ಹೊಸದಿಲ್ಲಿ: (ಪಿಸಿಎಲ್) ಐದನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯು ಆರಂಭವಾಗಿರುವಂತೆಯೇ ವಿವಾದಗಳು ಬೆನ್ನ ಹತ್ತಿದೆ. ಈಗಷ್ಟೇ ಭ್ರಷ್ಟಾಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಆಟಗಾರ ಉಮರ್ ಅಕ್ಮಲ್ ಮೇಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಿಷೇಧವನ್ನು ಹೇರಿತ್ತು. ಇದಾದ ಬೆನ್ನಲ್ಲೇ ಪಾಕಿಸ್ತಾನ ಸೂಪರ್ ಲೀಗ್ ಕೆಟ್ಟ ಕಾರಣಕ್ಕಾಗಿ ಮಗದೊಮ್ಮೆ ವಿವಾದಕ್ಕೊಳಗಾಗಿದೆ. ಪಾಕಿಸ್ತಾನ ಸೂಪರ್ ಲೀಗ್ ಪಂದ್ಯದ ವೇಳೆಯಲ್ಲಿ ಮೈದಾನದ ಹೊರಗಡೆ ಆಟಗಾರರು ಕುಳಿತುಕೊಳ್ಳುವ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಕೆ ಮಾಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಇದರಿಂದಾಗಿ ಮ್ಯಾಚ್ ಫಿಕ್ಸಿಂಗ್ ಕರಿನೆರಳು ಬೀಳುವಂತಾಗಿದೆ. ಶುಕ್ರವಾರದಂದು ಕರಾಚಿ ಕಿಂಗ್ಸ್ ಹಾಗೂ ಪೇಶಾಪರ ಜಾಲ್ಮಿ ನಡುವಣ ಪಂದ್ಯದ ನಡುವೆ ಘಟನೆ ನಡೆದಿತ್ತು. ಪ್ರಾಥಮಿಕ ವರದಿಗಳ ಪ್ರಕಾರ, ಕರಾಚಿ ಕಿಂಗ್ ಸಹಾಯಕ ಸಿಬ್ಬಂದಿ/ಮ್ಯಾನೇಜರ್ ಮೊಬೈಲ್ ಫೋನ್ ಬಳಕೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿಯಮಗಳ ಪ್ರಕಾರ ಡೆಸ್ಸಿಂಗ್ ಕೊಠಡಿಗಳಲ್ಲಿ ಮೊಬೈಲ್ ಫೋನ್‌ಗಳನ್ನು ನಿಷೇಧಿಸಲಾಗಿದೆ. ಅಲ್ಲದೆ ಡ್ರೆಸ್ಸಿಂಗ್ ಕೊಠಡಿಯಿಂದ ಡಗೌಟ್ ಕಡೆಗೆ ಸಂಪರ್ಕಿಸಲು ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳಿಗೆ ವಾಕಿ-ಟಾಕಿಗಳನ್ನು ಬಳಕೆ ಮಾಡಲು ಮಾತ್ರ ಅವಕಾಶವಿರುತ್ತದೆ. ಈ ನಡುವೆ ಮೊಬೈಲ್ ಫೋನ್ ಬಳಕೆ ಬಗ್ಗೆ ಮಾಜಿ ಆಟಗಾರ ಹಾಗೂ ಕರಾಚಿ ಕಿಂಗ್ಸ್ ತಂಡದ ಕೋಚ್ ಡೀನ್ ಜೋನ್ಸ್ ಸಮರ್ಥನೆ ಮಾಡಿದ್ದಾರೆ. ಎಲ್ಲ ಟ್ವೆಂಟಿ-20 ಕ್ರಿಕೆಟ್‌ಗಳಂತೆಯೇ ಮ್ಯಾನೇಜರ್/ಸಿಇಒ ಮೊಬೈಲ್ ಫೋನ್ ಬಳಕೆ ಮಾಡಲು ಅವಕಾಶವಿರುತ್ತದೆ. ಇದರಂತೆ ನಮ್ಮ ಸಿಇಒ ತಾರಿಕ್ ವಾಸಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಐರ್ಲೆಂಡ್ ಆಟಗಾರ ಕೆವಿನ್ ಓಬ್ರಿಯಾನ್ ಸಹ ಮೊಬೈಲ್ ಫೋನ್ ಬಳಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಟೀಮ್ ಮ್ಯಾನೇಜರ್ ಹಾಗೂ ಫಿಸಿಯೋಗೆ ಮೊಬೈಲ್ ಫೋನ್ ಬಳಕೆ ಮಾಡಬಹುದಾಗಿದೆ ಎಂದಿದ್ದಾರೆ. ಇವೆಲ್ಲದರ ನಡುವೆ ತಾರಿಕ್ ವಾಸಿ ಸಂಬಂಧಿಸಿದಂತೆ ವಿಭಿನ್ನ ಹೇಳಿಕೆಗಳು ಮೂಡಿಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ. ಪ್ರಸ್ತುತ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಡುತ್ತಿದ್ದು, ನೆಟ್ಟಿಗರು ಗಂಭೀರ ವಿಮರ್ಶೆ ಮಾಡುತ್ತಿದ್ದಾರೆ. ಇದು ಪಾಕಿಸ್ತಾನ ಸೂಪರ್ ಲೀಗ್ ಆಗಿದ್ದು, ಇಲ್ಲಿ ಏನೇ ಭ್ರಷ್ಟಾಚಾರಗಳು ನಡೆಯಬಹುದು ಎಂದು ವಾಗ್ದಾಳಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಿತ್ತು. ಇದರಂತೆ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಯಶಸ್ವಿ ಪ್ರವಾಸವನ್ನು ಕೈಗೊಂಡಿತ್ತು. ಇದೀಗ ಪಿಸಿಎಲ್ ಯಶಸ್ವಿಯಾಗಿ ಆಯೋಜಿಸುವ ಮೂಲಕ ಜಗತ್ತಿಗೆ ಸ್ಪಷ್ಟ ಸಂದೇಶ ರವಾನಿಸುವ ಇರಾದೆಯಲ್ಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2wEpjBN