ರಾಜ್‌ಕೋಟ್: ಹಿಟ್‌ಮ್ಯಾನ್ ಖ್ಯಾತಿಯ ಭಾರತ ಕ್ರಿಕೆಟ್ ತಂಡದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ , ಮಗದೊಂದು ಸ್ಮರಣೀಯ ಶತಕದ ಹೊಸ್ತಿಲಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆಯಲಿರುವ ದ್ವಿತೀಯ ಟ್ವೆಂಟಿ-20 ಪಂದ್ಯವು ರೋಹಿತ್ ಪಾಲಿಗೆ 100ನೇ ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯವಾಗಿರಲಿದೆ. ಈ ಮೂಲಕ 100 ಟ್ವೆಂಟಿ-20 ಪಂದ್ಯಗಳನ್ನಾಡಿದ ಭಾರತದ ಮೊದಲ ಪುರುಷ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರವಾಗಲಿದ್ದಾರೆ. ಭಾರತದ ಪೈಕಿ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಈಗಾಗಲೇ 100 ಟ್ವೆಂಟಿ-20 ಪಂದ್ಯಗಳ ಗಡಿಯನ್ನು ದಾಟಿದ್ದಾರೆ. ಇನ್ನು ಪುರುಷ ಕ್ರಿಕೆಟಿಗರಲ್ಲಿ ಪಾಕಿಸ್ತಾನದ ಶೋಯಿಬ್ ಮಲಿಕ್ ಅತಿ ಹೆಚ್ಚು 111 ಪಂದ್ಯಗಳನ್ನಾಡಿದ್ದಾರೆ. ದಿಲ್ಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ಸೋಲಿಗೆ ಶರಣಾಗಿತ್ತು. ಆದರೂ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ದಾಖಲೆಗಳನ್ನು ರೋಹಿತ್ ಶರ್ಮಾ ಮುರಿದಿದ್ದರು. ಮಾಜಿ ನಾಯಕ ಧೋನಿ 98 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ರೋಹಿತ್ ಹೆಸರಲ್ಲೀಗ 99 ಪಂದ್ಯಗಳಿವೆ. ಇನ್ನೊಂದೆಡೆ ಪಂದ್ಯದಲ್ಲಿ 9 ರನ್ ಗಳಿಸಿ ಔಟಾದರೂ ವಿರಾಟ್ ದಾಖಲೆ ಮುರಿದಿರುವ ರೋಹಿತ್, ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಹಿರಿಮೆಗೆ ಪಾತ್ರವಾಗಿದ್ದಾರೆ. 99 ಪಂದ್ಯಗಳನ್ನಾಡಿರುವ ರೋಹಿತ್ 31.84ರ ಸರಾಸರಿಯಲ್ಲಿ 2452 ರನ್ ಪೇರಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಸೇರಿವೆ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿರುವ ಹಿನ್ನಲೆಯಲ್ಲಿ ನಾಯಕತ್ವ ಜವಾಬ್ದಾರಿವನ್ನು ರೋಹಿತ್ ಶರ್ಮಾ ವಹಿಸಿದ್ದಾರೆ. ಇದೀಗ ಸರಣಿ ಗೆಲ್ಲಲು ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2NNy01k