ಭೋಪಾಲ್: "ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಕನಿಷ್ಠ ಒಬ್ಬ ಪುರುಷ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಪ್ರತಿ ಆರೋಗ್ಯ ಕಾರ್ಯಕರ್ತನೂ ಉತ್ತೇಜಿಸಬೇಕು. ಇಲ್ಲದಿದ್ದರೆ ನಿಮ್ಮ ವೇತನ ಕಡಿತ ಮಾಡಲಾಗುತ್ತದೆ ಅಥವಾ ಕಡ್ಡಾಯ ನಿವೃತ್ತಿ ನೀಡಲಾಗುತ್ತದೆ,'' - ಇದು ಮಧ್ಯಪ್ರದೇಶದಲ್ಲಿನ ನೇತೃತ್ವದ ಸರಕಾರ ರಾಜ್ಯದ ಬಹು ಉದ್ದೇಶದ ವೈದ್ಯಕೀಯ ಕಾರ್ಯಕರ್ತರಿಗೆ ನೀಡಿದ್ದ ಖಡಕ್ ಆದೇಶ. ಆರೋಗ್ಯ ಇಲಾಖೆ ಕಳೆದ ಫೆ. 1 ರಂದು ಹೊರಡಿಸಿದ್ದ ಈ ಆದೇಶ ವ್ಯಾಪಕ ಟೀಕೆಗೆ ಗುರಿಯಾಗುತ್ತಲೇ ಸರಕಾರ ಅದನ್ನು ಶುಕ್ರವಾರ ಹಿಂಪಡೆದುಕೊಂಡಿದೆ. ರಾಜ್ಯದಲ್ಲಿಆ ಶಾ ಕಾರ್ಯಕರ್ತರಂತೆಯೇ ಬಹುಉದ್ದೇಶದ ಪುರುಷ ವೈದ್ಯಕೀಯ ಕಾರ್ಯಕರ್ತರೂ ಕಾರ್ಯನಿರ್ವಹಿಸುತ್ತಾರೆ. ರಾಜ್ಯ ವೈದ್ಯಕೀಯ ಇಲಾಖೆಯ ತಳಮಟ್ಟದ ನೌಕರರಾದ ಇವರು ಸ್ವಚ್ಛತೆ, ಪೌಷ್ಟಿಕಾಂಶ, ಅಂಟುರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಅಗತ್ಯವಿದ್ದವರಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತಾರೆ. ಕುಟುಂಬ ಯೋಜನೆಯ ಅನುಷ್ಠಾನದ ಹೊಣೆಯನ್ನೂ ಇವರು ನಿರ್ವಹಿಸುತ್ತಾರೆ. ''ಮಧ್ಯಪ್ರದೇಶದ ಶೇ 0.5ರಷ್ಟು ಪುರುಷರು ಮಾತ್ರ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ,'' ಎಂದು ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ವರದಿಯಲ್ಲಿ ಹೇಳಲಾಗಿತ್ತು. ಹೀಗಾಗಿ ಈ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ರಾಜ್ಯ ಆರೋಗ್ಯ ಇಲಾಖೆ ಹಮ್ಮಿಕೊಂಡಿತ್ತು. ಈ ಸಲುವಾಗಿ ವೈದ್ಯಕೀಯ ಕಾರ್ಯಕರ್ತರ ಮೇಲೆ ಒತ್ತಡ ಹೇರಲಾಗಿತ್ತು. ''ಜಿಲ್ಲಾಮಟ್ಟದಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಿದಾಗ, ಪ್ರತಿಯೊಬ್ಬ ವೈದ್ಯಕೀಯ ಕಾರ್ಯಕರ್ತನೂ 5 ರಿಂದ 10 ಪುರುಷರನ್ನು ಶಿಬಿರಕ್ಕೆ ಕರೆತರಬೇಕು,'' ಎಂದು ಸುತ್ತೋಲೆಯಲ್ಲಿ ಸರಕಾರ ತಾಕೀತು ಮಾಡಿತ್ತು. ಆರೋಗ್ಯ ಸಚಿವರ ಸ್ಪಷ್ಟನೆ ರಾಜ್ಯ ಸರಕಾರ ಈ ಸುತ್ತೋಲೆ ಬಗ್ಗೆ ಮರುಪರಿಶೀಲನೆ ಮಾಡಲಿದೆ. ಯಾರನ್ನೂ ಸಂತಾನ ಶಕ್ತಿ ಹರಣಕ್ಕೆ ಬಲವಂತ ಮಾಡುವುದಿಲ್ಲ. ಯಾವ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳುವುದಿಲ್ಲ ಎಂದು ಆರೋಗ್ಯ ಸಚಿವ ತುಳಸಿರಾಮ್ ಸಿಲಾವತ್ ಹೇಳಿದ್ದಾರೆ. ಬಿಜೆಪಿ ಆಕ್ರೋಶ ಸರಕಾರದ ಆದೇಶದ ಬಗ್ಗೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. "ಅಘೋಷಿತ ತುರ್ತು ಪರಿಸ್ಥಿತಿ ಹೇರಿರುವ ರಾಜ್ಯದ ಕಾಂಗ್ರೆಸ್ ಸರಕಾರ, ಜನರನ್ನು ಸಂತಾನ ಶಕ್ತಿ ಹರಣಕ್ಕೆ ಬಲವಂತ ಮಾಡುತ್ತಿದೆ," ಎಂದು ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅಸಮಾಧಾನ ವ್ಯಕ್ತಪಡಿಸಿದ್ದರು.
from India & World News in Kannada | VK Polls https://ift.tt/32eKcPN