'ಬಾತ್‌ ಬಿಹಾರ್‌ ಕಿ': ಬಿಹಾರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದ ಪ್ರಶಾಂತ್‌ ಕಿಶೋರ್‌

  • ಶಿವಾನಂದ ಹಿರೇಮಠ ಹೊಸದಿಲ್ಲಿ
(ಮಾತು ಬಿಹಾರದ್ದು) ಎಂಬ ಆಂದೋಲನ ಆರಂಭಿಸಿ ಬಿಹಾರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಚುನಾವಣಾ ಚಾಣಕ್ಯ ಆರಂಭದಲ್ಲೇ ತಮ್ಮ ಪ್ರಯತ್ನದಲ್ಲಿ ತಕ್ಕಮಟ್ಟಿನ ಯಶಸ್ಸು ಸಾಧಿಸಿದ್ದಾರೆ. ನಿತೀಶ್‌ ಅವರನ್ನು ವಿವಾದಕ್ಕೆ ಎಳೆದಷ್ಟೂ ಅವರ ವಿರೋಧಿಗಳು ಒಂದಾಗುತ್ತಾರೆ ಎಂಬ ಯೋಚನೆ ಪ್ರಶಾಂತ್‌ ಕಿಶೋರ್‌ ಅವರದ್ದು. ಒಂದೆಡೆ ಕಿಶೋರ್‌ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಂತೆಯೇ ಜೆಡಿಯು-ಬಿಜೆಪಿ ಬಾಂಧವ್ಯ ಮತ್ತಷ್ಟು ಬಲಗೊಂಡಿದೆ. ಇನ್ನೊಂದೆಡೆ ಕಾಂಗ್ರೆಸ್‌, ಸಿಪಿಐ(ಎಂ) ಹಾಗೂ ಆರ್‌ಎಲ್‌ಎಸ್‌ಪಿ ಪಕ್ಷಗಳು ಕಿಶೋರ್‌ ಬೆಂಬಲಕ್ಕೆ ನಿಂತಿವೆ. ಜೆಡಿಯು ದೌರ್ಬಲ್ಯಗಳನ್ನು ಬಹಿರಂಗಪಡಿಸುವುದರ ಜತೆಗೆ ಆ ಪಕ್ಷದ ಮುಖಂಡರನ್ನು ವೈಯಕ್ತಿಕವಾಗಿ ಟೀಕಿಸಿ, ಜೆಡಿಯು ವಿರೋಧಿಗಳನ್ನು ತನ್ನತ್ತ ಸೆಳೆಯುವ ಕಾರ್ಯತಂತ್ರವನ್ನು ಕಿಶೋರ್‌ ರೂಪಿಸಿದ್ದಾರೆ. ಅವರು ಶುಕ್ರವಾರ ಬಿಹಾರದ ಪ್ರತಿಪಕ್ಷಗಳ ನಾಯಕರನ್ನು ಭೇಟಿ ಮಾಡಿರುವುದು ಇದನ್ನು ಪುಷ್ಟೀಕರಿಸಿದೆ. ಗಾಂಧಿ, ಜಯಪ್ರಕಾಶ್‌ ನಾರಾಯಣ, ಲೋಹಿಯಾ ಆದರ್ಶಗಳನ್ನು ಮಾತನಾಡುವ ಸಿಎಂ ನಿತೀಶ್‌ಕುಮಾರ್‌ ಇಂದು ಗೋಡ್ಸೆ ಪರ ವಾದಿಸುವ ಜನರ ಜತೆಗಿದ್ದಾರೆ ಎಂದು ಹೇಳಿಕೆ ನೀಡಿರುವ ಪ್ರಶಾಂತ್‌ ಕಿಶೋರ್‌ ವಿರುದ್ಧ ಜೆಡಿಯು ಮುಖಂಡರು ತಿರುಗಿ ಬಿದ್ದಿದ್ದಾರೆ. ಈ ಬೆಳವಣಿಗೆಯು ಬಿಹಾರದಲ್ಲಿ ಹೊಸ ರಾಜಕೀಯ ತುಷ್ಟೀಕರಣಕ್ಕೆ ನಾಂದಿಯಾಗಿದೆ. ನಿತೀಶ್‌ ಅವರಿಗೆ ತೀರಾ ಹತ್ತಿರವಾಗಿದ್ದ ಪ್ರಶಾಂತ್‌ ಇದ್ದಕ್ಕಿದ್ದಂತೆ ಜೆಡಿಯು ವಿರುದ್ಧವೇ ತೊಡೆ ತಟ್ಟಿರುವುದರ ಹಿಂದೆ ಕಿಶೋರ್‌ ಅವರ ರಾಜಕೀಯ ಮಹತ್ವಾಕಾಂಕ್ಷೆಯೂ ಅಡಗಿದೆ. ವರ್ಷಾಂತ್ಯದಲ್ಲಿ ಬಿಹಾರ ವಿಧಾನಸಭೆ ಚುನಾವಣೆ ಜರುಗಲಿದೆ. ಆ ಹೊತ್ತಿಗೆ ಹೊಸ ರಾಜಕೀಯ ಪಕ್ಷವನ್ನು ಕಿಶೋರ್‌ ಹುಟ್ಟುಹಾಕಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಪೀಠಿಕೆಯಾಗಿಯೇ 'ಬಾತ್‌ ಬಿಹಾರ್‌ ಕಿ' ಎಂಬ ಆಂದೋಲನಕ್ಕೆ ಗುರುವಾರ ಚಾಲನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸುವ ಉದ್ದೇಶದೊಂದಿಗೆ ಆರಂಭವಾಗಿರುವ 'ಬಾತ್‌ ಬಿಹಾರ್‌ ಕಿ' ಆಂದೋಲನವು ಬಿಹಾರದ ಎಲ್ಲಾ ಸ್ತರದ ಜನರ ಜತೆ ಸಂಪರ್ಕ ಸಾಧಿಸುವ ಉದ್ದೇಶ ಹೊಂದಿದೆ. ಈ ಆಂದೋಲನದಿಂದ ತಕ್ಷಣದ ನೇರ ಲಾಭ ಕಿಶೋರ್‌ ಅವರಿಗೆ ಆಗುವುದಿಲ್ಲ. ಆದರೆ ಈಗ ಪ್ರಬಲ ಸಂಘಟನಾ ಜಾಲ ರೂಪಿಸಿಕೊಂಡು, ಅದೇ ಸಂಘಟನಾ ಬಲವನ್ನು ಮುಂಬರುವ ವಿಧಾನಸಭೆ ಚುನಾವಣೆಗೆ ಬಳಸಿಕೊಳ್ಳುವ ಮುಂದಾಲೋಚನೆ ಅವರದ್ದಾಗಿದೆ. "2005ರಲ್ಲಿ ಅಭಿವೃದ್ಧಿ ಸೂಚ್ಯಂಕದಲ್ಲಿ 22ನೇ ಸ್ಥಾನದಲ್ಲಿದ್ದ ಬಿಹಾರ ಈಗಲೂ ಅದೇ ಸ್ಥಾನದಲ್ಲಿದೆ. ಶೈಕ್ಷಣಿಕ ಗುಣಮಟ್ಟ ಸುಧಾರಿಸಿಲ್ಲ. ರಸ್ತೆ ನಿರ್ಮಿಸಿದರೂ ಜನರಲ್ಲಿ ವಾಹನ ಖರೀದಿಸುವ ಸಾಮರ್ಥ್ಯವಿಲ್ಲ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಬಿಹಾರದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಡಿಮೆ. 3.5 ಕೋಟಿ ಬಿಹಾರ ಜನ ಕಡು ಬಡುವರು," ಎಂದು ವೃತ್ತಿಪರ ರಾಜಕಾರಣಿಯಂತೆ ಪ್ರಶಾಂತ್‌ಕಿಶೋರ್‌ ಭಾಷಣ ಶುರುವಿಟ್ಟಿದ್ದಾರೆ. ಪ್ರಶಾಂತ್‌ ಕಿಶೋರ್‌ ಆರೋಪಕ್ಕೆ ಉತ್ತರ ನೀಡಿರುವ ಜೆಡಿಯು, "ಚುನಾವಣಾ ತಂತ್ರಗಾರಿಕೆಯು ಪ್ರಶಾಂತ್‌ ಕಿಶೋರ್‌ ವ್ಯವಹಾರ. ಅವರಿಗೆ ರಾಜಕೀಯ ಬದ್ಧತೆ ತಿಳಿದಿಲ್ಲ. ರಾಜಕಾರಣದಲ್ಲಿ ಚಾಣಕ್ಯ ನೀತಿಯನ್ನು ಕೇವಲ ಲಾಭದ ದೃಷ್ಟಿಯಿಂದ ನೋಡುವಂತದ್ದಲ್ಲ," ಎಂದು ಕಿಡಿಕಾರಿದೆ. "ಪಕ್ಷದಿಂದ ಉಚ್ಚಾಟಿಸುವ ಮೊದಲು ಜೆಡಿಯು ಮತ್ತು ಬಿಜೆಪಿ ಜತೆಗಿದ್ದ ಕಿಶೋರ್‌ ಅವರಲ್ಲಿ ಗೋಡ್ಸೆ ಮತ್ತು ಗಾಂಧೀಜಿಗೆ ಸಂಬಂಧಿಸಿದ ಪ್ರಶ್ನೆಗಳೇ ಉದ್ಭವಿಸಿರಲಿಲ್ಲ. ಗುಜರಾತ್‌ನಲ್ಲಿ ನರೇಂದ್ರ ಮೋದಿ ಅವರ ಜತೆ ಕೆಲಸ ಮಾಡುತ್ತಿದ್ದಾಗ ಅವರ ಈ ಸಿದ್ಧಾಂತಗಳು ಎಲ್ಲಿದ್ದವು," ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ. ಹೀಗೆ ತಮ್ಮ ಹೇಳಿಕೆಗಳಿಗೆ ಪ್ರತಿಕ್ರಿಯಿಸುವಂತೆ ವಿರೋಧಿಗಳನ್ನು ಪ್ರಚೋದಿಸುವ ಮೂಲಕ ತಾವು ಸುದ್ದಿಯಲ್ಲಿರುವುದು ಕೂಡ ಕಿಶೋರ್‌ ತಂತ್ರಗಾರಿಕೆಯ ಭಾಗವೇ ಆಗಿದೆ. ಪ್ರಶಾಂತ್‌ ಕಿಶೋರ್‌ ಚಾಣಕ್ಯತೆಈ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಹಾಗೂ ಜೆಡಿಯು ಜತೆ ಕೆಲಸ ಮಾಡಿರುವ, ಇತ್ತೀಚೆಗೆ ದಿಲ್ಲಿ ವಿಧಾನಸಭೆಯಲ್ಲಿ ಆಪ್‌ ಗೆಲುವಿನ ಕಾರಣೀಕರ್ತರಲ್ಲಿ ಒಬ್ಬರಾಗಿರುವ ಪ್ರಶಾಂತ ಕಿಶೋರ್‌ ಬಿಹಾರದಲ್ಲಿ ರಾಜಕೀಯ ಭದ್ರ ಬುನಾದಿ ಹಾಕಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಬಾಂಗ್ಲಾವಲಸಿಗರು ಹೆಚ್ಚಿರುವ ರಾಜ್ಯಗಳಲ್ಲಿ ಬಿಹಾರವೂ ಒಂದು. ಈ ಕಾರಣದಿಂದಲೇ ಕಿಶೋರ್‌ ಅವರು ರಾಷ್ಟ್ರೀಯ ಪೌರತ್ವ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ ಸಿ) ವಿರುದ್ಧವಾಗಿದ್ದಾರೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿದ್ದು ಆ ಮತಗಳನ್ನು ಸೆಳೆಯುವುದಕ್ಕಾಗಿ ಕಿಶೋರ್‌ ಈಗಿನಿಂದಲೇ ವೇದಿಕೆ ರೂಪಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಬಿಹಾರದಲ್ಲಿ ಜನಜನಿತ. ಈ ಕಾರಣದಿಂದಲೇ ನಿತೀಶ್‌ ವಿರುದ್ದ ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಪ್ರಶಾಂತ್‌ ಕಿಶೋರ್‌ ನಡೆಯಿಂದಾಗಿ ಬಿಹಾರದ ರಾಜಕಾರಣದಲ್ಲಿ ರಂಗು ಮೂಡಿರುವುದಂತೂ ನಿಜ. ರಾಜ್ಯದ ರಾಜಕೀಯ ಚಿತ್ರಣ ಬದಲಿಸುವಲ್ಲಿಅವರು ಎಷ್ಟರಮಟ್ಟಿಗೆ ಸಫಲರಾಗುತ್ತಾರೆ ಎನ್ನುವುದನ್ನು ತಿಳಿಯಲು ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವವರೆಗೂ ಕಾಯಬೇಕು.


from India & World News in Kannada | VK Polls https://ift.tt/3bUysGF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...