. ಭೋಗ್ಯ ಅಥವಾ ಬಾಡಿಗೆಯ ಕಟ್ಟಡವಾಗಿದ್ದಲ್ಲಿ ಕಡ್ಡಾಯವಾಗಿ ಉಪ ನೋಂದಣಾಧಿಕಾರಿಗಳಿಂದ ನೋಂದಣಿ ಆಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ನ್ಯಾಯಾಲಯದಲ್ಲಿ ತಡೆಯಾಜ್ಞೆಯಿರುವುದು ಹಾಗೂ ಸನ್ನದಿಗೆ ಸಂಬಂಧಿಸಿದ ದೂರುಗಳು ಪರಿಹಾರವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ಮಂಜೂರಾತಿಗಾಗಿ ಕೇಂದ್ರ ಕಚೇರಿಗೆ ಕಳುಹಿಸಬೇಕೆಂದು ಸೂಚಿಸಿದ್ದಾರೆ.


from India & World News in Kannada | VK Polls https://ift.tt/3g0x4EA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...